ವೈವಿಧ್ಯಮಯ ದಸರಾ
🖋 ಶ್ರೀನಿವಾಸ ಜೋಕಟ್ಟೆ, ಮುಂಬೈ
ಭಾರತ ಉತ್ಸವಗಳ ದೇಶ.ಇಲ್ಲಿನ ಪ್ರತೀ ಪ್ರಾಂತದಲ್ಲಿ ತನ್ನದೇ ಆದ ರೀತಿಯಲ್ಲಿ ಪರ್ವ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ನವರಾತ್ರಿಯ ಸಂದರ್ಭದಲ್ಲಿ ಅನೇಕ ಕಡೆ ದೇವಿಮೂರ್ತಿಯ ಸ್ಥಾಪನೆ ಮಾಡುತ್ತಾರೆ. ದೇಶದಲ್ಲಿ ದಸರಾದ ರಾಜಧಾನಿ ಯಾವುದು ಅಂದರೆ ಕೋಲ್ಕತ್ತಾ. ಮುಖ್ಯವಾಗಿ ಬಂಗಾಳದಲ್ಲಿ ದೇವಿ ಪ್ರತಿಮೆಯ ಸ್ಥಾಪನೆ ಬಹಳ ಪ್ರಖ್ಯಾತಿ ಪಡೆದಿದೆ. ಇಲ್ಲಿ ಪ್ರತಿಮೆ ಸ್ಥಾಪನೆಯ ದೃಶ್ಯ ವೈಜ್ಞಾನಿಕವೂ ಆಗಿರುತ್ತದೆ. ಇದಕ್ಕೆ ಮೂರ್ತಿಯನ್ನು ತಯಾರಿಸುವ ಮಣ್ಣು ಕೂಡಾ ಅಷ್ಟೇ ಮಹತ್ವ ಪಡೆಯುತ್ತದೆ.ಈ ಮಣ್ಣು ಕೊಲ್ಕತ್ತಾ ದ ಸೋನಾಗಛೀಯಿಂದ ತರುತ್ತಾರೆ.
ದುರ್ಗಾ ಮಾತೆ ತನ್ನ ಭಕ್ತೆ ವೇಶ್ಯೆಗೆ ವರದಾನ ನೀಡಿದ್ದರಂತೆ -"ನಿಮ್ಮ ಕೈಯಿಂದ ನೀಡುವ ಗಂಗೆಯ ಮಣ್ಣಿನಿಂದಲೇ ನನ್ನ ಪ್ರತಿಮೆ ತಯಾರಿಸುತ್ತಾರೆ." ಬಹುಶ: ಸಾಮಾಜಿಕ ತಿರಸ್ಕಾರದಿಂದ ಈ ವೇಶ್ಯೆಯರನ್ನು ಪಾರಾಗಿಸಲು ಈ ಪರಂಪರೆ ಆರಂಭಿಸಿರಬಹುದು.
ಸಾಮಾಜಿಕ ಸುಧಾರಣೆಯ ಉದ್ದೇಶದಿಂದ ದುರ್ಗಾಪೂಜೆಯ ವರ್ತಮಾನ ಉತ್ಸವದ ಸ್ವರೂಪ ಬಂಗಾಳದಲ್ಲಿ ಕಂಡುಬರುತ್ತದೆ. ಇದರ ವಿಸ್ತಾರ ಸಂಪೂರ್ಣ ದಕ್ಷಿಣ ಏಷ್ಯಾದಲ್ಲಿ ಗೋಚರವಾಗುತ್ತದೆ. ಶಕ್ತಿಯ ವೈಜ್ಞಾನಿಕ ಪೂಜೆಯ ದೃಶ್ಯ ನಮಗೆ ಇಲ್ಲಿ ಪ್ರಾಪ್ತಿಯಾಗುತ್ತದೆ. ಇದರಲ್ಲಿ ಪೂಜೆಗಾಗಿ ವಿಶಿಷ್ಟ ಪ್ರತಿಮೆಯ ನಿರ್ಮಾಣವನ್ನು ಮಾಡಲಾಗುತ್ತದೆ. ಈ ಪ್ರತಿಮೆಯ ಮುಂದೆ ಸಪ್ತಶತಿಯ ಪಾಠವನ್ನು ನಮ್ಮ ಕಿವಿಗಳಿಗೆ ಕೇಳಿಸಲಾಗುತ್ತದೆ .ಆವಾಗ ಭಕ್ತರಿಗೆ ಅಪಾರ ಆತ್ಮವಿಶ್ವಾಸ ಮತ್ತು ಮಾನಸಿಕ ಬಲ ಮೂಡುತ್ತದೆ.
