ಮೈಸೂರು ದಸರಾ 2023 ರ ಪ್ರಧಾನ ಕವಿಗೋಷ್ಠಿಗೆ ಮುಂಬಯಿ ಕವಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಆಯ್ಕೆ
ಮುಂಬಯಿ: ಮೈಸೂರು ದಸರಾ 2023 ರ ಪ್ರಧಾನ ಕವಿಗೋಷ್ಠಿಗೆ ಮುಂಬಯಿ ಕವಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 21 , ಶನಿವಾರ ಬೆಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ಆರಂಭವಾಗಲಿರುವ ಪ್ರಧಾನ ಕವಿಗೋಷ್ಟಿಯನ್ನು ಖ್ಯಾತ ಕವಯಿತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸಲಿದ್ದಾರೆ.
ಪ್ರಸಿದ್ಧ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಸಚಿವ ,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ ಸಿ.ಮಹದೇವಪ್ಪ ಉಪಸ್ಥಿತರಿರುವರು.
ಶ್ರೀನಿವಾಸ ಜೋಕಟ್ಟೆ ಈಗಾಗಲೇ ಕರ್ನಾಟಕ ಸರಕಾರದ ನವರಸಪುರ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿಯ ಕವಿ ನಮನ ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ ಸಹಿತ ಹಲವು ಪ್ರಮುಖ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮಾಡಿದ್ದಾರೆ. ಹಲವು ಕವಿಗೋಷ್ಟಿಗಳ ಅಧ್ಯಕ್ಷತೆ ವಹಿಸಿದ್ದಾರೆ. ಇವರ 'ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ' ಕವನ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ದೊರೆತಿದೆ.
ದಸರಾ ಕವಿಗೋಷ್ಠಿ 2023 ರಲ್ಲಿ ಹಾಸ್ಯ- ಚುಟುಕು ಕವಿಗೋಷ್ಟಿ, ಚಿಗುರು ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಯುವ ಕವಿಗೋಷ್ಠಿ, ಉರ್ದು ಕವಿಗೋಷ್ಠಿ ಮತ್ತು ಪ್ರಧಾನ ಕವಿಗೋಷ್ಠಿ ಹೀಗೆ ಏಳು ಕವಿಗೋಷ್ಟಿಗಳು ಜರಗಲಿದ್ದು ಶ್ರೀನಿವಾಸ ಜೋಕಟ್ಟೆ ಪ್ರಧಾನ ಕವಿಗೋಷ್ಠಿಯಲ್ಲಿ ಕಾವ್ಯವಾಚನ ಮಾಡಲಿದ್ದಾರೆ.
ಈ ಪ್ರಧಾನ ಕವಿಗೋಷ್ಠಿಯಲ್ಲಿ ಪ್ರತಿಭಾ ನಂದಕುಮಾರ, ಕೆ.ಷರೀಫಾ, ಮೀನಾ ಮೈಸೂರು ,ತಾರಿಣಿ ಶುಭದಾಯಿನಿ, ವಿಕ್ರಮ್ ವಿಸಾಜಿ, ಸಬಿತಾ ಬನ್ನಾಡಿ, ನರೇಂದ್ರ ರೈ ದೇರ್ಲ, ಮಾಧವಿ ಭಂಡಾರಿ.... ಮೊದಲಾದವರು ಕಾವ್ಯವಾಚನ ಮಾಡಲಿದ್ದಾರೆ.
Post a Comment