ವಿವಶ.....

(ಇಲ್ಲಿಯವರೆಗೆ......)

---------------------------------------------------------------

ಶೆಡ್ಡುಗಳಿಗೆ ಬಾಗಿಲು ಹೇಗಪ್ಪಾ ಅಂದರೆ ಡಾಂಬರು ಡಬ್ಬಗಳನ್ನು ಸೀಳಿ ಚೌಕಾಕಾರದಲ್ಲಿ ಕತ್ತರಿಸಿದ ತುಂಡನ್ನು ಶೆಡ್ಡಿನ ದಾರಂದದ ಒಂದು ಕಂಬಕ್ಕೆ ಕಬ್ಬಿಣದ ಸರಿಗೆಯಿಂದ ಬಿಗಿಯಲಾಗಿದ್ದರೆ ಅದರ ಇನ್ನೊಂದು ಕಂಬಕ್ಕೆ ಆ ಬಾಗಿಲನ್ನು ಹಗ್ಗದಿಂದಲೋ ಅಥವಾ ದಪ್ಪ ಸರಿಗೆಯಿಂದಲೋ ಕಟ್ಟಿ ಬಿಗಿದರೆ ಮುಗಿಯಿತು. ದನ, ನಾಯಿ ಮತ್ತು ಕೋಳಿಗಳಿಗೆ ಒಳಗೆ ನುಗ್ಗಲು ಹರಸಾಹಸ ಪಡಬೇಕೆಂಬಷ್ಟು ಭದ್ರವಾದ ಬಾಗಿಲುಗಳವು. ಈ ನಾಲ್ಕು ಬಾಡಿಗೆ ಕೋಣೆಗಳು ಶೆಟ್ಟರಿಗೆ ಎರಡು ರೀತಿಯಿಂದ ಲಾಭ ತರುತ್ತವೆ. ಒಂದು, ತೋಟದ ನಾಲ್ಕು ಸುತ್ತಲೂ ನಿರ್ಜನ ಪ್ರದೇಶವಾಗಿರುವುದರಿಂದ ಶೆಟ್ಟರ ಕೋಟೆ ಕಾಯುವ ಕಾವಲುಗಾರರ ಚೌಕಿಗಳಂತೆ ಈ ಶೆಡ್ಡುಗಳು ಕೆಲಸ ಮಾಡುತ್ತವೆ. ಇನ್ನೊಂದೆಡೆ ತೋಟಕ್ಕೆ ಬೇಕಾದ ಆಳುಗಳನ್ನೂ ಶಾಶ್ವತವಾಗಿ ಉಳಿಸಿಕೊಂಡoತಾಗುತ್ತದೆ ಮತ್ತು ಪದೇಪದೇ ಕೆಲಸಗಾರರನ್ನು ಹುಡುಕಿ ತರುವ ತಾಪತ್ರಯವೂ ತಪ್ಪುತ್ತದೆ ಎಂಬುದು ಶೆಟ್ಟರ ದೂರಾಲೋಚನೆ.

