ವಿವಶ...
(ಇಲ್ಲಿಯವರೆಗೆ...
ಇನ್ನೂ ಎಷ್ಟು ಕಾಲಾಂತ ಈ ಒಡಹುಟ್ಟಿದ ಸ್ವಾರ್ಥಿಗಳ ಜೀತದಾಳಾಗಿ ಬದುಕಬೇಕು ನಾನು? ನನಗೂ ಸಂಸಾರವಿದೆ. ಅದಕ್ಕೊಂದು ಸ್ವತಂತ್ರ ನೆಲೆಯಾಗಬೇಕು ಮತ್ತು ನನ್ನದೇ ಸ್ವಂತ ಆಸ್ತಿಪಾಸ್ತಿ ಮಾಡಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದಾ? ಅದೆಲ್ಲ ಇವರಿಗೆ ಹೇಗೆ ತಿಳಿಯಬೇಕು? ಇಲ್ಲ, ನನ್ನ ಪಾಲಿನದ್ದು ಅದೊಂದು ಹಿಡಿ ಮಣ್ಣಾದರೂ ಸರಿ, ಯಾರಿಗೂ ಬಿಟ್ಟುಕೊಡುವುದಿಲ್ಲ. ಅದನ್ನು ಪಡೆಯುವಲ್ಲಿ ಯಾವ ಅಡೆತಡೆಗಳು ಬಂದರೂ ಅಥವಾ ಎಂಥ ರಕ್ತ ಸಂಬಂಧಗಳು ಕಡಿದು ಹೋದರೂ ಹಿಂಜರಿಯುವುದಿಲ್ಲ. ಅವಶ್ಯಕತೆ ಬಿದ್ದರೆ ಯಾರನ್ನಾದರೂ ಮುಗಿಸಲೂ ಸಿದ್ಧ! ಯಾರನ್ನು ಯಾಕೆ? ನ್ಯಾಯವಾಗಿ ಆಸ್ತಿ ಕೇಳಿದ್ದಕ್ಕೆ ಒಡಹುಟ್ಟಿದ ತಮ್ಮನನ್ನೇ ಕಡಿಯಲು ಬಂದನಲ್ಲ, ಆ ಅಣ್ಣ ಎನ್ನುವ ಶಂಭುವನ್ನೇ ಮುಗಿಸುತ್ತೇನೆ. ಅನಂತರ ದೊಡ್ಡಣ್ಣಂದಿರನ್ನು ಸಂಭಾಳಿಸುವುದು ಮಹಾ ಕೆಲಸವಲ್ಲ. ಆದರೆ ಇಂಥದ್ದಕ್ಕೆಲ್ಲ ಗೆಳೆಯ ಶಿವನೇ ಸರಿಯಾದ ವ್ಯಕ್ತಿ. ಅವನು ನನ್ನ ಬಾಲ್ಯ ಸ್ನೇಹಿತ ಮತ್ತು ನನಗಾಗಿ ಜೀವ ಕೊಡಲೂ ಸಿದ್ಧನಿರುವವನು!’ ಎಂದು ನಡಂತೂರು ದೊಡ್ಡಮನೆಯ ಮುದ್ದು ಶೆಟ್ಟರ ಆರು ಜನ ಮಕ್ಕಳಲ್ಲಿ ಕೊನೆಯವರಾದ ಶ್ರೀಧರ ಶೆಟ್ಟರು ಸುಮಾರು ದೂರದ ತಮ್ಮ ಬಾಕಿಮಾರು ಗದ್ದೆಯ ಹುಣಿಯಲ್ಲಿ ಗಾಯಗೊಂಡ ಹುಲಿಯಂತೆ ಶತಪಥ ಹೆಜ್ಜೆ ಹಾಕುತ್ತ ಚಿಂತಿಸುತ್ತಿದ್ದರು.)
