ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಮೈಸೂರು ದಸರಾದಲ್ಲಿ ಏರ್ ಶೋಗೆ ಗ್ರೀನ್ ಸಿಗ್ನಲ್
ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ,
ಮೈಸೂರು ದಸರಾದಲ್ಲಿ ಏರ್ ಶೋಗೆ ಗ್ರೀನ್ ಸಿಗ್ನಲ್
ಮೈಸೂರು, ಅ.6. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಂದಿಸಿದ್ದು, ಈ ಬಾರಿಯ ಮೈಸೂರು ದಸರಾದಲ್ಲಿ ಏರ್ ಶೋಗೆ ಕೇಂದ್ರ ಅನುಮತಿ ನೀಡಿದೆ. ಹೀಗಾಗಿ ಜಿಲ್ಲಾಧಿಕಾರಿ ರಾಜೇಂದ್ರ ಅವರು ಇಂದು ಬನ್ನಿಮಂಟಪ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೇ ಮೈಸೂರು ಏರ್ ಬೇಸ್ ಗ್ರೂಪ್ ಕ್ಯಾಪ್ಟನ್ ಡಿ.ಕೆ. ಹೋಜಾ ಅವರಿಗೆ ಚರ್ಚೆ ನಡೆಸಿದರು.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್ ಶೋ ಆಯೋಜನೆಗೆ ಅನುಮತಿ ನೀಡುವಂತೆ ಸಿದ್ದರಾಮಯ್ಯ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಸಿಎಂ ಅವರ ಮನವಿಗೆ ಕೇಂದ್ರ ಸ್ಪಂದಿಸಿದ್ದು, ಮೈಸೂರು ದಸರಾ ವೇಳೆ ಏರ್ ಶೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾ ವೇಳೆ ಪ್ರವಾಸಿಗರು ಹಾಗೂ ಮೈಸೂರಿಗರು ಏರ್ ಶೋ ಕಣ್ತುಂಬಿಕೊಳ್ಳಬಹುದಾಗಿದೆ. ಆದ್ರೆ, ಏರ್ ಶೋ ಎಲ್ಲಿ? ಯಾವಾಗಿನಿಂದ ಪ್ರಾರಂಭವಾಗಲಿದೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಏರ್ ಬೇಸ್ ಅಧಿಕಾರಿಗಳು ಚರ್ಚಿಸಿ ಮಾಹಿತಿ ನೀಡಲಿದ್ದಾರೆ.
2017 ಮತ್ತು 2019 ರಲ್ಲಿ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ವಾಯುಪಡೆ ವಿಶೇಷ ಏರ್ ಶೋ ನಡೆಸಿತ್ತು. ಬಹಳಷ್ಟು ಜನರು ಇದನ್ನು ನೋಡಿ ಇಷ್ಟಪಟ್ಟಿದ್ದರು. ಈ ವರ್ಷವೂ ವಾಯುಪಡೆಗಳಿಂದ ವಿಶೇಷ ಏರ್ ಶೋ ನಡೆಸಲು ನಿರ್ದೇಶಿಸಬೇಕು ಎಂದು ಸಿದ್ದರಾಮಯ್ಯನವರು ರಾಜನಾಥ್ ಸಿಂಗ್ಗೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ರಾಮನಾಥ್ ಸಿಂಗ್ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು
Post a Comment