---------------------------------------------------------------

ಧಾರವಾಹಿ - 4

ಶಿವಕಂಡಿಕೆ ಪಟ್ಟಣದ ಪಶ್ಚಿಮದಲ್ಲಿ ವರ್ಷವಿಡೀ ತುಂಬಿ ಹರಿಯುವ ‘ಮಧುವರ್ಧಿನಿ’ ಎಂಬ ಮನೋಹರವಾದ ನದಿಯೊಂದಿದೆ. ಇದರ ದಂಡೆಯುದ್ದಕ್ಕೂ ಸರಿಸುಮಾರು ಮೂವತ್ತು ಮೈಲು ಸುತ್ತಳತೆಯಲ್ಲಿ ‘ಗಂಗರಬೀಡು’ ಎಂಬ ಪುಟ್ಟ ಗ್ರಾಮವು ಮೈಚಾಚಿಕೊಂಡಿದೆ. ‘ನಾಯ್ಕರು, ಬಿಲ್ಲವರು, ಬಂಟರು, ಮೊಗವೀರರು, ಮಡಿವಾಳರು ಮತ್ತು ಕೊರಗರು ಈ ಗ್ರಾಮದ ಮೂಲ ನಿವಾಸಿಗಳು. ಆದರೆ ಆನಂತರದಲ್ಲಿ ಉತ್ತರದ ಯಾವುದೋ ದೇಶದಿಂದ ಕೆಲವು ವೈದಿಕ ಕುಟುಂಬಗಳು ವಲಸೆ ಬಂದುವು ಹಾಗೂ ಸುಡುಬೇಸಗೆಯಲ್ಲೂ ತುಂಬಿ ಹರಿಯುತ್ತಿದ್ದ ಮಧುವರ್ಧಿನಿಯು ಅವರ ಗಮನಸೆಳೆದುದರಿಂದ ತಮ್ಮ ಮುಂದಿನ ಶಾಶ್ವತ ನೆಲೆ ಇಲ್ಲೇ ಎಲ್ಲೋ ಅಡಗಿದೆ ಎಂದು ಅವರಿಗನ್ನಿಸಿರಬೇಕು. ನದಿಯ ಸೆರಗನ್ನು ಹಿಡಿದು ಪ್ರಶಸ್ತ ಪ್ರದೇಶವೊಂದನ್ನರಸುತ್ತ ಮುಂದುವರೆದರು. ಕೆಲವು ದಿನಗಳ ನಡಿಗೆಯ ಬಳಿಕ ಕಗ್ಗಾಡೊಂದರ ಮಗ್ಗುಲಿಗೆ ಬಂದು ತಲುಪಿದರು. ಆ ಸ್ಥಳವೇ ಅವರಿಗೆಲ್ಲ ಮೆಚ್ಚುಗೆಯಾಯಿತು. ಆದ್ದರಿಂದ ಅಲ್ಲಿ ತಮಗೆ ಬೇಕಾದಷ್ಟು ಕಾಡು ಕಡಿದು ನೆಲವನ್ನು ಸಮತಟ್ಟುಗೊಳಿಸಿ ಅಂದಿನ ತಮ್ಮ ಕುಲಕಸುಬು ಬೇಸಾಯವನ್ನಾರಂಭಿಸಿ ಬದುಕು ಕಟ್ಟಿಕೊಂಡರು. ಅವರ ಬಳಿಕ ಪಶ್ಚಿಮದ  ಇನ್ಯಾವುದೋ ದೇಶದಿಂದ ಕೆಲವು ಕಿರಿಸ್ತಾನ ಕುಟುಂಬಗಳೂ ವಲಸೆ ಬಂದುವು. ಅವರು ಮೊದಲಿಗೆ ಇಲ್ಲಿನ ಜನರ ಊಳಿಗದವರಾಗಿ ನೆಲೆ ನಿಂತರು. ಆದರೆ ಕೆಲವೇ ಕಾಲದ ನಂತರ ಅವರಲ್ಲಿ ಬಹುತೇಕರು ತಮ್ಮ ಸುತ್ತಮುತ್ತಲಿನವರ ಹಡಿಲು ಭೂಮಿಗಳನ್ನು ಗೇಣಿಗೆ ಪಡೆದುಕೊಂಡು ಕಷ್ಟಪಟ್ಟು ದುಡಿಯತೊಡಗಿದರು. ಕ್ರಮೇಣ ಆ ಕೃಷಿಭೂಮಿಗಳನ್ನು ಖರೀದಿಸಿ ಗಂಗರಬೀಡುವಿನಲ್ಲಿ ತಮ್ಮದೇ ಆಧಿಪತ್ಯವನ್ನು ಸ್ಥಾಪಿಸುವಷ್ಟರ ಮಟ್ಟಕ್ಕೆ ಅವರು ಬೆಳೆದು ನಿಂತರು!” ಎಂದು ಊರಿನ ಹಿರಿಯರನೇಕರು ಆಗಾಗ ಮಾತಾಡಿಕೊಳ್ಳುತ್ತಿರುತ್ತಾರೆ.

 

ಮಧುವರ್ಧಿನಿಯ ಕೃಪೆಯಿಂದಲೇ ಗಂಗರಬೀಡು ಕೃಷಿಗೆ ಫಲವತ್ತಾದ ಭೂಮಿಯಾಗಿ ಉಳಿದಿರುವುದು. ಈ ಗ್ರಾಮದ ಮುಖ್ಯ ಬೆಳೆ ಭತ್ತ. ಇಲ್ಲಿನ ಮೂಲ ನಿವಾಸಿಗಳು ಉದಾಸೀನದಿಂದಲೋ ಅಥವಾ ಕಷ್ಟದಿಂದಲೋ ವರ್ಷಕ್ಕೆ ಒಂದೆರಡು ಬೆಳೆ ತೆಗೆಯಲು ಹೆಣಗುತ್ತಿದ್ದರೆ ಕಿರಿಸ್ತಾನರು ಕೊಳಕೆ, ಎಣಿಲು ಮತ್ತು ಸುಗ್ಗಿ ಎಂಬ ಮೂರು ಬೆಳೆಗಳನ್ನೂ ಬೆಳೆಯುತ್ತಿದ್ದ ಕಷ್ಟಸಹಿಷ್ಣುಗಳು. ಈ ಬೆಳೆಗಳ ನಡುವೆ ತೆಂಗು, ಕಂಗು, ಬಾಳೆ, ಕಬ್ಬು, ಗೇರು, ಮಾವು, ಉದ್ದು, ಹುರುಳಿ, ಎಳ್ಳು, ಗುಳ್ಳ (ದುಂಡು ಬದನೆ), ಬಸಳೆ, ಹರಿವೆಸೊಪ್ಪು, ತೊಂಡೆಕಾಯಿ, ಹಾಗಲಕಾಯಿ, ಸೋರೆಕಾಯಿ, ಸೌತೆಕಾಯಿ, ಇಬ್ಬುಡ್ಲ ಹಣ್ಣು, ಬೆಂಡೆಕಾಯಿ, ಬೂದುಗುಂಬಳ, ಸಿಹಿಗುಂಬಳ, ಪಡುವಳಕಾಯಿ, ಕಾಯಿಮೆಣಸು, ಸುವರ್ಣಗೆಡ್ಡೆ, ಬಿಳಿಗೆಣಸು, ಕೆಂಪುಗೆಣಸು, ತೊಪ್ಪೆಗೆಣಸು, ಬೋಳೆಗೆಣಸು ಮತ್ತು ಅಲ್ಲಲ್ಲಿ ಸ್ವಲ್ಪ ಸ್ವಲ್ಪವೆಂಬoತೆ ಟೊಮಾಟೊ ಹಣ್ಣುಗಳು ಕೂಡ ಈ ಹಳ್ಳಿಯ ಉಪಬೆಳೆಯ ಪಟ್ಟಿಯಲ್ಲಿ ಸೇರಿಕೊಂಡಿವೆ. ತ್ರಿಕಾಲದಲ್ಲೂ ಹಚ್ಚಹಸುರಿನಿಂದ ಕಂಗೊಳಿಸುವ ಈ ಊರು ಹಸುರಿನ ವಿಷಯಕ್ಕೆ ಬಂದರೆ ನಿತ್ಯ ಸಮೃದ್ಧೆಯೇ ಸರಿ! ಈ ಹಳ್ಳಿಯ ಸಾಕು ಪ್ರಾಣಿಪಕ್ಷಿಗಳ ಗಣತಿಯನ್ನು ಗಮನಿಸಿದರೆ, ದನ, ಎಮ್ಮೆ, ಹೋರಿ, ಎತ್ತು, ಹಂದಿ, ಮೇಕೆ ಹಾಗೂ ಊರ ಮತ್ತು ಅಂಕದ ಕೋಳಿಗಳು ಇಲ್ಲಿನ ಕೃಷಿಕರ ಜೀವಾಳಗಳು. ಗಂಗರಬೀಡಿನ ಎಡಮಗ್ಗುಲಲ್ಲಿ ನದಿಯಿದ್ದರೆ ಬಲಮಗ್ಗುಲಲ್ಲಿ ನಿಬಿಡವಾದ ಅರಣ್ಯವಿದೆ. ಅದಕ್ಕೆ ‘ಕಾವೇರ್ ಕಾಡು’ ಎಂದು ಹೆಸರು. ಕಾವೇರ್ ಕಾಡಿನ ಚರಿತ್ರೆಯೂ ಊರವರ ನಡುವೆ ಆಗಾಗ ರೋಚಕ ಕಥನವಾಗಿ ಹರಿದಾಡುತ್ತಿರುತ್ತದೆ.

