ಮಹಿಷ ದಸರಾ ಆಚರಣೆಗೆ ಬಿಜೆಪಿ ಎಸ್ಸಿ ಮೋರ್ಚಾ ಬೆಂಬಲ, ಬಿಜೆಪಿ ನಾಯಕರಿಗೆ ಕಸಿವಿಸಿ.
ಮೈಸೂರು, ಅ.11: ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ ಬೆನ್ನಿಗೇ ಮಹಿಷ ದಸರಾ ಪರವಾಗಿ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಹಿಷ ದಸರಾಕ್ಕೆ ಬಿಜೆಪಿಯ ಎಸ್ಸಿ ಮೋರ್ಚಾ ಬುಧವಾರ ಬಹಿರಂಗ ಬೆಂಬಲ ಘೋಷಿಸಿದ್ದು ಬಿಜೆಪಿ ವರಿಷ್ಠರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಇದರ ಬೆನ್ನಿಗೇ ‘‘ಬಿಜೆಪಿ ಹೆಸರನ್ನು ಬಳಸಿಕೊಂಡು ಸಂಸದ ಪ್ರತಾಪ ಸಿಂಹ ಮಹಿಷ ದಸರಾಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ವಿಚಾರ ಪಕ್ಷದ ಕೋರ್ ಕಮಿಟಿ ಯಲ್ಲಿ ಚರ್ಚೆಯೇ ಆಗಿಲ್ಲ. ಹಾಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಮಹಿಷ ದಸರಾಗೆ ಅವಕಾಶ ನೀಡಬೇಕು’’ ಎಂದು ಬಿಜೆಪಿ ಮುಖಂಡ ಗಿರಿಧರ್ ಒತ್ತಾಯಿಸಿದ್ದಾರೆ.
‘ಮಹಿಷ ದಸರಾ ಆಚರಿಸುವವರನ್ನು ತುಳಿದು ಹಾಕುತ್ತೇವೆ’’ ಎಂಬ ಪ್ರತಾಪ ಸಿಂಹ ಇತ್ತೀಚೆಗೆ ನೀಡಿದ ಹೇಳಿಕೆ ತೀವ್ರ ಟೀಕೆ, ವಿವಾದಕ್ಕೆ ಕಾರಣವಾಗಿತ್ತು.
ದಲಿತರುಮಹಿಷ ದಸರಾಆಚರಣೆ ಮಾಡುತ್ತಿರುವುದ ನ್ನು ಸಂಸದ ಪ್ರತಾಪಸಿಂಹ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ಅವರು ಮಹಿಷ ದಸರಾ ವಿರೋಧಿಸುತ್ತಿರುವುದು. ಈತ ನೂರಕ್ಕೆ ನೂರರಷ್ಟು ದಲಿತ ವಿರೋಧಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಆರೋಪಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮೈಸೂರು ನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿ.ಈಶ್ವರ್ ಮಾತನಾಡಿ, ಸಂಸದ ಪ್ರತಾಪ ಸಿಂಹ ಒಬ್ಬ ದಲಿತ ವಿರೋಧಿ. ಆ ಕಾರಣಕ್ಕಾಗಿಯೇ ಮಹಿಷ ದಸರಾ ಆಚರಣೆ ಮಾಡುವವರನ್ನು ತುಳಿದು ಹಾಕುತ್ತೇನೆ, ಹೊಸಕಿ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ.ಮೈಸೂರು ಪ್ರಾಂತದ ದಲಿತರ ರಕ್ಷಣಾ ಕೇಂದ್ರವಾದ ನಮ್ಮ ಅಶೋಕಪುರಂ ಬಗ್ಗೆ ಮತ್ತು ದಲಿತ ಮುಖಂಡರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇವರಿಗೆ ಮೈಸೂರಿನ ಮತ್ತು ಅಶೋಕಪುರಂನ ಇತಿಹಾಸ ಏನು ಗೊತ್ತು ಎಂದು ಪ್ರಶ್ನಿಸಿದರು.
ನಾವು ಕಳೆದ 30 ವರ್ಷಗಳಿಂದ ಮೈಸೂರು ನಗರದಲ್ಲಿ ಬಿಜೆಪಿ ಕಟ್ಟಲು ದುಡಿದಿದ್ದೇವೆ. ಈತ ಚುನಾವಣೆಗಾಗಿ ಕಳೆದ 9 ವರ್ಷಗಳಲ್ಲಿ ಮೈಸೂರಿಗೆ ಬಂದಿರುವುದು. ಈತನಿಗೆ ಮೈಸೂರಿನ ಬಗ್ಗೆ, ಮಹಿಷನ ಇತಿಹಾಸದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ ಸಿಂಹನ ಹೇಳಿಕೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈಗ ಮತ್ತಷ್ಟು ಹಿನ್ನಡೆಯಾಗಲಿದೆ. ಹಾಗಾಗಿ ಈತನ ಹೇಳಿಕೆ, ನಡವಳಿಕೆಗಳ ವಿರುದ್ಧ ಬಿಜೆಪಿ ವರಿಷ್ಠರಿಗೆ ದೂರು ನೀಡಲಿದ್ದೇವೆ ಎಂದು ಹೇಳಿದರು.
Post a Comment