ಇಸ್ರೋ ವಿಜ್ಞಾನಿ ಮನೆಗೆ ಐ ಲೇಸಾದ ಭೇಟಿ, ಕಲಾಂ ಹುಟ್ಟಿದ ಹಬ್ಬ.
-----------------------------------------
ಸತ್ಯ ಅವರಿಗೆ ಸಂಗೀತ ಮತ್ತು ಸಾಹಿತ್ಯ ಅತ್ಯಂತ ಪ್ರೀತಿಯ ಸಂಗಾತಿಗಳು . ಕೆಲಸದ ಒತ್ತಡವನ್ನು ಅವರು ತಮ್ಮ ಸಾಹಿತ್ಯದ ಕೆಲಸಗಳಿಂದ ಹಗುರಗೊಳಿಸುತ್ತಿದ್ದರು. ಚೆನ್ನಾಗಿ ಹಾಡುವವರು ಕೂಡಾ. ಅವರು ''ಅಳಿವಿಲ್ಲದ ಸ್ಥಾವರ'' ಕೃತಿಗಾಗಿ ತುಂಬಾ ಶ್ರಮ ಪಟ್ಟಿದ್ದರು . ತಿರುವನಂತಪುರಂ ದೇವಸ್ಥಾನದಲ್ಲಿ ತನ್ನ ಬರವಣಿಗೆಯ ಕಾರ್ಯಗಳಿಗೆ ಪೂರಕವಾಗಿ ಸಾಕಷ್ಟು ಸಮಯ ಕಳೆದಿದ್ದರು.ಅಲ್ಲಿ ಪವಾಡ ಸದೃಶ ಘಟನೆಗಳು ನಡೆದಿದ್ದವು ಎನ್ನುವುದನ್ನು ಅವರು ಸ್ಮರಿಸಿದರು . ಅವರ ಮಹತ್ವಾಕಾಂಕ್ಷೆಯ ''ಮಂದಾರ ಮಲ್ಲಿಗೆ'' ಬರೆಯುವಾಗ ಮೂಲಪ್ರತಿಯನ್ನು ಸರಿಪಡಿಸುವ ಕೆಲಸವನ್ನು ನಾನು ಅತ್ಯಂತ ಶ್ರದ್ಧೆಯಿಂದ ಮಾಡಿದೆ ಎಂದು ಶ್ಯಾಮಲಾ ಸತ್ಯ ಅವರು ತನ್ನ ಪತಿಯ ಜೊತೆಗಿನ ಸಾಹಿತ್ಯದ ಒಡನಾಟವನ್ನು ಮೆಲುಕು ಹಾಕಿಕೊಂಡರು.
ಅಕ್ಟೊಬರ್ ಹದಿನೈದರಂದು ಭಾನುವಾರ ಐಲೇಸಾ -ದಿ ವಾಯ್ಸ್ ಆಫ್ ಓಷನ್ (ರಿ) ಬೆಂಗಳೂರು ಅವರು ಶ್ಯಾಮಲಾ ಅವರ ಮನೆಯಲ್ಲಿ ಹಮ್ಮಿಕೊಂಡ ''ಸತ್ಯ ಶ್ಯಾಮಲಾಂ ವಂದೆ ಮಾತರಂ'' ಕಾರ್ಯಕ್ರ್ರಮದಲ್ಲಿ ಭಾವಪೂರ್ಣರಾಗಿ ಭಾಗವಹಿಸಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು . ಸತ್ಯ ಅವರ ಜೀವನ, ಸಾಹಿತ್ಯ ಮಾತು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಅವರೊಂದಿಗೆ ಸಂವಾದ ರೀತಿಯಲ್ಲಿ ಐಲೇಸಾದ ಅನಂತ್ ನಡೆಸಿಕೊಟ್ಟರು.