 ಗಂಗರಬೀಡಿಗೆ ಬಂದ ಕಿರಿಸ್ತಾನರಲ್ಲಿ ಒಂದು ವಿಶೇಷ ಕಲೆಯಿತ್ತು. ಅದೇನೆಂದರೆ ಅವರು ತಯಾರಿಸುತ್ತಿದ್ದ, ಔಷಧೀಯ ಸತ್ವದ ಒಂದು ಬಗೆಯ ವಿಶೇಷ ಸಾರಾಯಿ! ‘ಆಯಾಯ ಕಾಲಕ್ಕೆ ದೊರಕುವಂಥ ಹಣ್ಣುಹಂಪಲುಗಳಿoದ ಈ ಮದಿರೆಯನ್ನು ಉತ್ಪಾದಿಸುವ ಕಲೆಯು ತಮಗೆ ವಂಶಪಾರoಪರ್ಯವಾಗಿ ಬಂದಿದೆ!’ ಎಂದು ಕಿರಿಸ್ತಾನರಲ್ಲಿ ಅನೇಕರು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. ಈ ಮದ್ಯವು ಮುಖ್ಯವಾಗಿ ಬಾಣಂತಿ ಮದ್ದು, ಬಾಲಗ್ರಹ ಪೀಡೆ, ಶೀತಜ್ವರ, ಹೊಟ್ಟೆಯುಬ್ಬರ ಮತ್ತಿತರ ಕಾಯಿಲೆಗಳಿಗೆ ರಾಮಬಾಣವೆಂಬ ನಂಬಿಕೆಯೂ ಹುಟ್ಟಿಕೊಂಡು ಊರ ಜನರೆಲ್ಲ ಉಪಯೋಗಿಸತೊಡಗಿದ ಮೇಲೆ ಈ ಪೇಯವು ಬಹಳ ಬೇಗನೇ ಗಂಗರಬೀಡಿನಾದ್ಯoತ ಪ್ರಚಾರಕ್ಕೆ ಬಂತು. ಹಬ್ಬ ಹರಿದಿನಗಳಲ್ಲಿ ಮತ್ತು ಆಪ್ತೇಷ್ಟರ ಸತ್ಕಾರ ಕೂಟಗಳಲ್ಲಿ ಮಾತ್ರವಲ್ಲದೇ ಆಗಾಗ ಮಾನಸಿಕವಾಗಿ ನೊಂದು ಬೆಂದು ಕುಸಿದು ಕೂರುವವರನ್ನು ಕೂಡಾ ಹದವಾಗಿ ಅಮಲೇರಿಸಿ ಅವರ ಮನೋ ತುಮುಲಗಳನ್ನು ಹೋಗಲಾಡಿಸುವಂಥ ಈ ಪಾನೀಯವು ಆ ಕಾರಣಕ್ಕಾಗಿಯೂ ಪ್ರಖ್ಯಾತಿಯನ್ನು ಪಡೆದುಕೊಂಡಿತು. ಹೀಗಾಗಿ ಕಾಲಕ್ರಮೇಣ ಕೆಲವು ಕಿರಿಸ್ತಾನ ಕುಟುಂಬಗಳು ತಮ್ಮ ದಟ್ಟ ಬಡತನವನ್ನು ನೀಗಿಸಿಕೊಳ್ಳಲು ಕೂಡಾ ಸಾರಾಯಿ ವ್ಯಾಪಾರವನ್ನೇ ಮುಖ್ಯವಾಗಿ ನೆಚ್ಚಿಕೊಂಡವು. ಆದ್ದರಿಂದ ತಮ್ಮ ಜಾತಿಯವರ ಬೇಡಿಕೆಗೆ ಮಾತ್ರವಲ್ಲದೇ ಊರ ಇತರ ಜಾತಿಯವರ ಹಬ್ಬ ಹರಿದಿನಗಳ ಮನರಂಜನೆಗಳಿಗೂ ಮತ್ತು ಇನ್ನಿತರ ಕಾರ್ಯಕ್ರಮಗಳಿಗೂ ಅವರಿಂದ ಅತ್ಯಧಿಕ ಮಟ್ಟದಲ್ಲಿ ಸಾರಾಯಿ ಉತ್ಪಾದನೆಯಾತೊಡಗಿತು. ಬೇಡಿಕೆ ಹೆಚ್ಚುತ್ತ ಹೋದಂತೆ ಇತರ ಬಹುತೇಕ ಕಿರಿಸ್ತಾನ ಕುಟುಂಬಗಳು ಕೂಡಾ ತಮ್ಮ ಕೃಷಿ ಕಾಯಕದ ಜೊತೆ ಜೊತೆಗೆ ಕಳ್ಳಭಟ್ಟಿ ಬೇಯಿಸುವ ಉಪಕಸುಬಿನಲ್ಲೂ ತೊಡಗಿಕೊಂಡವು.






*

ಗಂಗರಬೀಡಿನಲ್ಲಿ ಪ್ರವರ್ಧಮಾನಕ್ಕೆ ಬಂದವರಲ್ಲಿ ರಾಬರ್ಟ್ ಪರ್ಬುಗಳದ್ದು ಕೂಡಾ ಒಂದು ಪ್ರಧಾನ ಕುಟುಂಬ. ರಾರ್ಬಟರ ಪೂರ್ವಜರು ತಕ್ಕಮಟ್ಟಿನ ಕೃಷಿಭೂಮಿಯನ್ನು ಅವರಿಗೆ ಪಿತ್ರಾರ್ಜಿತವಾಗಿ ಬಿಟ್ಟು ಹೋಗಿದ್ದರು. ಆದರೆ ಅವರಿಗಿಂತಲೂ ಹೆಚ್ಚು ಕಷ್ಟಸಹಿಷ್ಣುವೂ ಮತ್ತು ಜನಾನುರಾಗಿಯೂ ಆದ ರಾರ್ಬಟರು ತಮ್ಮ ಶ್ರಮದ ದುಡಿಮೆಯಿಂದಲೂ, ಉತ್ತಮ ಮಟ್ಟದ ಸಾರಾಯಿ ವ್ಯಾಪಾರದಿಂದಲೂ ಹತ್ತಾರು ಎಕರೆಗಳ ಭೂಮಾಲಿಕರೆನಿಸಿಕೊಂಡರು. ರಾಬರ್ಟರ ಪತ್ನಿ ಜೆಸಿಂತಾಬಾಯಿಯೂ ಉದಾರ ಮನಸ್ಸಿನ ಹೆಂಗಸು. ಮೂರು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳ ಸಂಸಾರವಿದ್ದ ಈ ದಂಪತಿ ತಮ್ಮ ಮಕ್ಕಳು ಕೂಡಾ ಎಲ್ಲರಂತೆ ವಿದ್ಯಾವಂತರಾಗಬೇಕೆoದು ಬಯಸಿದರು. ಆದರೆ ಅವರ ಈ ಉದ್ದೇಶವನ್ನು ಒಮ್ಮೆ ಉದ್ಭವಿಸಿದ ಸಣ್ಣದೊಂದು ಪ್ರಕೃತಿ ವಿಕೋಪವು ದಿಢೀರನೇ ಮಣ್ಣು ಮಾಡಿಬಿಟ್ಟಿತು.

 ರಾರ್ಬಟರ ಕಾಲದಲ್ಲಿನ್ನೂ ಗಂಗರಬೀಡಿನಲ್ಲಿ ಶಾಲೆಯಿರಲಿಲ್ಲ. ಆದರೂ ವಿದ್ಯೆ ಕಲಿಯಬಯಸುವ ಮಕ್ಕಳು ಮಧುವರ್ಧಿನಿಯ ಆಚೆಯ ದಡದ ಅಂಬರಬೆಟ್ಟು ಗ್ರಾಮಕ್ಕೆ ದೋಣಿಯ ಮೂಲಕ ಹೋಗಬೇಕಿತ್ತು. ಬ್ರಾಹ್ಮಣರ, ಬಿಲ್ಲವರ, ಬಂಟರ ಮತ್ತಿತರ ಕೆಲವು ಜಾತಿಯ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರವೇ ಪ್ರಯಾಸಪಟ್ಟು ದೋಣಿ ಹತ್ತಿ ಶಾಲೆಗೆ ಹೋಗುತ್ತಿದ್ದರು. ಹಾಗಾಗಿ ರಾಬರ್ಟರು ಕೂಡಾ ತಮ್ಮ ಮಕ್ಕಳನ್ನು ಆಸ್ಥೆಯಿಂದ ಶಾಲೆಗೆ ಕಳುಹಿಸತೊಡಗಿದರು. ಆದರೆ ಆ ವರ್ಷದ ಮುಂಗಾರು ಮಳೆಯಾರ್ಭಟ ಯಾವ ಮಟ್ಟಕ್ಕೇರಿತ್ತೆಂದರೆ ಮಕ್ಕಳು ಆವತ್ತೊಂದು ಸಂಜೆ ಶಾಲೆಯಿಂದ ಹಿಂದಿರುಗುವ ಹೊತ್ತಿಗೆ ಸರಿಯಾಗಿ ಕುಂಭಾದ್ರೋಣವಾಗಿ ಸುರಿದು ಇಡೀ ಊರನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಪರಿಣಾಮ, ಮಧುವರ್ಧಿನಿ ಏಕಾಏಕಿ ಕ್ಷÄಧ್ರಗೊಂಡು ಉಕ್ಕಿ ಹರಿಯತೊಡಗಿದಳು. ಹತ್ತಿಪ್ಪತ್ತು ಮಕ್ಕಳಿದ್ದ ದೋಣಿಯು ಗಾಳಿಮಳೆಯ ಹೊಡೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ಮಗುಚಿ ಬಿದ್ದು ಎಲ್ಲರೂ ನೀರುಪಾಲಾದರು. ಆದರೆ ಕೊರಗ ಅಂಬಿಗನ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಕೆಲವರಷ್ಟೇ ಬದುಕುಳಿದರು. 