ಕಳೆದ ಸಂಚಿಕೆ (ಧಾರವಾಹಿ - 1 ) ಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ
------------------------------------------
ಶ್ರೀಧರ ಶೆಟ್ಟರು ತಾವು ಅಂದುಕೊoಡoತೆಯೇ ಅಣ್ಣಂದಿರೊoದಿಗೆ ಮಾತುಕತೆ ನಡೆಸಲು ದಿನವೊಂದನ್ನು ಗೊತ್ತುಪಡಿಸಿದರು. ಅದರ ಮುಂಚಿನ ದಿನ ಪತ್ನಿ ಕಾವೇರಿಯನ್ನು ಕೆಲವು ದಿನಗಳ ಮಟ್ಟಿಗೆ ತವರಿಗೆ ಕಳುಹಿಸಿಕೊಟ್ಟರು. ಮರುದಿನ ಅಣ್ಣಂದಿರನ್ನೂ ಒಂದಿಬ್ಬರು ಹಿರಿಯ ಮಾವಂದಿರನ್ನೂ ಕರೆದು ವಿಶಾಲವಾದ ಅಂಗಳದಲ್ಲಿ ಮಾತುಕತೆಗೆ ಕುಳ್ಳಿರಿಸಿದರು. ತಮ್ಮನ ಕುತಂತ್ರದ ಬಗ್ಗೆ ಶಂಭು ಅನುಮಾನಗೊಂಡಿದ್ದ. ಆದ್ದರಿಂದ ಅವನೂ ಎಲ್ಲದಕ್ಕೂ ತಯಾರಾಗಿಯೇ ಬಂದಿದ್ದವನು ಒಂದಿಬ್ಬರು ನಂಬುಗೆಯ ಆಳುಗಳನ್ನು ತನ್ನ ಬಗಲಲ್ಲಿ ನಿಲ್ಲಿಸಿಕೊಂಡೇ ಕುಳಿತ. ಅವನ ಹಿಂದುಗಡೆ, ಒಂದು ಮರೆಯಲ್ಲಿ ಕೆಲವು ಹತ್ಯಾರುಗಳು ತಣ್ಣನೆ ಉಸಿರಾಡುತ್ತ ಕುಳಿತಿದ್ದವು. ಶಿವನೂ ಮತ್ತು ಅವನ ಇಬ್ಬರು ಗೆಳೆಯರೂ ಶ್ರೀಧರ ಶೆಟ್ಟರ ಪರವಾಗಿ ಬಂದಿದ್ದವರು ಅಂಗಳದ ಮೂಲೆಯೊಂದರಲ್ಲಿ ಕುಳಿತರು.
ಶೆಟ್ಟರ ಮಾವಂದಿರು ಚರ್ಚೆಯನ್ನಾರಂಭಿಸಿದರು. ಆಗ ಶೆಟ್ಟರು ತಮಗೆ ಸಮಪಾಲು ಬೇಕೇಬೇಕೆಂದು ಪಟ್ಟು ಬಿಡದೆ ವಾದಿಸಿದರು. ಆದರೆ ಅಣ್ಣಂದಿರು ಅವರ ಯಾವ ಮಾತಿಗೆ ಈಗಲೂ ಸೊಪ್ಪು ಹಾಕದೆ ಕೆಂಗಣ್ಣು ಬಿಟ್ಟುಕೊಂಡು ಕುಳಿತಿದ್ದರು. ಅಷ್ಟರಲ್ಲಿ ಶಂಭು ದಢಕ್ಕನೆ ಎದ್ದವನು, ‘ಅದು ಸಾಧ್ಯವೇ ಇಲ್ಲ. ಅಪ್ಪ ಅಮ್ಮ ನಮ್ಮೆಲ್ಲರಿಗಿಂತ ಇವನನ್ನೇ ಹೆಚ್ಚು ಮುದ್ದಿನಿಂದ ಬೆಳೆಸಿದರು. ನಮಗ್ಯಾರಿಗೂ ಒಂದಕ್ಷರ ಕಲಿಸದಿದ್ದರೂ ಇವನನ್ನು ಮಾತ್ರ ದೊಡ್ಡದಾಗಿ ಓದಿಸಿ ನಮಗೆಲ್ಲ ಅನ್ಯಾಯ ಮಾಡಿ ಹೋದರು. ಇವನೂ ಹಾಗೆಯೇ, ಒಂದು ದಿನವೂ ನಮ್ಮೊಂದಿಗೆ ಗದ್ದೆಗಿಳಿದು ಹಾರೆ ಹಿಡಿದವನಲ್ಲ. ನೇಗಿಲು ಹೊತ್ತವನಲ್ಲ. ಬೇಸಾಯ ಮಾಡಿದವನೂ ಅಲ್ಲ. ಹೀಗಿರುವಾಗ ಇನ್ನ್ಯಾವ ಲೆಕ್ಕದಲ್ಲಿ ಇವನಿಗೆ ಸಮಪಾಲು ಕೊಡುವುದು? ನಾವೆಲ್ಲರೂ ಸಂಸಾರ ಇರುವವರು. ಇಷ್ಟು ದೊಡ್ಡ ಆಸ್ತಿಯನ್ನು ಇವತ್ತಿನವರೆಗೂ ಸಂಭಾಳಿಸಿಕೊoಡು ಬಂದವರೂ ನಾವೇ. ಹಾಗಾಗಿ ಹೆಚ್ಚು ಪಾಲು ನಮಗೇ ಸಿಗಬೇಕು! ಇದು ಕೇವಲ ನನ್ನೊಬ್ಬನ ಮಾತಲ್ಲ. ಇಲ್ಲಿ ಕುಳಿತಿರುವ ಎಲ್ಲ ಅಣ್ಣಂದಿರ ತೀರ್ಮಾನವೂ ಹೌದು!’ ಎಂದು ಒರಟಾಗಿ ಅಂದವನು ರಪ್ಪನೆ ಅಣ್ಣಂದಿರತ್ತ ತಿರುಗಿ, ‘ಏಯ್, ಮಾತಾಡಿ ಮಾರಾಯ! ಈ ಹೊತ್ತಲ್ಲಿ ನೀವೆಲ್ಲ ಸುಮ್ಮನೆ ಕುಳಿತರೆ ಹೇಗೆ? ನಾನೊಬ್ಬನೇ ನಿಷ್ಠೂರ ಕಟ್ಟಿಕೊಳ್ಳಬೇಕಾ!’ ಎಂದು ಗುಡುಗಿದ. ಆದರೆ ಅವರು ಯಾವುದೋ ಗುಂಗಿನಲ್ಲಿದ್ದವರು ತಟ್ಟನೆ ಎಚ್ಚೆತ್ತು ನೆಟ್ಟಗೆ ಕುಳಿತರು. ಹಿರಿಯಣ್ಣನಾದ ಪುರಂದರ ಶೆಟ್ಟರು ಚುರುಕಾಗಿ, ‘ಹೌದು ಹೌದು. ಶಂಭು ಹೇಳುವುದು ಸರಿ. ಶ್ರೀಧರನಿಗೆ ಸಮಪಾಲು ಕೊಡಲು ನಮ್ಮಲ್ಲಿ ಯಾರಿಗೂ ಒಪ್ಪಿಗೆಯಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು ನಿರಂತರ ವೃದ್ಧಿಸಿಕೊಂಡು ಬಂದವರು ನಾವೇ ಹೊರತು ಅವನಲ್ಲ!’ ಎಂದುಬಿಟ್ಟರು.
