ಬಿಜೆಪಿಯ ಮತ್ತೆರಡು ವಿಕೆಟ್ ಪತನ, ಕೇಸರಿ ಪಡೆಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜಗದೀಶ್ ಶೆಟ್ಟರ್
ಬೆಂಗಳೂರು, (ಅಕ್ಟೋಬರ್ 12): ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಸೋಲಿಸಲು ಪಣ ತೊಟ್ಟಿವೆ. ಆದ್ರೆ, ಎರಡೂ ಪಕ್ಷಗಳಲ್ಲಿ ಭಿನ್ನಮತ ಶುರುವಾಗಿದ್ದು, ಒಬ್ಬೊಬ್ಬ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಹೌದು…ಇದೀಗ ಬಿಜೆಪಿಯ ಎರಡು ಹಾಗೂ ಜೆಡಿಎಸ್ನ ಒಂದು ವಿಕೆಟ್ ಪತನವಾಗಿದೆ. ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಶಿರಹಟ್ಟಿಯ ರಾಮಪ್ಪ ಲಮಾಣಿ ಕೈ ಹಿಡಿಯಲು ಸಜ್ಜಾಗಿದ್ದಾರೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಸಹ ಕಾಂಗ್ರೆಸ್ ಸೇರಲಿದ್ದಾರೆ. ಇದರೊಂದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಎಂ.ಪಿ. ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ನಿನ್ನೆ (ಅ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದು, ಇಂದು ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಪೂರ್ಣಿಮಾ ಶ್ರೀನಿವಾಸ್ ಮತ್ತು ಎಂಪಿ ಕುಮಾರಸ್ವಾಮಿ ಅಕ್ಟೋಬರ್ 20ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಬದಲಿಗೆ ದೀಪಕ್ ದೊಡ್ಡಯ್ಯಗೆ ಟಿಕೆಟ್ ನೀಡಲಾಗಿತ್ತು. ಅದೇ ರೀತಿ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ಹಾಲಿ ಶಾಸಕರಾಗಿದ್ದ ರಾಮಪ್ಪ ಲಮಾಣಿ ಬದಲಿಗೆ ಚಂದ್ರು ಲಮಾಣಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಈ ಇಬ್ಬರು ಅಸಮಾಧಾನಗೊಂಡಿದ್ದರು.
ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ಗೆ ಪುರ್ಣಿಮಾ ಅವರ ಪತಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿದೆ. ಇನ್ನು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡದಿದ್ದರಿಂದ ಅಸಮಧಾನಗೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಪೂರ್ಣಿಮಾ ಅವರು ಬಿಜೆಪಿಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.
ಜಗಧೀಶ ಶೆಟ್ಟರ್ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೇ ಅಗೌರವ ರೀತಿಯಿಂದ ನಡೆಸಿಕೊಂಡಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್, ಆಪರೇಷನ್ ಹಸ್ತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿರಿಯ ನಾಯಕ ಎನ್ನದೇ ಅಗೌರವದಿಂದ ಕಂಡಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿರುವ ಶೆಟ್ಟರ್, ಒಬ್ಬೊಬ್ಬರನ್ನೇ ಕಾಂಗ್ರೆಸ್ಗೆ ಕರೆದುಕೊಂಡು ಬರುತ್ತಿದ್ದಾರೆ. ಈಗಾಗಲೇ ರಾಮಪ್ಪ ಲಮಾಣಿ, ಎಂಪಿ ಕುಮಾರಸ್ವಾಮಿ ಅವರನ್ನು ತಮ್ಮ ಮಧ್ಯಸ್ಥಿಕೆ ಮೇಲೆ ಕಾಂಗ್ರೆಸ್ಗೆ ಕರೆದುಕೊಂಡು ಬರುತ್ತಿದ್ದಾರೆ. ಈಗಾಗಲೇ ಈ ಇಬ್ಬರು ನಾಯಕರನ್ನು ಸಿದ್ದರಾಮಯ್ಯ ಬಳಿ ಕಡೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ. ಹಾಗೇ ಮಾಜಿ ಸಿಎಂ ಯಡಿಯೂರಪ್ಪನವರ ಸಂಬಂಧಿ ಚಿಕ್ಕನಗೌಡರ್ ಅವರ ಜೊತೆ ಸಹ ಶೆಟ್ಟರ್ ಮಾತುಕತೆ ಮಾಡಿದ್ದಾರೆ. ಹೀಗೆ ಇನ್ನಷ್ಟು ಬಿಜೆಪಿ ನಾಯಕರಿಗೆ ಅವರು ಗಾಳ ಹಾಕಿದ್ದು, ಮುಂದಿನ ದಿನಗಳಲ್ಲಿ ಅವರನ್ನೂ ಸಹ ಕಾಂಗ್ರೆಸ್ಗೆ ಸೇರಿಸಲಿದ್ದಾರೆ. ಇದರೊಂದಿಗೆ ಬಿಜೆಪಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಶುರುವಾಗಿದೆ. ಅದರಲ್ಲೂ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
Post a Comment