 


 ರಾರ್ಬಟರ ಮೂರನೆಯ ಮುದ್ದಿನ ಮಗ ಮೈಕಲನೂ ಬೊಳ್ಳದಲ್ಲಿ ಕೊಚ್ಚಿಕೊಂಡು ಹೋದ! ರಾರ್ಬಟ್ ದಂಪತಿಯ ಅಳಲು ಮುಗಿಲು ಮುಟ್ಟಿತು. ಊರ ಜನರು ಹುಡುಗನ ಹೆಣವನ್ನು ಮೂರು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡoತೆ ಹೊಳೆಯುದ್ದಕ್ಕೂ ಹುಡುಕಿದರು. ಆದರೂ ಬಾಲಕನ ಸುಳಿವು ಸಿಗಲಿಲ್ಲ. ಈ ಒಂದು ಘಟನೆಯು ಆ ದಂಪತಿಗೆ ದೊಡ್ಡ ಆಘಾತವನ್ನು ನೀಡಿತು. ಆನಂತರ ಬಹುಕಾಲ ಮಗನಿಗಾಗಿ ಹಂಬಲಿಸುತ್ತ ದುಃಖಿಸುತ್ತ ತೀರಾ ವಿಚಲಿತರಾದವರಲ್ಲಿ ತಮ್ಮ ಉಳಿದ ಮಕ್ಕಳನ್ನೂ ಶಾಲೆಗೆ ಕಳುಹಿಸುವ ವಿಷಯದಲ್ಲಿ ಭಯ ಹುಟ್ಟಿಬಿಟ್ಟಿತು. ಹೀಗಾಗಿ ಎಲ್ಲಿಯತನಕ ಗಂಗರಬೀಡಿನಲ್ಲಿ ಶಾಲೆ ತೆರೆಯುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಮಕ್ಕಳಿಗೂ ವಿದ್ಯೆ ಬೇಡ. ದುಡಿದು ತಿನ್ನಲು ಬೇಕಾದಷ್ಟು ಭೂಮಿಯಿರುವಾಗ ಮತ್ತ್ಯಾವುದರ ಚಿಂತೆ ಅವರಿಗೆ...? ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡು ಉಳಿದಿಬ್ಬರನ್ನೂ ಶಾಲೆ ಬಿಡಿಸಿದರು. ಆವತ್ತಿನಿಂದ ರಾರ್ಬಟರ ಇತರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೂ ತಿಲಾಂಜಲಿ ಬಿತ್ತು. ಆರು ಮಕ್ಕಳಲ್ಲಿ ಮೂವರು ಹೆಣ್ಣು ಮಕ್ಕಳು ತಾಯಿಗೆ ಮನೆಗೆಲಸ ಮತ್ತಿತರ ಕೆಲಸಕಾರ್ಯಗಳಲ್ಲಿ ನೆರವಾಗುತ್ತ ಪ್ರಾಯಕ್ಕೆ ಬರುತ್ತಿದ್ದರೆ, ಗಂಡು ಮಕ್ಕಳು ಅಪ್ಪನ ಕೃಷಿಕಾರ್ಯ ಮತ್ತು ಸಾರಾಯಿ ದಂಧೆಗೆ ಸಹಾಯಕರಾಗುತ್ತ ಬೆಳೆಯತೊಡಗಿದರು. 