ಐಲೇಸಾದ ಬಗ್ಗೆ ಮಾತಾಡುತ್ತಾ ಐಲೇಸಾದ ಸದಸ್ಯರೆಲ್ಲರೂ ಸುಸಂಸ್ಕೃತರು , ಗುರು ಹಿರಿಯರಲ್ಲಿ ಭಕ್ತಿಯುಳ್ಳವರು , ಸಾಹಿತ್ಯ ಸಂಗೀತದಲ್ಲಿ ಮುಂಚೂಣಿಯಲ್ಲಿ ಇರುವವರು . ಪರಿಚಯವೇ ಇಲ್ಲದವರ ಜೊತೆಗೆ ಹ್ಯಾಗೆ ತೊಡಗಿಕೊಳ್ಳುವುದು ಎನ್ನುವ ದುಗುಡ ನನ್ನಲ್ಲಿ ಇತ್ತು. ಹಾಗಾಗಿ ನನ್ನ ಎಲ್ಲ ಮಿತ್ರ ಬಂಧುಗಳನ್ನು ಸಹಕರಿಸಲು ಕರೆದಿದ್ದೆ . ಆದರೆ ಒಂದು ಸಾರಿ ನಿಮ್ಮ ಒಡನಾಟದ ಸವಿ ಉಂಡ ಮೇಲೆ ನನ್ನ ಸ್ವಂತ ಮಕ್ಕಳೆ ಮನೆಗೆ ಬಂದಷ್ಟು ಸಂತೋಷವಾಯ್ತು . ಸತ್ಯ ಅವರ ಬಗ್ಗೆ ನನಗೂ ಆಶರ್ಯ ಅನ್ನಿಸುವಂತೆ ವಿಷಯ ಸಂಗ್ರಹಿಸಿದ್ದೀರಿ . ಅವರೇನಾದರೂ ಇವತ್ತು ನಮ್ಮ ಜೊತೆ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೊ ? ಎಂದು ಭಾವುಕರಾದರು.
ನಿರೂಪಕ ಅನಂತ್ ಸತ್ಯ ಅವರ ಸಾಹಿತ್ಯದ ಬಗ್ಗೆ ವಿವರವಾಗಿ ತಿಳಿಸಿ , ಅವರ ಜೀವನದ ಪ್ರತಿಯೊಂದು ಪ್ರಮುಖ ಘಟ್ಟಗಳನ್ನು ರಸವತ್ತಾಗಿ ವಿಶದ ಪಡಿಸಿದರು . ಅವರ ಅಪ್ರತಿಮ ಪರಿಶ್ರಮದ ಸಂಶೋಧನಾ ಕೃತಿ ''ಅಳಿವಿಲ್ಲದ ಸ್ಥಾವರ'' ಸಾಹಿತ್ಯ ಪ್ರಿಯರನ್ನು ಆದಷ್ಟು ಜಾಸ್ತಿ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ'' ಎಂದು ತಿಳಿಸಿದರು.
ಡಾ. ಕಲಾಂ ಅವರ ಜೊತೆಗಿನ ಸತ್ಯ ಅವರ ಒಡನಾಟ , ಸಲುಗೆಗಳನ್ನು ಕೆಲವು ಘಟನೆಗಳ ಮೂಲಕ ತಿಳಿಸಿಕೊಟ್ಟರು . ನಮಗರಿವಿಲ್ಲದೆಯೆ ಇವತ್ತು ಡಾ. ಕಲಾಂ ಅವರ ಜನ್ಮ ದಿನದಂದು (15-10-1931) ಕಾಕತಾಳೀಯವಾಗಿ ನಾವು ಸತ್ಯ ಅವರ ಮನೆಯಲ್ಲಿ ಇಂದೇ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಕಲಾಂ ಅವರನ್ನೂಅನಂತ್ ಸ್ಮರಿಸಿಕೊಂಡರು .
ರಾಜ್ಯ ಪ್ರಶಸ್ತಿ ವಿಜೇತ ಡಾ. ರಮೇಶ್ಚಂದ್ರ ಅವರು ಸತ್ಯ ಅವರ ಜೀವನಕ್ಕೆ ಹೊಂದುವಂತಹ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಮೋಡಿ ಮಾಡಿದರು. ಪ್ರತಿಭಾನ್ವಿತ ಗಾಯಕರುಗಳಾದ ಪ್ರಕಾಶ್ ಪಾವಂಜೆ , ಅಜೇಶ್ ಚಾರ್ಮಾಡಿ ಅವರೂ ಕೂಡಾ ಸಾಂಧರ್ಭಿಕ ಹಾಡುಗಳನ್ನು ಹಾಡಿ ನೆರೆದವರ ಮನಗೆದ್ದರು .
