ಕರ್ನಾಟಕ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್: ಕೇಂದ್ರ ಇಂಧನ ಸಚಿವ ಆರ್ಕೆ ಸಿಂಗ್ ಭೇಟಿಯಾದ ಕೆಜೆ ಜಾರ್ಜ್.
ಬೆಂಗಳೂರು, ಅಕ್ಟೋಬರ್ 12: ಒಂದೆಡೆ ಸರಿಯಾದ ಮಳೆ ಇಲ್ಲ. ಮತ್ತೊಂದೆಡೆ ಹಲವು ಜಿಲ್ಲೆಗಳಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಈ ನಡುವೆ ರಾಜ್ಯದ ಉದ್ದಗಲಕ್ಕೂ ಅಘೋಷಿತ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿದೆ. ಸದ್ಯ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಕರ್ನಾಟಕ ಇಂಧನ ಇಲಾಖೆಯ ಸಚಿವ ಕೆ.ಜೆ.ಜಾರ್ಜ್ ಭೇಟಿ ಮಾಡಿದ್ದಾರೆ. ಕರ್ನಾಟಕಕ್ಕೆ ಹೆಚ್ಚುವರಿ ಅಗತ್ಯ ವಿದ್ಯುತ್ ಪೂರೈಸುವಂತೆ ಸಚಿವ ಕೆ.ಜೆ.ಜಾರ್ಜ್ ಮನವಿ ಮಾಡಿದ್ದಾರೆ.
ಕರ್ನಾಟಕದ ಇಂಧನ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲು ಸಚಿವ ಕೆ.ಜೆ.ಜಾರ್ಜ್ ಭೇಟಿ ಮಾಡಿದ್ದು, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್‌ಗೆ ಮನವಿ ಸಲ್ಲಿದ್ದಾರೆ. ಭೇಟಿ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.
ಈ ಕುರಿತಾಗಿ ಸಚಿವ ಕೆ.ಜೆ.ಜಾರ್ಜ್ ಟ್ವೀಟ್ ಮಾಡಿದ್ದು, ನಾನು ಭಾರತ ಸರ್ಕಾರದ ಮಾನ್ಯ ವಿದ್ಯುತ್, ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಅವರನ್ನು ಕರ್ನಾಟಕದ ಇಂಧನ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲು ಭೇಟಿ ಮಾಡಿದೆ. ಕೇಂದ್ರೀಯ ಉತ್ಪಾದನಾ ಕೇಂದ್ರಗಳಲ್ಲಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವ ಮೂಲಕ ಕರ್ನಾಟಕದ ಹೆಚ್ಚುವರಿ ವಿದ್ಯುತ್ ಅಗತ್ಯವನ್ನು ಪೂರೈಸಲು ಸಹಕಾರ ನೀಡಬೇಕೆಂದು ವಿನಂತಿಸಿದೆ.
Post a Comment