ಕೋಲ್ಕತ್ತಾದ ಕುಮಾರತುಲಿ ಕ್ಷೇತ್ರದಲ್ಲಿ ಭಾರತದ ಸರ್ವಾಧಿಕ ದೇವಿ ಪ್ರತಿಮೆಗಳ ನಿರ್ಮಾಣ ಮಾಡಲಾಗುತ್ತದೆ.ವಿದೇಶಗಳಿಗೂ ಇಲ್ಲಿನ ಮೂರ್ತಿಗಳನ್ನು ರಫ್ತು ಮಾಡಲಾಗುತ್ತದೆ. ವಿಶೇಷ ಅಂದರೆ ಸೋನಾಗಛೀಯ ಮಣ್ಣನ್ನು ಪ್ರತಿಮೆ ತಯಾರಿಯಲ್ಲಿ ಬಳಸಲಾಗುತ್ತದೆ. ಕೋಲ್ಕತ್ತಾದ ಸೋನಾಗಛೀ ಕ್ಷೇತ್ರ ದೇಹ ವ್ಯಾಪಾರಕ್ಕೆ ದೇಶದಲ್ಲಿಯೇ ಬಹಳ ಕುಖ್ಯಾತಿ .ಆದರೆ ಇಲ್ಲಿಯ ಮಣ್ಣು ತಂತ್ರಶಾಸ್ತ್ರದ ಪ್ರಾಚೀನ ವಿಜ್ಞಾನದಲ್ಲಿ ಸ್ಥಾನ ಪಡೆದಿದೆ. ಆನಂದ ,ದೈಹಿಕ ಸುಖ ತಂತ್ರ ಸಾಧನೆಯ ಉಪಾಸನಾದ ಉದ್ದೇಶವೂ ಆಗಿದೆ. ಇದರಲ್ಲಿ ಸಾಮಾಜಿಕ ಸುಧಾರಣೆಯ ಸೂತ್ರವು ಕಂಡುಬರುತ್ತದೆ. ಈ ಪರಂಪರೆಯು ತಪ್ಪಿಗೆ ಸಜೆ ಅನುಭವಿಸುವ ಸ್ತ್ರೀಯ ಉತ್ಥಾನ ಮತ್ತು ಸನ್ಮಾನದ ಪ್ರಕ್ರಿಯೆಯ ಭಾಗವಾಗಿಯೂ ಗುರುತಿಸಲಾಗುತ್ತದೆ .
ಮಹಾಲಯದಂದು ದೇವಿಯ ಪ್ರತಿಮೆಗೆ ಇಲ್ಲಿ ನೇತ್ರವನ್ನು ಪ್ರಧಾನ ಮಾಡಲಾಗುತ್ತದೆ. ಇದಕ್ಕೆ ಚಕ್ಷುದಾನ ಎನ್ನುತ್ತಾರೆ. ದೇವಿ ತನ್ನ ಜೊತೆ ಗಣಪತಿ ಕಾರ್ತಿಕೇಯರನ್ನು ಮುಂದಿಟ್ಟು ಮಹಾಕಾಳಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯ ವಿರಾಟ್ ಸ್ವರೂಪವನ್ನು ಧರಿಸಿ ತನ್ನ ಪತಿಯನ್ನು ಕೈಲಾಸದಲ್ಲಿ ಬಿಟ್ಟು ಸಂಚಾರಕ್ಕೆ ಬರುತ್ತಾರಂತೆ. ಅನೇಕ ಕಡೆ ಪಾಡ್ಯದಂದು ದೇವಿಯ ಸ್ಥಾಪನೆ ಮಾಡಿದರೆ, ಕೋಲ್ಕತ್ತಾದಲ್ಲಿ ಕೊನೆಯ ಆರು ದಿನ ವಿಶೇಷ.ಬಂಗಾಳದಲ್ಲಿ ದುರ್ಗಾಷ್ಟಮಿ ದಿನ ಪ್ರತಿಮೆಯ ಮುಖದ ವಸ್ತ್ರ ತೆರೆಯಲಾಗುತ್ತದೆ.ದಸರಾ ಸಮಯ ಕೊಲ್ಕತ್ತಾ ನಿದ್ದೆ ಮಾಡುವುದಿಲ್ಲ.