ಆದರೆ ಶ್ರೀಧರ ಶೆಟ್ಟರು ಅಧೀರರಾಗಲಿಲ್ಲ. ‘ನೀವು ಹುಟ್ಟಿದ ಕಾಲದಲ್ಲಿ ನಿಮ್ಮನ್ನು ಓದಿಸಲು ಅಪ್ಪನ ಸ್ಥಿತಿಗತಿಯೂ ಸರಿ ಇರಲಿಲ್ಲ ಮತ್ತು ಆವಾಗ ಅನಂತೂರಿನಲ್ಲಿ ಶಾಲೆಯೂ ಇರಲಿಲ್ಲ ಎಂದು ಅಪ್ಪನೇ ನಿಮ್ಮೆದುರು ಅದೆಷ್ಟೋ ಬಾರಿ ನೋವಿನಿಂದ ಹೇಳಿಕೊಳ್ಳುತ್ತಿದ್ದರು ಎಂಬುದು ನಿಮ್ಮಲ್ಲಿ ಯಾರಿಗಾದರೂ ನೆನಪಿದೆಯಾ?’ ಎಂದು ಅಣ್ಣಂದಿರನ್ನು ಒಂದುಕ್ಷಣ ಭಾವರಹಿತವಾಗಿ ದಿಟ್ಟಿಸಿದವರು ಬಳಿಕ, ‘ನೀವೆಲ್ಲ ಅದನ್ನು ಮರೆತಿರಬಹುದು. ಆದರೆ ನಾನು ಮರೆತಿಲ್ಲ. ಅವರ ಆ ನಿರಾಶೆಯೇ ಬಹುಶಃ ನನ್ನನ್ನು ಹೆಚ್ಚು ಓದಿಸುವಂತೆ ಮಾಡಿರಬಹುದು ಮತ್ತದೇ ಕಾರಣದಿಂದ ನನ್ನನ್ನು ಕೆಲಸಕ್ಕೂ ಹಚ್ಚದೆ ಸುಖವಾಗಿ ಬೆಳೆಸಿರಬಹುದು. ಆದರೆ ಅದು ನನ್ನ ತಪ್ಪಾ ಹೇಳಿ? ನಾನೂ ನಿಮ್ಮ ಒಡಹುಟ್ಟಿದವನಲ್ಲವಾ. ಅವರ ಮೇಲಿನ ಕೋಪವನ್ನು ಈಗ ನೀವು ನನ್ನ ಮೇಲೆ ತೀರಿಸಿಕೊಳ್ಳುವುದರಲ್ಲಿ ಯಾವ ನ್ಯಾಯವಿದೆ? ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವ ನಿಷ್ಠೂರಕ್ಕೂ ಅವಕಾಶಕೊಡದೆ ನನ್ನ ಪಾಲನ್ನು ನನಗೆ ಕೊಟ್ಟುಬಿಡಿ. ಅದರಿಂದ ನಮ್ಮ ರಕ್ತ ಸಂಬoಧ ಕೊನೆಯ ತನಕ ಉಳಿಯಬಹುದು. ಇಲ್ಲದಿದ್ದರೆ ನನಗೂ ಕಾನೂನು ಗೊತ್ತಿದೆ. ಅದರ ಮೂಲಕವೇ ಪಡೆದುಕೊಳ್ಳುತ್ತೇನೆ!’
‘ಹೇ, ಹೋಗಾ ಮೂರುಕಾಸಿನವನೇ...! ನಿನ್ನ ಸಂಬoಧ ಯಾರಿಗೆ ಬೇಕಾಗಿದೆಯೋ...? ಒಡಹುಟ್ಟಿ ಸಾಕಿ ಬೆಳೆಸಿದ ಅಣ್ಣಂದಿರನ್ನೇ ಕೋರ್ಟು ಕಛೇರಿ ಹತ್ತಿಸುವಷ್ಟು ದುರಾಸೆ ನಿನಗೆ ಬಂದಿದೆಯೆoದರೆ ಇನ್ನು ಮೇಲೆ ನಿನ್ನಂಥವನು ಈ ಭೂಮಿಯ ಮೇಲೆ ಇರಲೇಬಾರದೋ!’ ಎಂದು ಘರ್ಜಿಸಿದ ಶಂಭುಶೆಟ್ಟಿ ಧಿಗ್ಗನೆದ್ದು ತರಗೆಲೆ ರಾಶಿಯೊಳಗಿದ್ದ ತಲವಾರನ್ನೆಳೆದುಕೊಂಡು ತಮ್ಮನ ಮೇಲೆ ನುಗ್ಗಿಬಿಟ್ಟ. ಅಷ್ಟರಲ್ಲಿ ಅಲ್ಲಿ ನೆರೆದಿದ್ದ, ಉಳಿದ ರಕ್ತ ಸಂಬoಧಿ ಮತ್ತವರ ಬೆಂಬಲಿಗರೊಳಗೂ ಬಿಸಿಯುಸಿರು ದಬ್ಬುತ್ತ ಕುಳಿತಿದ್ದ ದ್ವೇಷದ ಭಾವಗಳು ರಪ್ಪನೆ ತಂತಮ್ಮ ಮುಸುಕನ್ನು ಕಿತ್ತೆಸೆಯುತ್ತ, ಅವುಗಳ ಕೈಗಳಿಗೂ ವಿವಿಧ ಹತ್ಯಾರುಗಳು ರಪರಪನೇ ಸೇರಿಕೊಂಡು ಅಲ್ಲಲ್ಲೇ ಹೊರಳಾಡತೊಡಗಿದವು. ಇನ್ನೇನು ಎರಡೂ ತಂಡಗಳ ನಡುವೆ ಹೊಯಿಕೈ ನಡೆದೇ ಬಿಡುತ್ತದೆ ಹಾಗೂ ಶಂಭು ಶೆಟ್ಟಿ ತಮ್ಮನನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಿವನೂ ಎಚ್ಚೆತ್ತವನು ಬಿರುಸಾಗಿ ಬೀಸಿದ ಹಸಿ ಬಡಿಗೆಯೊಂದು ಬಂದು ಶಂಭುವಿನ ನೆತ್ತಿಗೆ ಅಪ್ಪಳಿಸಿಬಿಟ್ಟಿತು. ‘ಅಯ್ಯಯ್ಯಮ್ಮಾ... ಸತ್ತೆನಪ್ಪಾ...!’ ಎಂದು ಚೀರಿದ ಶಂಭು ನೆಲಕ್ಕುರುಳಿ ಬಿದ್ದು ರಕ್ತದ ಮಡುವಿನಲ್ಲಿ ಹೊರಳಾಡತೊಡಗಿದ. ಆ ದೃಶ್ಯವನ್ನು ಕಂಡ ಅವನ ಆಳುಗಳ ಆವೇಶವೂ ತಣ್ಣಗಾಗಿಬಿಟ್ಟಿತು. ಉಳಿದವರೆಲ್ಲ ಕಂಗಾಲಾದರು.
ಶ್ರೀಧರ ಶೆಟ್ಟರ ಅಣ್ಣಂದಿರು ಮತ್ತು ಹೆಂಡತಿ ಮಕ್ಕಳೆಲ್ಲ ದಿಗ್ಭ್ರಾಂತರಾದರು. ಕ್ಷಣದಲ್ಲಿ ನಡೆದ ಅಚಾತುರ್ಯವನ್ನು ಕಂಡ ಹಿರಿಯ ಮಾವಂದಿರಿಗೆ ದಿಕ್ಕು ತೋಚದಾಯಿತು. ಆದರೂ ಸಂಭಾಳಿಸಿಕೊoಡು ಶಂಭುವನ್ನು ಕೂಡಲೇ ಅವನ ಆಳುಗಳಿಂದಲೇ ಆಸ್ಪತ್ರೆಗೆ ಸಾಗಿಸಿದರು. ಅತ್ತ ಶ್ರೀಧರ ಶೆಟ್ಟರೂ, ಶಿವ ಮತ್ತು ಅವನ ಸಹಚರರನ್ನು ಉಪಾಯವಾಗಿ ಅಲ್ಲಿಂದ ಕರೆದೊಯ್ದು ಕೆಲವು ದಿನಗಳ ಕಾಲ ತಮ್ಮ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟರು. ಶಂಭು ಶೆಟ್ಟಿಯ ಹೆಂಡತಿ ಮತ್ತು ಅಣ್ಣಂದಿರು, ಶ್ರೀಧರ ಶೆಟ್ಟರ ಹಾಗೂ ಅವರ ಸಹಚರರ ಮೇಲೆ ದೂರು ದಾಖಲಿಸಿದರು. ಆದರೆ ಶೆಟ್ಟರು ಕಾನೂನು ಬಲ್ಲವರು ಮತ್ತು ಚಾಣಾಕ್ಷರೂ ಆಗಿದ್ದುದರಿಂದ, ‘ಈ ಕೃತ್ಯದಲ್ಲಿ ತನ್ನದೇನೂ ತಪ್ಪಿಲ್ಲ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲು ತಾನು ಪಂಚಾಯಿತಿ ಕರೆದಿದ್ದೆ. ಆದರೆ ತನ್ನನ್ನು ಕೊಲ್ಲಲೆಂದೇ ಅಣ್ಣಂದಿರು ಸಂಚು ಹೂಡಿದ್ದರು. ಮಾರಕಾಯುಧಗಳನ್ನೂ ಮತ್ತು ಹಲವು ಅಪರಾಧ ಹಿನ್ನೆಲೆಯುಳ್ಳ ರೌಡಿಗಳನ್ನೂ ಕರೆದು ತಂದು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು. ಅದಕ್ಕೆ ಅವರಲ್ಲಿದ್ದ ಮಾರಕಾಯುಧಗಳೇ ಸಾಕ್ಷಿ. ಆ ಸಂದರ್ಭದಲ್ಲಿ ನನ್ನ ಗೆಳೆಯ ನನ್ನನ್ನು ರಕ್ಷಿಸುವ ಗಡಿಬಿಡಿಯಲ್ಲಿ ಕೈಗೆ ಸಿಕ್ಕಿದ ದೊಣ್ಣೆಯನ್ನು ಅವನತ್ತ ಬೀಸಿದನಷ್ಟೆ!’ ಎಂದು ಪೊಲೀಸ್ ಠಾಣೆಯಲ್ಲಿ ವಿವರಣೆ ನೀಡಿದರು ಹಾಗೂ ಸಂಬoಧಪಟ್ಟ ಕೆಲವು ಪೊಲೀಸರನ್ನೂ ತಮ್ಮತ್ತ ಒಲಿಸಿಕೊಂಡರು. ಪೊಲೀಸರು ಕೋರ್ಟಿಗೆ ಆರೋಪಣಾಪಟ್ಟಿ ಸಲ್ಲಿಸಿದರು. ಕೇಸು ಕೋರ್ಟು ಮೆಟ್ಟಿಲೇರಿತು. ಒಂದು ವಾರದ ನಂತರ ಶೆಟ್ಟರು ಗೆಳೆಯನನ್ನೂ, ಅವನ ತಂಡವನ್ನೂ ನಿರೀಕ್ಷಣಾ ಜಾಮೀನಿನ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ತಲೆ ಒಡೆದು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿದ ಶಂಭು ಶೆಟ್ಟಿ ಗುಣವಾಗಿ ಮನೆಗೆ ಮರಳಿದ. ಆದರೆ ಆಮೇಲೆ ಅವನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬoತಾಗಿದ್ದ! ತಮ್ಮನ ಅವಸ್ಥೆಯನ್ನು ಕಂಡ ಉಳಿದ ಹಿರಿಯಣ್ಣಂದಿರೂ ಮತ್ತವರ ಪತ್ನಿಯರೂ ಸಂಪೂರ್ಣ ಕುಗ್ಗಿದರು. ಆದರೆ ಶ್ರೀಧರ ಶೆಟ್ಟರು ಅದೇ ಸಂದರ್ಭವನ್ನು ಬಳಸಿಕೊಂಡರು. ಆ ನಂತರ ಆಗಾಗ ಶಂಭುವನ್ನೂ ಮತ್ತು ಹಿರಿಯ ಅಣ್ಣಂದಿರನ್ನೂ ಬೆದರಿಸುತ್ತ ಬಂದವರು ಕೊನೆಯಲ್ಲಿ ಜಮೀನು ಸಮಪಾಲು ಮಾಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು. ಇತ್ತ, ‘ಕೇಸು ಇತ್ಯಾರ್ಥವಾಗುವವರೆಗೆ ಊರು ಬಿಟ್ಟು ಹೋಗುವಂತಿಲ್ಲ!’ ಎಂದು ಕಾನೂನು ಅವರನ್ನು ಎಚ್ಚರಿಸಿತ್ತು. ಹಾಗಾಗಿ ತಮ್ಮ ಪಾಲಿಗೆ ಬಂದ ಜಾಗದಲ್ಲಿ ತಾತ್ಕಾಲಿಕ ಮನೆಯೊಂದನ್ನು ಕಟ್ಟಿಕೊಂಡು ವಾಸಿಸತೊಡಗಿದರು. ಶ್ರೀಧರ ಶೆಟ್ಟರು ಮತ್ತು ಶಿವ ಹಾಗೂ ಅವನ ಸಂಗಡಿಗರ ಮೇಲಿದ್ದ ಕೇಸು ಸುಮಾರು ಆರು ವರ್ಷಗಳ ಕಾಲ ನಡೆದು ಕೊನೆಯಲ್ಲಿ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದು ಹೋಯಿತು. ಅದರಿಂದ ಸಂತುಷ್ಟರಾದ ಶೆಟ್ಟರು ತಮ್ಮ ಇಪ್ಪತ್ತೈದು ಸೆಂಟ್ಸ್ ವ್ಯವಸಾಯದ ಭೂಮಿಯನ್ನು ಜೀವದ ಗೆಳೆಯನ ಹೆಸರಿಗೆ ಬರೆದುಕೊಟ್ಟು ಅವನ ಜೀವನಕ್ಕೂ ದಾರಿ ಮಾಡಿಕೊಟ್ಟರು. ಇಷ್ಟೆಲ್ಲ ನಡೆದ ಮೇಲೆ ಶೆಟ್ಟರ ಕುಟುಂಬಸ್ಥರು ಕೂಡಾ ಅವರೊಂದಿಗಿನ ಸಂಬoಧವನ್ನು ಕಡಿದುಕೊಂಡರು. ಆದ್ದರಿಂದ ಶೆಟ್ಟರಿಗೂ ಹುಟ್ಟೂರಿನ ಮೇಲೆ ಬೇಸರ ಬಂದುಬಿಟ್ಟಿತು. ಹಾಗಾಗಿ ಹೊಸ ಊರು ಮತ್ತು ಜಾಗದ ಅನ್ವೇಷಣೆಯಲ್ಲಿ ತೊಡಗಿದರು. ಅದೇ ಸಮಯದಲ್ಲಿ ಗಂಗರಬೀಡಿನ ಹಸುರು ಸಮೃದ್ಧಿಯ ಗುಣಗಾನವು ತಮ್ಮ ಆಪ್ತ ಆಳುಗಳ ಮೂಲಕ ಆಗಾಗ ಅವರ ಕಿವಿಗೆ ಬೀಳುತ್ತಿದ್ದುದರಿಂದ ಮನಸ್ಸು ಅತ್ತ ಸೆಳೆಯಿತು. ಹಾಗೆ ಹೋದವರಿಗೆ ಗಂಗರಬೀಡಿನ ಹಯವದನ ಅಡಿಗರ ಪರಿಚಯವಾಯಿತು.
