ಅಯ್ಯೋ ವಿಧಿಯೇ… ದಸರಾಗೆ ಬಂದವರ ಮೇಲೆ ಹರಿದ ಕಾರು… ಮೃತಪಟ್ಟ ರೂಪಶ್ರೀ ಕುಲಾಲ್ ಅಂಬ್ರಾಡರಿ ಡಿಸೈನರ್.

ಮಂಗಳೂರು: ದೇಶದ ಮೂಲೆ ಮೂಲೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ದಸರಾ ಹಬ್ಬಕ್ಕೆ ಜಗತ್ತಿನಲ್ಲಿ ಖ್ಯಾತಿ ಪಡೆದ ಕರ್ನಾಟಕದಲ್ಲಿ ಸಂತೋಷ ತುಸು ಹೆಚ್ಚಾಗಿದೆ. ಎಲ್ಲೆಲ್ಲೂ ಸಂಭ್ರಮ ಮೇಳೈಸಿದೆ. ಇದೇ ರೀತಿ ಕರಾವಳಿ ನಗರಿ ಮಂಗಳೂರಿನಲ್ಲೂ ದಸರಾ ಹಬ್ಬಕ್ಕಾಗಿ ಪ್ರವಾಸಿಗರು ಬರುತ್ತಿದ್ದಾರೆ. ಆದ್ರೆ ಹೀಗೆ ಬಂದ ಪ್ರವಾಸಿಗರ ಮೇಲೆಯೇ ಇಂದು ಕಾರು ಹರಿದುಬಿಟ್ಟಿದೆ.

ಹೌದು ದಸರಾ ಹಿನ್ನೆಲೆ ಪ್ರಸಿದ್ಧ ಕುದ್ರೋಳಿಯ ದೇಗುಲಕ್ಕೆ ಬಂದು, ಮನೆಗೆ ಹಿಂದಿರುಗುತ್ತಿದ್ದ ಯುವತಿಯರ ಮೇಲೆ ಕಾರು ಹರಿದ ಪರಿಣಾಮ ಯುವತಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಮಣ್ಣಗುಡ್ಡದಲ್ಲಿ ಇಂದು ಸಂಜೆ ವೇಳೆಗೆ ಈ ದುರ್ಘಟನೆ ವರದಿಯಾಗಿದೆ. ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟ ನಿವಾಸಿ. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು ಬಾಳ ಚೇಲ್ಯಾರು ನಿವಾಸಿ ಗಂಗಾಧರ್ ಮತ್ತು ಶಾರದಾ ದಂಪತಿ ಪುತ್ರಿ, ಬಿ.ಎ. ಪದವೀಧರೇ ಆಗಿರುವ ರೂಪಾಶ್ರೀ  ಅಂಬ್ರಾಡರಿ ಡಿಸೈನರ್ ಆಗಿದ್ದು, ಯುವತಿಗೆ ಮನೆಯಲ್ಲಿ ವಿವಾಹಕ್ಕೆ ಹುಡುಗನ ಹುಡುಕಾಟ ಮಾಡುತ್ತಿದ್ದರು.

ಯುವತಿ ಜೀವ ತೆಗೆದ ಕಾರು

 ನಾಲ್ವರು ಹುಡುಗಿಯರು ಜೊತೆಯಾಗಿ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ಸಂಜೆಯ ವೇಳೆ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಮರಳಿ ಮನೆಗೆ ಲೇಡಿಹಿಲ್‌ನಲ್ಲಿ ಬಸ್ ಹತ್ತಲು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದರು. ಅವರು ಮಣ್ಣಗುಡ್ಡಕ್ಕೆ ಬರುತ್ತಿದ್ದಂತೆಯೇ ಹಿಂಬದಿಯಿಂದ ನುಗ್ಗಿ ಬಂದ ಕಾರು, ಫುಟ್ ಪಾತ್ ನಲ್ಲಿ ನಡೆದು ಹೋಗುತ್ತಿದ್ದ ಯುವತಿಯರ ಗುಂಪಿನ ಮೇಲೆ ನುಗ್ಗಿ ಬಂದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರೂಪಶ್ರೀ ಅವರನ್ನು ತಕ್ಷಣ ಸ್ಥಳೀಯರು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರಾದೃಷ್ಟವಶಾತ್ ಯುವತಿ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಆದರೆ ಇತರರು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.

ಕಾರು ಸಂಪೂರ್ಣ ಚಾಲಕನ ನಿಯಂತ್ರಣ ತಪ್ಪಿ ಯುವತಿಯರ ಮೇಲೆ ಹರಿದಿದ್ದು, ಅಪಘಾತದ ಭೀಕರ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಲ್ವರು ಯುವತಿಯರಿಗೆ ಈ ಕಾರು ಡಿಕ್ಕಿಯಾದ ನಂತರ, ರಸ್ತೆ ದಾಟುತ್ತಿದ್ದ ಮಹಿಳೆಗೂ ಡಿಕ್ಕಿಯಾಗಿದೆ. ಈ ಘಟನೆಯಿಂದ ಮಹಿಳೆ ಕೂಡ ಗಾಯಗೊಂಡಿದ್ದಾರೆ. ಇನ್ನು ಕಾರು ಚಾಲಕ ಅಪಘಾತ ಬಳಿಕ ಕಾರು ನಿಲ್ಲಿಸದೆ ಮಣ್ಣಗುಡ್ಡದ ತನ್ನ ಮನೆಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಮನೆಗೆ ಹೋಗಿ ತಂದೆ ಜೊತೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದಾನೆ. ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

No comments

Powered by Blogger.