ಬಡತನ ಮೆಟ್ಟಿ ನಿಂತು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ತಂದ ಯುವತಿ.
ಬಟ್ಟೆ ಒಗೆದು ಇಸ್ಟ್ರಿ ಮಾಡೋ ಕಾಯಕದ ಜೊತೆ ಟೀ ಅಂಗಡಿಯೊಂದನ್ನು ಇಟ್ಟುಕೊಂಡು, ಅದರಿಂದ ಬಂದ ಆದಾಯದಿಂದಲೇ ಜೀವನ ಮಾಡುವುದು ಆಕೆಯ ಕುಟುಂಬದ ನಿತ್ಯದ ಕಾಯಕ.. ತಂದೆ-ತಾಯಿ ಇವರ್ಯಾರು ಓದಿಲ್ಲ, ಬರೆದಿಲ್ಲ. ಆದ್ರೂ, ಆಕೆಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಹಠ. ಬಡತನದಲ್ಲಿ ಹುಟ್ಟಿ ಬೆಳೆದು ಬಳ್ಳಾರಿ ಜಿಲ್ಲೆಯ ಕುಗ್ರಾಮದ ಯುವತಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚನ್ನು ಪಡೆದಿದ್ಧಾಳೆ. ಹಠ ಬಿಡದ ಗಟ್ಟಿಗಿತ್ತಿಯ ಸಾಧನೆಯ ಕತೆ ಇಲ್ಲಿದೆ ನೋಡಿ
ಬಡತನ ಮೆಟ್ಟಿ ನಿಂತು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ತಂದ ಯುವತಿ; ಹಠ ಬಿಡದ ಗಟ್ಟಿಗಿತ್ತಿಯ ಸಾಧನೆಯ ಕತೆ ಇಲ್ಲಿದೆ
ಹೆಪ್ಟಥ್ಲಾನ್ನಲ್ಲಿ ಕಂಚು ತಂದ ಯುವತಿ
ಬಳ್ಳಾರಿ, ಅ.14: ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ ಭರ್ಜರಿ ಸಾಧನೆ ಮಾಡಿದ್ದಾರೆ. ಬಟ್ಟೆ ಒಗೆಯುವ ಕಾಯಕ ಮಾಡುವ ಪೋಷಕರ ಮಗಳಾದ ನಂದಿನಿ ಅವರ ಸಾಧನೆಗೆ ಎಲ್ಲೇಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಹೌದು, ಏಷ್ಯನ್ ಗೇಮ್ಸ್ ನಲ್ಲಿ ಹೆಪ್ಟಥ್ಲಾನ್ನಲ್ಲಿ ಕಂಚು ಪಡೆಯುವ ಮೂಲಕ ನಂದಿನ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಈ ಯುವತಿ ಉತ್ತಮ ನಿದರ್ಶನವಾಗಿದ್ದಾರೆ.
ಇನ್ನು ಜೀವನ ನಿರ್ವಹಣೆ ಮಾಡಲು ಹುಟ್ಟೂರು ಬಳ್ಳಾರಿ ಜಿಲ್ಲೆಯ ರಾರಾವಿ ಗ್ರಾಮದಲ್ಲಿ ಕಷ್ಟವಾದ ಹಿನ್ನೆಲೆ ನಂದಿನಿಯವರ ತಂದೆ ಯಲ್ಲಪ್ಪ ಮತ್ತು ತಾಯಿ ಆಯಮ್ಮ ಅವರು ನಂದಿನಿ ಚಿಕ್ಕ ಮಗುವಾಗಿದ್ದಲೇ ಆಕೆಯನ್ನು ಕರೆದುಕೊಂಡು ಹೈದ್ರಬಾದ್ನಲ್ಲಿರುವ ಸಿಕ್ರಂದ್ರಾಬಾದ್ಗೆ ಹೋಗಿದ್ದರು. ಸಹೋದರನ ಮನೆಯಲ್ಲಿದ್ದ ಯಲ್ಲಪ್ಪ, ಚಿಕ್ಕ ಟೀ ಅಂಗಡಿಯೊಂದನ್ನು ಮಾಡಿಕೊಂಡಿದ್ದರು. ತಾಯಿ ಅಯ್ಯಮ್ಮ ಅವರು ಮನೆ ಮನೆಗೆ ತೆರಳಿ ಬಟ್ಟೆ ಒಗೆದು ಇಸ್ತ್ರಿ ಮಾಡುವ ಕಾಯಕ ಮಾಡುತ್ತಿದ್ದರು. ಇದೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ನಂದಿನಿ ಏಷ್ಯನ್ ಕ್ರೀಡಾಕೂಟದಲ್ಲಿ ಹೆಪ್ಟಥ್ಲಾನ್ನಲ್ಲಿ ಕಂಚು ಪಡೆದಿದ್ದಾರೆ.
ಇನ್ನು ನಂದಿನಿ ಅವರ ಸಾಧನೆ ಹಿನ್ನೆಲೆ ಬಳ್ಳಾರಿಯಲ್ಲಿಂದು ಆಕೆಗೆ ತವರಿನಲ್ಲಿ ಸನ್ಮಾನ ಮಾಡಲಾಯಿತು. ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಭಾರತಕ್ಕೆ ಕಂಚು ತಂದಿರುವ ನಂದಿನಿ ಅವರ ಸಾಧನೆ ಕೊಂಡಾಡುವ ಮೂಲಕ ಪ್ರತಿಯೊಬ್ಬರಿಗೂ ಅವರ ಜೀವನ ಮಾದರಿ ಎಂದರು. ಅಲ್ಲದೇ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ತಮ್ಮ ಪೌಂಡೇಷನ್ ಮೂಲಕ ನಂದಿನಿ ಅವರ ಮುಂದಿನ ತರಬೇತಿಯ ಸಹಾಯಕ್ಕಾಗಿ ಮೂರು ಲಕ್ಷ ನಗದು ಹಣವನ್ನು ನೀಡಿದರು.
ಇನ್ನು ನಂದಿನಿಯವರು ಮಾತನಾಡಿ ‘ ಹುಟ್ಟು ಬಡತನವಾಗಿರಬಹುದು ಆದರೆ, ಸಾವು ಮಾತ್ರ ಸಿರತನ ಮತ್ತು ಸಾಧನೆಯ ಮೂಲಕ ಆಗಿರಬೇಕು ಎಂದರು. ಅದರಂತೆ ಬಡತನ ಮೆಟ್ಟಿನಿಂತು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದೆ ಓಲಂಪಿಕ್ ಕ್ರೀಡಾಕೂಡದಲ್ಲಿಯೂ ಸಾಧನೆ ಮಾಡಬೇಕೆನ್ನುವ ಹಂಬಲ ಈಡೇರಲಿ ಎನ್ನುವುದು ಇಡೀ ಭಾರತೀಯರ ಆಶಯವಾಗಿದೆ.
Post a Comment