 ಒಂದು ಕಡೆ ರಾರ್ಬಟರ ಸಂಸಾರ ಬೆಳೆಯುತ್ತಿದ್ದರೆ ಇನ್ನೊಂದೆಡೆ ಅವರ ಶ್ರೀಮಂತಿಕೆಯೂ ವೃದ್ಧಿಸುತ್ತಿತ್ತು. ಪರಿಣಾಮ ಬಾಲ್ಯದಿಂದ ಹದಿಹರೆಯದವರೆಗೆ ಮೈಮುರಿದು ದುಡಿಯುತ್ತಿದ್ದ ಗಂಡು ಮಕ್ಕಳು ನಿಧಾನಕ್ಕೆ ಸೋಂಬೇರಿಗಳಾದರು. ಹಾಗಾಗಿ ಬರಬರುತ್ತ ರಾರ್ಬಟ್ ದಂಪತಿಗೆ ಕೆಲಸದಾಳುಗಳನ್ನೇ ನಂಬಿ ಕೃಷಿ ಮಾಡುವ ಸ್ಥಿತಿ ಬಂದೊದಗಿತು. ಆದರೂ ಅವರು ಎದೆಗುಂದದೆ ಬಹಳ ಕಾಲ ಎಲ್ಲವನ್ನೂ ನಿಭಾಯಿಸಿಕೊಂಡು ಬಂದರು. ಆದರೆ ಆಳು ಮಾಡಿದ್ದು ಹಾಳು! ಎಂಬoತೆ ಮೆಲ್ಲನೆ ಬೇಸಾಯದ ಉತ್ಪತ್ತಿಯೂ ಕ್ಷೀಣಿಸತೊಡಗಿತು. ಆದರೂ ಮಕ್ಕಳನ್ನು ಅದರಲ್ಲೂ ಗಂಡು ಮಕ್ಕಳನ್ನು ತಿದ್ದಿ ತೀಡಿ ಸರಿ ದಾರಿಗೆ ತರುವ ಮತ್ತು ದುಡಿಮೆಗೆ ಹಚ್ಚುವ ಕುರಿತು ಇಬ್ಬರೂ ಆಸ್ಥೆ ತೋರಲಿಲ್ಲ. ಈಗಾಗಲೇ ತಾವು ಸಾಕಷ್ಟು ಗಳಿಸಿಟ್ಟಿರುವಾಗ ಅವೆಲ್ಲಾ ಯಾರಿಗಾಗಿ...? ತಮ್ಮ ಮಕ್ಕಳಿನ್ನೂ ಹುಡುಗು ಪ್ರಾಯದವರು. ಹಾಗಾಗಿ ಬೆಳೆಯುತ್ತ ಸರಿ ಹೋಗುತ್ತಾರೆ. ಮುಂದೊoದು ದಿನ ಅವರಿಗೂ ಮನೆಯ ಜವಾಬ್ದಾರಿ ವಹಿಸಿಕೊಳ್ಳುವ ಕಾಲ ಬರುತ್ತದೆ. ಅಲ್ಲದೆ ಅವರು ತಮ್ಮ ರಕ್ತ ಹಂಚಿಕೊoಡು ಹುಟ್ಟಿದವರಲ್ಲವ, ಎಂದಿಗೂ ಹಾಳಾಗಲಿಕ್ಕಿಲ್ಲ! ಎಂದು ಯೋಚಿಸಿ ಮಕ್ಕಳು ಹಿಡಿದ ದಾರಿಯಲ್ಲೇ ಸಾಗಲು ಬಿಟ್ಟರು. 

 

ಹೀಗಿರುತ್ತ ಹೆಣ್ಣು ಮಕ್ಕಳು ಬೆಳೆದು ಪ್ರಾಯಕ್ಕೆ ಬಂದರು. ರಾರ್ಬಟರು ಅವರಿಗೆ ಮದುವೆ ಮಾಡಿಸಲು ಮುಂದಾದರು. ಆದರೆ ಅದಕ್ಕೆ ಹಿರಿಯಳಾದ ಗ್ರೆಟ್ಟಾಳಿಂದ ತೊಡಕಾಯಿತು. ಏಕೆಂದರೆ ಅವಳು ದಢೂತಿ ಮತ್ತು ಅಷ್ಟೇನೂ ಅಂದವಲ್ಲದ ಹೆಣ್ಣು ಮಾತ್ರವಲ್ಲದೆ ತೀರಾ ಒರಟು ಸ್ವಭಾವದವಳಾಗಿದ್ದಳು. ಅವಳ ಈ ಎಲ್ಲ ನ್ಯೂನತೆಗಳನ್ನು ಕಾಣುತ್ತ ಬಂದಿದ್ದ ಹಾಗೂ ಅವರಿವರಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಸುತ್ತಮುತ್ತಲಿನ ಊರು, ಗ್ರಾಮಗಳ ಯಾವ ಹುಡುಗರೂ ಅವಳನ್ನು ಮದುವೆಯಾಗಲು ಮುಂದೆ ಬರಲಿಲ್ಲ. ಅದಕ್ಕೆ ತಕ್ಕಂತೆ ಅವಳಲ್ಲೂ ತಾನೊಂದು ಹೆಣ್ಣು, ತನಗೂ ಗಂಡ, ಸಂಸಾರ ಎಂಬಿತ್ಯಾದಿ ಲೋಕರೂಢಿಯೊಳಗಿರುವಂಥದ್ದು ಆಗಬೇಕೆಂಬ ಆಕಾಂಕ್ಷೆಗಳೂ ಇದ್ದಂತಿರಲಿಲ್ಲ. ಆದರೆ ರಾಬರ್ಟರು ಆ ವಿಚಾರದಲ್ಲಿ ಚಿಂತಿತರಾಗಿದ್ದರು. ಆದ್ದರಿಂದ ಅವರು ಛಲ ಬಿಡದೆ ಯಾರು ಯಾರದ್ದೋ ಬೆನ್ನು ಹತ್ತಿ ಎಲ್ಲೆಲ್ಲೋ ಅಲೆದಾಡಿ ಆಗಾಗ ಗಂಡುಗಳನ್ನು ಹುಡುಕಾಡಿ ಕರೆಯಿಸಿಕೊಂಡು ಅವರಿಗೆ ಮಗಳನ್ನು ತೋರಿಸುವುದು ಮತ್ತು ಅವರಲ್ಲನೇಕರು ಗ್ರೆಟ್ಟಾಳ ರೂಪವನ್ನು ಕಂಡು ಕಕ್ಕಾಬಿಕ್ಕಿಯಾಗುವುದು ಹಾಗೂ ‘ನಾಳೆ ನಾಡಿದ್ದರಲ್ಲಿ ಅಥವಾ ವಾರದೊಳಗೆ ತಿಳಿಸುತ್ತೇವೆ!’ ಎಂಬ ಜಾಲ್ತಿಯಲ್ಲಿದ್ದ ಸಬೂಬು ಹೇಳಿ ಜಾರಿಕೊಳ್ಳುವುದು. ಇನ್ನು ಕೆಲವರು ತಮ್ಮನ್ನು ಕರೆದು ತಂದವರ ಮೇಲೆಯೇ ಕೋಪಿಸಿಕೊಂಡು ಹೊರಟು ಹೋಗುವುದು ನಡೆಯುತ್ತಿತ್ತು. ಹೀಗಾಗಿ ರಾರ್ಬಟರು ಕ್ರಮೇಣ ಗ್ರೇಟ್ಟಾಳ ಮದುವೆಯ ವಿಷಯದಲ್ಲಿ ನಂಬಿಕೆಯನ್ನು ಕಳೆದುಕೊಂಡರು. ತಾವು ಇವಳ ಮದುವೆಯ ಪ್ರಯತ್ನದಲ್ಲಿ ಕಾಲಾಹರಣ ಮಾಡಿದೆವೆಂದರೆ ಉಳಿದ ಹೆಣ್ಣು ಮಕ್ಕಳ ವಯಸ್ಸೂ ಮೀರಿ ಹೋಗುವುದು ಖಂಡಿತಾ! ಎಂಬ ಆತಂಕವೂ ಅವರನ್ನು ಕಾಡತೊಡಗಿತು. ಆದ್ದರಿಂದ ಮುಂದೆ ಉಳಿದಿಬ್ಬರು ಹೆಣ್ಣು ಮಕ್ಕಳಿಗೆ ಒಳ್ಳೆಯ ಕಡೆ ಸಂಬoಧ ಹುಡುಕಿ ಗಂಗರಬೀಡಿನ ಇಗರ್ಜಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿ ಒಬ್ಬಳನ್ನು ದೂರ ದುಬೈಗೂ ಇನ್ನೊಬ್ಬಳನ್ನು ಮುಂಬೈಗೂ ಕಳುಹಿಸಿಕೊಟ್ಟು ನೆಮ್ಮದಿಯ ಉಸಿರುಬಿಟ್ಟರು.

