ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಅತಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಎಚ್ಚರಿಕೆ.

ಬೆಂಗಳೂರು, ಅ.14: ಕರ್ನಾಟಕ ರಾಜ್ಯದಲ್ಲಿ ಜಾತಿ ಜನಗಣತಿ ವರದಿ  ಬಿಡುಗಡೆ ವಿಚಾರವಾಗಿ ಆಡಳಿತ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದೆ. ಒಂದೆಡೆ, ವರದಿ ಬಿಡುಗಡೆಗೆ ಒಕ್ಕಲಿಗ-ಲಿಂಗಾಯಿತ ಸಮುದಾಯದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಒತ್ತಡಕ್ಕೆ ಮಣಿದು ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಚ್ಚರಿಕೆ ನೀಡಿದೆ. ಇದು ರಾಜ್ಯ ಸರ್ಕಾರವು ಒತ್ತಡಕ್ಕೆ ಸಿಲುಕಿಸಿದೆ.

ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಂತೆ ಒಕ್ಕಲಿಗ-ಲಿಂಗಾಯಿತ ವಿರೋಧದ ನಡುವೆ ವರದಿ ಬಿಡುಗಡೆಗೆ ಅತಿ ಹಿಂದುಳಿದ ವರ್ಗಗಳ ಸಂಘ ಪಟ್ಟು ಹಿಡಿದಿದೆ. ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಗ್ಡೆ ಅವರನ್ನು ಭೇಟಿಯಾಗಿದ್ದು, 72 ಜಾತಿಗಳನ್ನ ಹಿಂದುಳಿದವರ ಪಟ್ಟಿಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದೆ.

ಅಲ್ಲದೆ, ಜಾತಿ ಗಣತಿ ವಿರೋಧಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿಂದುಳಿದವರ್ಗ, ವರದಿ ವಿರೋಧಿಸುವುದು ಸಮಂಜಸವಲ್ಲ. ವರದಿ ಅವೈಜ್ಞಾನಿಕ ಎಂಬುದಕ್ಕೆ ಯಾವುದೇ ಆಧಾರವೇ ಇಲ್ಲ. ವರದಿ ಯಾರು ನೋಡದೇ ಸರಿ ಇಲ್ಲ ಅನ್ನೋದು ಹೇಗೇ? ಎಂದು ಪ್ರಶ್ನಿಸಿದೆ.

ಸರ್ಕಾರ ವರದಿ ಬಿಡುಗಡೆ ಮಾಡಿದ ಬಳಿಕ ಚರ್ಚೆಗೆ ಬಿಡಲಿ. ಸಾಧಕ-ಬಾಧಕಗಳ ಚರ್ಚೆಯಾದರೆ ಸಮಾಜಕ್ಕೂ ಸ್ಪಷ್ಟತೆ ಸಿಗಲಿದೆ. ಆಕ್ಷೇಪವಿದ್ದರೆ ಸರ್ಕಾರಕ್ಕೆ ವಿವರವಾಗಿ ಸಲ್ಲಿಸಲಿ. ಜಾತಿ ಗಣತಿ ಬಗ್ಗೆ ಆಕ್ಷೇಪಗಳಿದ್ದರೆ ಬಿಡುಗಡೆ ಬಳಿಕ ನ್ಯಾಯಾಲಯದಲ್ಲೂ ಪ್ರಶ್ನಿಸಲಿ ಎಂದು ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ಒಂದು ವೇಳೆ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ವೇಣುಗೋಪಾಲ್, ಈಗ ನೀಡಿರುವ ಮೀಸಲಾತಿಯೇ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಮಾಜಗಳ ಯಾವ ಅಂಕಿಅಂಶಗಳಿಲ್ಲದೇ ಮನಬಂದಂತೆ ಮೀಸಲಾತಿ ನೀಡಲಾಗಿದೆ ಎಂದು ಆರೋಪಿಸಿದರು.

No comments

Powered by Blogger.