ದುರ್ಗಾಪೂಜೆಯ ಉತ್ಸವವೂ 20-21ರಲ್ಲಿ ಇತರ ಉತ್ಸವಗಳಂತೆ ಕೊರೋನಾ ಇಫೆಕ್ಟ್ ಗೆ ತುತ್ತಾಗಿತ್ತು. ಇಂದು ಮತ್ತೆ ದೇಶಾದ್ಯಂತ ನವರಾತ್ರಿ - ದಸರಾ ಉತ್ಸವದ ತಯಾರಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ನಮ್ಮ ದೇಶದಲ್ಲಿ ದಸರಾ ಉತ್ಸವ ಅಂದಕೂಡಲೇ ಕೋಲ್ಕತ್ತಾದ ದುರ್ಗಾಪೂಜೆ, ಗುಜರಾತ್ ನ ದಾಂಡಿಯಾರಾಸ್ ತಕ್ಷಣ ಕಣ್ಣ ಮುಂದೆ ಬರುವುದು. ದಸರಾ ದಿನ ಮಕ್ಕಳಿಗೆ ಅಕ್ಷರ ಅಭ್ಯಾಸ, ಗೃಹಪ್ರವೇಶ ,ಅನ್ನಪ್ರಾಶನ, ಕಿವಿ ಚುಚ್ಚುವ ಶಾಸ್ತ್ರ, ಯಜ್ಞೋಪವಿತ ಸಂಸ್ಕಾರ, ಭೂಮಿಪೂಜೆ ....ಇತ್ಯಾದಿ ಕಾರ್ಯಗಳನ್ನು ಶುಭ ಎಂದು ತಿಳಿಯುತ್ತಾರೆ.
ದೇಶದಲ್ಲಿ ಮುಖ್ಯವಾಗಿ ನಾಲ್ಕು ದಸರಾ ಉತ್ಸವಗಳು ಬಹಳ ಪ್ರಸಿದ್ಧಿ.ಮೈಸೂರು ದಸರಾ,ಕುಲ್ಲೂ ದಸರಾ,ಬಸ್ತರ್ ದಸರಾ,ಮತ್ತು ಕೋಟಾ ದಸರಾ.ಈ ನಾಲ್ಕು ದಸರಾ ಉತ್ಸವಗಳೂ ಪ್ರತ್ಯೇಕ ಛಾಪು ಪಡೆದಿವೆ.
ಬನಾರಸ್ ,ದೆಹಲಿಯ ರಾಮಲೀಲಾ ಆಯೋಜನೆಗಳೂ ದಸರಾ ಸಮಯ ಅಷ್ಟೇ ಖ್ಯಾತಿ ಪಡೆದಿವೆ.
ದುರ್ಗಾಪೂಜೆ ಎಂದಕೂಡಲೇ ತನ್ನ ವಿಶೇಷತೆಗಳಿಂದ ಪಶ್ಚಿಮಬಂಗಾಳ ತಕ್ಷಣ ನೆನಪಾಗುತ್ತದೆ. ಅಲ್ಲಿನ ಸಂಭ್ರಮವೇ ಸಂಭ್ರಮ .ವಿವಾಹವಾದ ತರುಣಿಯು ತವರು ಮನೆಗೆ ಬಂದಾಗ ಆಗುವ ಖುಷಿಯಂತೆ ದುರ್ಗಾಮಾತೆ ತವರಿಗೆ ಬಂದ ಸಂಭ್ರಮ ಈ ಕೊಲ್ಕತ್ತಾ ನಿವಾಸಿಗಳಿಗೆ ದಸರಾ ಅಂದರೆ.
ಮಹಾರಾಷ್ಟ್ರದಲ್ಲಿ ಪೇಣ್ ಹೇಗೆ ಗಣೇಶ ಮೂರ್ತಿಗಳಿಗೆ ಪ್ರಸಿದ್ಧವೋ ಹಾಗೆ ಕೋಲ್ಕತ್ತಾದ ಕುಮಾರ್ ತುಲಿ ದುರ್ಗಾ ಪ್ರತಿಮೆಗಳಿಗೆ ಬಹಳ ಪ್ರಸಿದ್ಧಿ.
ಕಳೆದ ಕೊರೊನಾದಲ್ಲಿ ಡಾಕ್ಟರ್ ವೇಷದಾರಿ ದುರ್ಗಾದೇವಿ ಕೊರನಾಸುರನನ್ನು ವಧೆ ಮಾಡುವ ಮೂರ್ತಿ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೂರ್ತಿಯ ಪಕ್ಕದಲ್ಲಿ ಗಣೇಶ ಪೊಲೀಸ್ ವೇಷದಲ್ಲಿ, ಲಕ್ಷ್ಮಿ ನರ್ಸ್ ಯೂನಿಫಾರ್ಮ್ ನಲ್ಲಿ, ಸರಸ್ವತಿ ಶಿಕ್ಷಕಿಯ ರೂಪದಲ್ಲಿದ್ದರು.
ಭಾರತದಲ್ಲಿ ಪ.ಬಂಗಾಳದ ದುರ್ಗಾಪೂಜೆಗೆ ವಿಶೇಷ ಸ್ಥಾನ . ಮಹಾಕಾಳಿಯ ನಗರ ಕೊಲ್ಕತ್ತಾದಲ್ಲಿ ಐದು ದಿನಗಳ ಸಂಭ್ರಮದ ದಸರಾ ಉತ್ಸವವು ಪಂಚಮಿಯಿಂದ ಮೊದಲ್ಗೊಂಡು ಸಾಮಾನ್ಯವಾಗಿ ಆಚರಿಸುತ್ತಾರೆ.
ದುರ್ಗಾಪೂಜೆಗೆ 51 ಶಕ್ತಿಪೀಠಗಳು ಬಹು ಪ್ರಸಿದ್ದಿ.ಇಲ್ಲಿ 9 ಶಕ್ತಿಪೀಠ ಗಳಿಗೆ ಇನ್ನೂ ವಿಶೇಷ ಮಹತ್ವ ಇರುತ್ತದೆ . ಅದರಲ್ಲೊಂದು ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮಿ ಮಂದಿರ.
ದಾಂಡಿಯಾ: ನವರಾತ್ರಿಯಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಉತ್ಸವಕ್ಕೆ ನಾವು ಸಾಮಾಜಿಕ ಮತ್ತು ಸಾಮೂಹಿಕ ಸಂಸ್ಕಾರದ ಮಾನ್ಯತೆ ನೀಡುತ್ತೇವೆ.ಅದರಲ್ಲಿ ದಾಂಡಿಯಾ ಆಡುವುದು , ಸಾಮೂಹಿಕ ರೀತಿಯಲ್ಲಿ ದೇವಿಯ ಪೂಜೆಯ ಅವಕಾಶ ನವರಾತ್ರಿಯಲ್ಲಿ ನಮಗೆ ದೊರೆಯುವುದು.ಈ ನವರಾತ್ರಿ ಉತ್ಸವ ಮಾತೃಶಕ್ತಿಯ ಸಂಕೇತವಾಗಿದೆ. ಈ ವರ್ಷವೂ ಎಲ್ಲಾ ಹಬ್ಬಗಳಂತೆ ನವರಾತ್ರಿ ಉತ್ಸವವೂ ಗೌಜಿ ಗದ್ದಲಗಳಿಂದ ಹೊರಗುಳಿದಿದೆ. ಗಣೇಶ ಚತುರ್ಥಿಯ ಸಂಭ್ರಮವನ್ನು ಹೊರತುಪಡಿಸಿದರೆ ನವರಾತ್ರಿ ಉತ್ಸವವೇ ಹತ್ತು ದಿನಗಳ ಅತಿಹೆಚ್ಚಿನ ಸಂಭ್ರಮ ತರುವಂತಹ ಹಬ್ಬ. ದಾಂಡಿಯಾರಾಸ್ , ರಾಮಲೀಲಾ ಆಯೋಜನೆಗೆ ಅನೇಕ ಕಡೆ ಅನುಮತಿ ಇಲ್ಲದೆ ನವರಾತ್ರಿ ಉತ್ಸವವೂ ಅನೇಕರಿಗೆ ಸಂಭ್ರಮ ಕಡಿಮೆ ಅನಿಸಿದೆ.
ಮುಂಬೈಯಲ್ಲಿ ರಾಮಲೀಲಾ ಪ್ರದರ್ಶನ ನೀಡಲು ಪ್ರತೀ ವರ್ಷ ಉತ್ತರ ಭಾರತದ ಅನೇಕ ಕಲಾವಿದರ ತಂಡವು ಬರುತ್ತದೆ.
