ನಿಮ್ಮ ಮೊಬೈಲ್ಗೆ ಎಮರ್ಜೆನ್ಸಿ ಅಲರ್ಟ್ ಬಂದಿದ್ದರೆ ಗಾಬರಿ ಬೇಡ; ಇದು ಸೆಲ್ ಬ್ರಾಡ್ಕ್ಯಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ.
ನಿಮ್ಮ ಮೊಬೈಲ್ಗೆ ನಾಳೆ, ಅಕ್ಟೋಬರ್ 12ರಂದು ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬರಬಹುದು. ಇಂದೇ ಕೆಲವರಿಗೆ ಬಂದಿದ್ದಿರಲೂಬಹುದು. ‘ಎಮರ್ಜೆನ್ಸಿ ಅಲರ್ಟ್: ಎಕ್ಸ್ಟ್ರೀಮ್’ ಎಂದು ಹೆಡಿಂಗ್ನಲ್ಲಿ ಇರುವ ಮೆಸೇಜ್ ನೋಡಿ ಗಾಬರಿ ಆಗದಿರಿ. ಇದು ಸರ್ಕಾರದಿಂದಲೇ ಕಳುಹಿಸುವ ಸ್ಯಾಂಪಲ್ ಮೆಸೇಜ್. ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಹೊರಡಿಸಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸುವ ಒಂದು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಅದರ ಪ್ರಯೋಗಾರ್ಥ ಸ್ಯಾಂಪಲ್ ಮೆಸೇಜ್ಗಳನ್ನು ಕಳುಹಿಸಲಾಗುತ್ತದೆ. ಕಳೆದ ಸೆಪ್ಟೆಂಬರ್ 15ರಂದೂ ಇಂಥದ್ದೇ ಒಂದು ಪ್ರಯೋಗ ನಡೆದಿತ್ತು. ಇದೀಗ ಅಕ್ಟೋಬರ್ 12ರಂದು ಮತ್ತೊಮ್ಮೆ ಟೆಸ್ಟ್ ಮೆಸೇಜ್ ಬರಲಿದೆ.
‘ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕ್ಯಾಸ್ಟಿಂಗ್ ಸಿಸ್ಟಂ ಮೂಲಕ ಕಳುಹಿಸಲಾದ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದು. ಈ ಸಂದೇಶಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಅಲರ್ಟ್ ನೀಡಲು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ.’
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದೊಂದಿಗೆ ಸಹಭಾಗಿತ್ವದಲ್ಲಿ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್ಕ್ಯಾಸ್ಟಿಂಗ್ ಸಿಸ್ಟಂನ ಟ್ರಯಲ್ ಟೆಸ್ಟಿಂಗ್ ಅನ್ನು ಅಕ್ಟೋಬರ್ 12ರಂದು ನಡೆಸುತ್ತಿದೆ. ಧ್ವನಿ ಮತ್ತು ವೈಬ್ರೇಶನ್ವೊಂದಿಗೆ ನಿಮ್ಮ ಮೊಬೈಲ್ಗೆ ಟೆಸ್ಟ್ ಅಲರ್ಟ್ ಮೆಸೇಜ್ಗಳು ಬರಬಹುದು. ಈ ಅಲರ್ಟ್ಗಳು ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿ ಇರಲಿವೆಯೇ ಹೊರತು ನಿಜವಾದ ತುರ್ತು ಸ್ಥಿತಿ ಎಂದು ಭಾವಿಸಬಾರದು ಎಂದು ವಿವರಣೆ ನೀಡಲಾಗಿದೆ.
ಹಲವು ಮಂದಿಗೆ ಈಗಾಗಲೇ ಈ ರೀತಿಯ ಅಲರ್ಟ್ ಮೆಸೇಜ್ಗಳು ಬಂದಿವೆ. ಕೆಲವರು ತುರ್ತು ಸ್ಥಿತಿ ಏನಿರಬಹುದು ಎಂದು ಗಾಬರಿಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದುಂಟು.
ಏನಿದು ಸೆಲ್ ಬ್ರಾಡ್ಕ್ಯಾಸ್ಟ್ ಅಲರ್ಟ್ ಸಿಸ್ಟಂ?
ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ ಇತ್ಯಾದಿ ವಿಪತ್ತುಗಳು ಎದುರಾದಾಗ ಅಥವಾ ಎದುರಾಗುವ ಸಂಭವನೀಯತೆ ಇದ್ದಾಗ ನಿರ್ದಿಷ್ಟ ಪ್ರದೇಶಗಳಲ್ಲಿರುವ ಎಲ್ಲಾ ಜನರ ಮೊಬೈಲ್ಗಳಿಗೆ ಅಲರ್ಟ್ ಮೆಸೇಜ್ಗಳನ್ನು ಕಳುಹಿಸುವುದು ಈ ಅತ್ಯಾಧುನಿಕ ಸಿಸ್ಟಂನ ಉದ್ದೇಶ. ವಿಪತ್ತು ಬಂದಿರುವ ಪ್ರದೇಶಕ್ಕೆ ಪ್ರವಾಸಿಗರು ಹೋಗಿದ್ದರೆ ಅವರ ಮೊಬೈಲ್ಗೂ ಅಲರ್ಟ್ ಮೆಸೇಜ್ ಬರುತ್ತದೆ.
ಹೀಗಾಗಿ, ಒಂದೊಂದು ಪ್ರದೇಶಕ್ಕೆ ಸೀಮಿತವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಪರೀಕ್ಷಾರ್ಥವಾಗಿ ಅಲರ್ಟ್ ಮೆಸೇಜ್ಗಳು ಬರಬಹುದು. ಅಧಿಕೃತವಾಗಿ ಈ ಸಿಸ್ಟಂ ಜಾರಿಗೆ ಬರುವವರೆಗೂ ಜನರು ಈ ಮೆಸೇಜ್ಗಳನ್ನು ನಿರ್ಲಕ್ಷಿಸಬಹುದು.
Post a Comment