ಸತ್ಯ ಅವರ ಸಾರಥ್ಯದ ಮೊದಲ ಉಪಗ್ರಹ ವಾಹಕ ರಾಕೆಟ್ ಸಮುದ್ರಕ್ಕೆ ಹಾರಿ ಫ್ರೆಂಚ್ ನೌಕೆಯ ಸಮೀಪ ಬಿದ್ದಾಗ ಭಾರಿ ಅನಾಹುತವೊಂದು ತಪ್ಪಿತ್ತು. ತನ್ನದಲ್ಲದ ತಪ್ಪಿಗೆ ಸತ್ಯ ತೀವ್ರವಾಗಿ ಕೊರಗಿದ್ದನ್ನು ಅಭಿವ್ಯಕ್ತಿಸುವ ''ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ '' ಹಾಡನ್ನು ಪುರಂದರ ದಾಸರ ಬಗ್ಗೆ ಸತ್ಯ ಅವರಿಗಿದ್ದ ಅಭಿಮಾನದ ಸಲುವಾಗಿ ಶ್ರೀಮತಿ ನಮಿತಾ ಅನಂತ್ ಅದ್ಭುತವಾಗಿ ಪ್ರಸ್ತುತ ಪಡಿಸಿದರು.
ಸಾರ್ವಕಾಲಿಕ ಪ್ರಸಿದ್ಧಿಯ ಸತ್ಯ ರಚನೆಯ ''ಆಚೆ ಮನೆ ಸುಬ್ಬಮ್ಮನದು ಏಕಾದಶಿ ಉಪವಾಸ'' ರಮೇಶ್ಚಂದ್ರ ಮಾರ್ಗದರ್ಶನದಲ್ಲಿ ಎಲ್ಲರೂ ಜೊತೆಯಾಗಿ ಹಾಡಿದರು . ಸಾಹಿತಿ ಶಾಂತಾರಾಮ್ ಶೆಟ್ಟಿ ಮತ್ತು ಪತ್ರಕರ್ತ ರಾಘವಸೂರ್ಯ ಆಚೆ ಮನೆ ಸುಬ್ಬಮ್ಮನದು ಹಾಡಿನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ವಿಶ್ಲೇಷಣೆ ಕೊಟ್ಟರು . ಜೀ ಟೀವಿ ವಾಹಿನಿಯ ದಿವ್ಯಾ ರಾಘವಸೂರ್ಯ ಅವರು ಮಾತನಾಡಿ ಶ್ಯಾಮಲಾ ಅವರನ್ನು ತಾವು ನಡೆಸಿಕೊಡುವ ಸಾಧಕ ಸ್ತ್ರೀಯರ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟರು.
ಕಾಸರಗೋಡಿನಿಂದ ಕಾರ್ಯಕ್ರಮಕ್ಕೆ ಬಂದಿದ್ದ ಡಾ. ರಾಜೇಶ್ ಆಳ್ವ 'ಜನ್ಮಾಂತರದ ಋಣದಿಂದ ನಾನು ಈ ಆಪ್ತ ಕಾರ್ಯಕಮದಲ್ಲಿ ಪಾಲ್ಗೊಂಡೆ . ಸತ್ಯ ಅವರು ಸತ್ಯವನ್ನು ಅರಿತವರು' ಎಂದು ವ್ಯಾಖ್ಯಾನಿಸಿದರು . ಐಲೇಸಾ ಗೋಪಾಲ್ ಪಟ್ಟೆ ಮಾತನಾಡಿ ''ಸತ್ಯ ಶ್ಯಾಮಲಾಂ ವಂದೆ ಮಾತರಂ'' ಪೋಸ್ಟರ್ ಮಾಡುವಾಗ ರೋಮಾಂಚನದ ಅನುಭವವಾಯ್ತು ಸತ್ಯ ಅವರು ನಮ್ಮ ಜೊತೆ ನೆರಳಂತೆ ಇರುತ್ತಾರೆ ಅನ್ನೋದನ್ನು ಬಿಂಬಿಸಲು ಅವರನ್ನು ನೆರಳಿನ ರೀತಿಯಲ್ಲಿ ಚಿತ್ರಿಸಿದೆ ಎಂದರು .