ನವರಾತ್ರಿ ಅಂದರೆ ಶಕ್ತಿ ಮತ್ತು ಆರಾಧನೆಯ ದಿನಗಳು. ಶ್ರದ್ಧೆಯಿಂದ ದುರ್ಗಾಮಾತೆಯ ಭಕ್ತಿಯಲ್ಲಿ ತಲ್ಲೀನರಾಗಲು ಗರ್ಬಾ ಮಾಧ್ಯಮವೂ ಒಂದು . ಮಾತೆಯನ್ನು ಪ್ರಸನ್ನಗೊಳಿಸುವಲ್ಲಿ ಗರ್ಬಾ ನೃತ್ಯವೂ ಒಂದು. ಆದಿಶಕ್ತಿ ಅಂಬಾಮಾತೆಯ ಆರಾಧನೆಯ ಜೊತೆಗೆ ಪಾರಂಪರಿಕ ಮತ್ತು ವೈವಿಧ್ಯಮಯ ಬಣ್ಣಗಳಿಂದ ಅಲಂಕೃತಗೊಂಡ ಉಡುಪುಗಳನ್ನು ಧರಿಸಿ ಮಕ್ಕಳಿಂದ ಹಿಡಿದು ವರಿಷ್ಠರ ತನಕ ಕೈಗೊಳ್ಳುವ ಗರ್ಬಾಘಟಸ್ಥಾಪನೆಯ ಆನಂದ ಅವರ್ಣನೀಯ. ಲಯಬದ್ಧ ತಾಳನೃತ್ಯದಿಂದ ದೇವಿಯನ್ನು ಪ್ರಸನ್ನಗೊಳಿಸುವುದು ಗರ್ಬಾನೃತ್ಯ .ಇಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಾ ಚಪ್ಪಾಳೆ ಮೂಲಕ ಮಾಡುವ ನೃತ್ಯ ಅದು ಗರ್ಬಾನೃತ್ಯ. ಕೋಲನ್ನು ಬಳಸಿ ಮಾಡುವ ನೃತ್ಯ ದಾಂಡಿಯಾ ನೃತ್ಯ. ಗರ್ಬಾ ನೃತ್ಯ ಆರತಿಯ ಮೊದಲು ನಡೆದರೆ, ದಾಂಡಿಯಾ ನೃತ್ಯ ಪೂಜೆಯ ಅನಂತರ ಮಾಡುತ್ತಾರೆ.
ಪರಂಪರೆಗೆ ಆಧುನಿಕತೆಯ ಸ್ಪರ್ಶ ನೀಡುವ ಯುವ ವರ್ಗಕ್ಕೆ ದಾಂಡಿಯಾ ನೃತ್ಯ ಇಲ್ಲದಿದ್ದರೆ ನಿರಾಶೆ ಸಹಜ.ನವರಾತ್ರಿ ಉತ್ಸವಕ್ಕೆ ವಿಶೇಷ ಅಸ್ತಿತ್ವವನ್ನು ದಾಂಡಿಯಾ ನೀಡುತ್ತಾ ಬಂದಿದೆ. ಆದರೆ ಕೊರೋನಾ ದಿನಗಳು ಅವೆಲ್ಲವನ್ನು ನುಂಗಿ ಹಾಕುತ್ತಾ ಬಂದಿದೆ.
"ನವರಾತ್ರಿಯಲ್ಲಿಒಂಬತ್ತು ದಿನಕ್ಕೆ 9 ಬಣ್ಣಗಳು ಎನ್ನುವ ಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರ ಮನದಲ್ಲಿ ಭದ್ರವಾಗಿ ಕೂತಿದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ 9 ದಿನಕ್ಕೆ 9 ಬಣ್ಣ ಎನ್ನುವ ಯಾವ ಆಚರಣೆಯೂ ಇಲ್ಲ. ನಮ್ಮಲ್ಲಿರುವುದು ಪಂಚವರ್ಣ ಬಣ್ಣಗಳು ಮಾತ್ರ.' ಎನ್ನುವುದು ವಿದ್ವಾಂಸರ ಅನಿಸಿಕೆ.
ಅಕ್ಷಯ ತದಿಗೆಯಂದು ಹೇಗೆ ಚಿನ್ನ ಖರೀದಿ ಇತ್ತೀಚಿನ ಒಂದು ಟ್ರೆಂಡ್ ಆಗುತ್ತಿದೆಯೋ ಅದೇ ರೀತಿ ನವರಾತ್ರಿ ಸಮಯದಲ್ಲಿ 9 ಬಣ್ಣ ಎನ್ನುವುದು ಮಾರುಕಟ್ಟೆಯ ಒಂದು ತಂತ್ರ ಅಷ್ಟೆ..
Post a Comment