ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು.
ರಾಮನಗರ: ಬೆಳ್ಳಂಬೆಳಗ್ಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಜೇಶ್ (42), ಉಮಾ (35) ಸ್ಥಳದಲ್ಲೇ ಸಾವನಪ್ಪಿರುವ ದುರ್ದೈವಿಗಳು. ರಾಜೇಶ್ ಕುಟುಂಬ ಬೆಂಗಳೂರಿನ ಪೀಣ್ಯ ಮೂಲದವರಾಗಿದ್ದಾರೆ.
ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ಓಮ್ನಿ ಕಾರೊಂದು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಮುಂದೆ ಹೋಗುತ್ತಿದ್ದ ಇನ್ನೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಲಾರಿ ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ರಾಮನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ: ಇತ್ತೀಚಿನ ಕೆಲ ತಿಂಗಳಿಂದ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗಿತ್ತು. ಈಗ ಮತ್ತೊಮ್ಮೆ ವಾಹನ ಚಾಲಕರ ಅತಿಯಾದ ವೇಗದಿಂದ ಮತ್ತೆ ಅಪಘಾತಗಳ ಪ್ರಮಾಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ.
Post a Comment