 ಇತ್ತ ಜೆಸಿಂತಾಬಾಯಿಯೂ ಬಾಣಂತಿ ಮದ್ದು, ಮಕ್ಕಳ ಶೀತ ಕಫ ಮತ್ತು ಹೊಟ್ಟೆ ನೋವಿನ ತೊಂದರೆಗಳಿಗೆ ‘ಸಾರಾಯಿ ಮದ್ದು’ ತಯಾರಿಸುವುದರಲ್ಲಿ ಪ್ರಸಿದ್ಧರಾಗಿದ್ದರು. ಕಪ್ಪುಬೆಲ್ಲ, ಸೋಡಾಕಾರ, ಜೀರಿಗೆ ಮತ್ತು ಹಣ್ಣು ಹಂಪಲಿನಿoದ ತಯಾರಿಸುತ್ತಿದ್ದ ಈ ಗಂಗಸರದ ರುಚಿಯೂ ಬಾಯಮ್ಮನ ಕೈಗುಣವೂ ಊರಿನಾದ್ಯಂತ ಹೆಸರು ಮಾಡಿತ್ತು. ರಾರ್ಬರಿಗೂ ಜೆಸಿಂತಬಾಯಿಗೂ ಹಾಗೂ ಅಪರೂಪಕ್ಕೊಮ್ಮೆ ದುಡಿದು ಬರುವ ಮಕ್ಕಳ ಮೈಕೈ ನೋವು ಉಪಶಮನಕ್ಕೂ ಈ ಶರಾಬು ಉತ್ತಮ ಪೇಯವಾಗಿತ್ತು. ಅಷ್ಟಲ್ಲದೆ ತಮ್ಮ ಆಪ್ತ ಕೆಲಸದಾಳುಗಳನ್ನು ವಿಶ್ವಾಸದಿಂದ ಇಟ್ಟುಕೊಳ್ಳಲೂ ಅದು ಸಹಕಾರಿಯಾಗಿತ್ತು. ಹೀಗಾಗಿ ಗ್ರೆಟ್ಟಾ, ಆಂಥೋನಿ ಮತ್ತು ಥಾಮಸರು ತಂದೆ ತಾಯಿಯಿಂದ ಬಳುವಳಿಯಾಗಿ ಬಂದoಥ ‘ಸಾರಾಯಿ ವಿದ್ಯೆ’ ಮತ್ತು ಅವರ ಹೆಸರನ್ನು ಬಳಸಿಕೊಂಡು ಸುಲಭದಲ್ಲಿ ಹಣ ಗಳಿಸುವ ಮಾರ್ಗವನ್ನು ಕಂಡುಹಿಡಿದರು.