ಹಯವದನ ಅಡಿಗರ ಪೂರ್ವಜರು ಐದಾರು ತಲೆಮಾರಿಗಿಂತಲೂ ಮುಂಚೆಯೇ ಗಂಗರಬೀಡಿಗೆ ಬಂದು ನೆಲೆಸಿ ಕೃಷಿ ಬದುಕು ಕಟ್ಟಿಕೊಂಡು ನಿರುಮ್ಮಳವಾಗಿ ಬಾಳಿ ಬದುಕಿದವರು. ಹಾಗಾಗಿ ಅಡಿಗರು ಕೂಡಾ ಹಾಗೆಯೇ ಜೀವಿಸುತ್ತ ಬಂದವರು. ಆದರೆ ಅವರಿಗೆ ವಯಸ್ಸಾಗುತ್ತ ಬಂದoತೆ ತಮ್ಮ ಭೂಮಿಯನ್ನು ಉತ್ತು ಬಿತ್ತು ಹಸನು ಮಾಡುವವರಿಲ್ಲದೆ ಪಾಳು ಬಿದ್ದುಬಿಟ್ಟಿತು. ಕಾರಣ ಅಡಿಗರ ಐವರು ಮಕ್ಕಳು ಕೂಡಾ ತಮ್ಮ ಹುಟ್ಟೂರು, ಹಸಿರು ಗಂಗರಬೀಡುವನ್ನು ತೊರೆದು ಹೈಟೆಕ್ ನಗರವಾದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ನಡುವೆ ಪತ್ನಿಯೂ ತೀರಿಕೊಂಡ ನಂತರ ಎಂಬತ್ತರ ಹರೆಯದ ಅಡಿಗರು ಒಂಟಿಯಾಗಿಬಿಟ್ಟರು. ಮಕ್ಕಳು ಆಗಾಗ್ಗೆ ಬಂದು ಅಪ್ಪನನ್ನು ನೋಡಿಕೊಂಡು ಹೋಗುತ್ತಿದ್ದವರು ತಮ್ಮೊಂದಿಗೆ ಬಂದಿರಲು ಅವರನ್ನು ಒತ್ತಾಯಿಸುತ್ತಿದ್ದರಾದರೂ ಅಡಿಗರಿಗೆ ತಾವು ಹುಟ್ಟಿ ಬೆಳೆದ ಮನೆಮಾರಿನ ಮೋಹದಿಂದ ಅಷ್ಟುಬೇಗನೆ ಕಳಚಿಕೊಳ್ಳಲಾಗಲಿಲ್ಲ. ಆದರೆ ಬರಬರುತ್ತ ಅವರನ್ನು ಭಾದಿಸತೊಡಗಿದ ವಯೋಸಹಜ ಕಾಯಿಲೆಗಳು ಕ್ರಮೇಣ ಅವರ ಜೀವನೋತ್ಸಾಹವನ್ನು ಕುಗ್ಗಿಸತೊಡಗಿದವು. ಹೀಗಾಗಿ ಒಮ್ಮೆ ಇದ್ದಕ್ಕಿದ್ದ ಹಾಗೆ ಅವರಿಗೆ, ‘ಈ ಭೂಮಿಯ ಬದುಕು ನಶ್ವರ. ವ್ಯಾಮೋಹವೇ ಮಾನವನ ಪರಮ ಶತ್ರು!’ ಎಂದೆನ್ನಿಸಿಬಿಟ್ಟಿತು. ಹಾಗಾಗಿ ತಮ್ಮ ಉಳಿದ ಕಾಲವನ್ನು ಮಕ್ಕಳೊಂದಿಗೆ ಕಳೆಯಲು ನಿರ್ಧರಿಸಿದರು. ಇದೇ ಸಮಯದಲ್ಲಿ ಶ್ರೀಧರ ಶೆಟ್ಟರೂ ಅಡಿಗರತ್ತ ಬಂದರು. ಅವರ ಮನೆ ಮತ್ತು ಭೂಮಿಯನ್ನು ಕೊಂಡುಕೊಳ್ಳಲು ಯೋಚಿಸಿ ಪಟ್ಟುಬಿಡದೆ ಚೌಕಾಶಿಗಿಳಿದರು. ಅಡಿಗರೂ ಹೆಚ್ಚು ಯೋಚಿಸಲಿಲ್ಲ. ಶೆಟ್ಟರು ಕಟ್ಟಿದ ಬೆಲೆಗೆ ತಮ್ಮ ಆಸ್ತಿಯನ್ನು ಮಾರಿಬಿಟ್ಟರು. ವ್ಯಾಪಾರ ಮುಗಿದ ಕೂಡಲೇ ಶೆಟ್ಟರು ಅಡಿಗರನ್ನು ಅವರ ಮಕ್ಕಳ ಬಳಿಗೆ ಕ್ಷೇಮವಾಗಿ ತಲುಪಿಸುವ ಜವಾಬ್ದಾರಿಯನ್ನೂ ಹೊತ್ತುಕೊಂಡು ಅವರ ಊರ ಋಣವನ್ನು ತೀರಿಸುವಲ್ಲಿ ಸಫಲರಾದರು.
(ಮುಂದುವರೆಯುವುದು)
Post a Comment