ವಿವೇಕಾನಂದ ಮಂಡೆಕರ ಅವರು ಐಲೇಸಾದ ಊರಿಗೊಂದು ಕೆರೆ ಕಾರ್ಯಕ್ರಮದಲ್ಲಿ ಪಾಲು ಪಡೆಯುವಂತೆ ಶ್ಯಾಮಲಾ ಅವರನ್ನು ವಿನಂತಿಸಿದರು . ಶಿವೂ ಸಾಲಿಯಾನ್ ಮತ್ತು ಪಳ್ಳಿ ವಿಶ್ವನಾಥ್ ಮಾತನಾಡಿ ಈ ಕಾರ್ಯಕ್ರಮದ ಉಪಸ್ಥಿತಿ ''ನಮ್ಮ ಬಾಳಿನ ಪುಣ್ಯದ ಫಲ'' ಎಂದು ಶ್ಲಾಘಿಸಿದರು. ಸತ್ಯ ಕುಟುಂಬದ ಒಡನಾಡಿಗಳು ತಮ್ಮ ಮತ್ತು ಸತ್ಯ ಶ್ಯಾಮಲಾ ಅವರ ಕುಟುಂಬದ ಸಂಬಂಧವನ್ನು ನೆನಪಿಸಿಕೊಂಡು ಆರ್ದ್ರರಾದರು .
ಶ್ಯಾಮಲಾ ಅವರ ಬಹುಕಾಲದ ಒಡನಾಡಿ ಪತ್ರಕರ್ತ ವಿನೋದ್ ಛಾಯಾಗ್ರಹಣದ ಮೂಲಕ ಈ ಅಭೂತಪೂರ್ವ ಕ್ಷಣವನ್ನು ಸೆರೆಹಿಡಿದು ಸಹಕರಿಸಿದರು. ಭರತನಾಟ್ಯ ಶಿಕ್ಷಕಿ ಅನುಪಮಾ ಅವರು ವಂದಿಸಿದರು. ಸಂತೋಷ್ ಶೆಟ್ಟಿ ನಾಸಿಕ್ ಸಹಕರಿಸಿದರು .
ಸತ್ಯ ಅವರ ಮುಗ್ಧ ನಗು ಅವರ ಚಿತ್ರ ಬಿಡಿಸಲು ಪ್ರೇರೇಪಿಸಿತು : ಅಶೋಕ್ ಚಾರ್ಮಾಡಿ .
ಸತ್ಯ ಅವರ ನೆನಪಿಗಾಗಿ ಅವರ ಚಿತ್ರವನ್ನು ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಅದ್ಭುತವಾಗಿ ಚಿತ್ರಿಸಿದ ಐಲೆಸಾದ ಕಲಾವಿದ ಅಶೋಕ್ ಚಾರ್ಮಾಡಿ ಅದನ್ನು ಶ್ಯಾಮಲಾ ಸತ್ಯ ಅವರಿಗೆ ಉಡುಗೊರೆಯಾಗಿ ಈ ಸಂದರ್ಭದಲ್ಲಿ ನೀಡಿದರು . ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡ ಶ್ಯಾಮಲಾ ಸತ್ಯ ಅವರು ಅಶೋಕ್ ಅವರ ಕಲೆಯನ್ನು ಮುಕ್ತವಾಗಿ ಶ್ಲಾಘಿಸಿದರು . ಸತ್ಯ ಅವರ ಮುಗ್ಧ ನಗುವಿನಿಂದ ಪ್ರೇರಿತನಾಗಿ ಈ ಚಿತ್ರ ಬಿಡಿಸಿದ್ದಾಗಿ ಅಶೋಕ್ ಚಾರ್ಮಾಡಿ ತಿಳಿಸಿದರು .
Post a Comment