 *

ಆಂಥೋನಿ, ಥಾಮಸರು ಬಾಲ್ಯದಿಂದಲೂ ತೀರಾ ಹಠಮಾರಿಗಳಾಗಿ ಸೆಡವಿನ ಮನುಷ್ಯರಾಗಿ ಬೆಳೆದವರು. ಆಂಥೋನಿ ಹೊರ ನೋಟಕ್ಕೆ ತನ್ನ ಒರಟು ಮನಸ್ಥಿತಿಗೆ ತಕ್ಕಂತೆಯೇ ಇದ್ದ ಆರಡಿ ಎತ್ತರದ ಆಜಾನುಬಾಹು ಮನುಷ್ಯ. ಕೆಂಪು ಕೆಂಪಗೆ ರಾವಣನನ್ನು ನೆನಪಿಸುವಂಥ ಕಟ್ಟುಮಸ್ತಾದ ದೇಹ. ಸದಾ ಕೆಂಪಡರಿರುತ್ತಿದ್ದ ಬಟ್ಟಲು ಕಣ್ಣುಗಳು. ಅಗಲವಾದ ಮುಖದ ಮೇಲೆ ಸೀತಾಳೆ ಸಿಡುಬಿನ ನೂರಾರು ಕಪ್ಪು ಗುಳಿಗಳು. ಅವನ ದಟ್ಟ ಗಡ್ಡವು ಪೊದೆಯಂಥ ಮೀಸೆಯ ಅಕ್ಕಪಕ್ಕದ ಉಬ್ಬಿದ ಕೆನ್ನೆಗಳನ್ನು ಇನ್ನಷ್ಟು ಉಬ್ಬಿಸಿ ತೋರಿಸುತ್ತಿತ್ತು. ಹಿಂದೆಲ್ಲ ಲುಂಗಿ ಉಟ್ಟು ಸಾಮಾನ್ಯ ಅಂಗಿ ತೊಡುತ್ತಿದ್ದವನು ಒಮ್ಮೆ ಅದೇನು ಯೋಚಿಸಿದನೋ? ಫಾರಿನ್ ಜೀನ್ಸ್ ಮತ್ತು ಚೈನಾ ಕಾಲರಿನ ದುಬಾರಿ ಟೀ ಶರ್ಟ್ ಧರಿಸುವ ಸ್ಥಿತಿಗೆ ಬದಲಾಗಿಬಿಟ್ಟ. ಆದರೆ ಥಾಮಸನದ್ದು ತನ್ನ ಅಣ್ಣನಿಗೆ ತದ್ವಿರುದ್ಧದ ರೂಪ. ಅಣ್ಣನಿಗಿಂತ ತುಸು ಕುಳ್ಳಗೆ ಮತ್ತು ಕೆಂಪಗೆ, ಐದು ಮುಕ್ಕಾಲು ಅಡಿ ಎತ್ತರ. ತಾಯಿಯಂತೆ ಸುರ ಸುಂದರಾoಗನಾಗಿ ದಷ್ಟಪುಷ್ಟವಾಗಿ ಸಿನೇಮಾ ಹೀರೋನಂತೆ ಕಾಣುತ್ತಿದ್ದ. ಆದರೆ ಗುಣ ಸ್ವಭಾವವೆಲ್ಲ ಥೇಟ್ ಅಣ್ಣನಂಥದ್ದೇ! ಥಾಮಸನ ಹೆಸರಿನ ಮೊದಲ ಅಕ್ಷರ ‘ಥ’ ಎಂಬ ಮಹಾಪ್ರಾಣವು ಹಳ್ಳಿಗರಿಗೆ ಉಚ್ಛಾರ ದೋಷವಾಗುತ್ತಿದ್ದುದರಿಂದಲೂ ಮತ್ತು ಅವನ ಅಸಭ್ಯ ಕೀಟಲೆ ಹಿಂಸಾಚಾರಗಳೆಲ್ಲವೂ ಅವರನ್ನು ಹೈರಾಣಾಗಿಸುತ್ತಿದ್ದುದರಿಂದಲೂ ಬಹುತೇಕರು ಅವನನ್ನು ನೀಚ, ದುಷ್ಟ ಎಂಬರ್ಥ ಕೊಡುವ ‘ತಾಮಸ’ ಎಂದೇ ಕರೆಯುತ್ತಿದ್ದರು. ರಾರ್ಬಟರ ಕೊನೆಯ ಮಗ ಹಿಲಾರಿ ಮಾತ್ರ ಗ್ರೆಟ್ಟಾ, ಆಂಥೋನಿ ಮತ್ತು ಥಾಮಸರಿಗಿಂತ ಭಿನ್ನ ಸ್ವಭಾವದವನು. ಅವನು ಹೆತ್ತವರ ಸದ್ಗುಣಗಳನ್ನು ಮಾತ್ರವೇ ಹೊತ್ತು ಬಂದವನoತಿದ್ದ. ತಾನು ವಿದ್ಯಾವಂತನಾಗಬೇಕೆoಬ ಆಸೆ ಅವನನ್ನು ಬಾಲ್ಯದಿಂದಲೇ ಬೆನ್ನು ಹತ್ತಿತ್ತು. ಅದಕ್ಕೆ ತಕ್ಕಂತೆ ಅವನ ಅದೃಷ್ಟಕ್ಕೆ ದೋಣಿ ಮಗುಚಿದ ಎರಡನೇ ವರ್ಷದಲ್ಲಿ ಗಂಗರಬೀಡಿನಲ್ಲೂ ಹಂಚು ಹೊದೆಸಿದ ಸಣ್ಣ ಕಟ್ಟಡವೊಂದರಲ್ಲಿ ಐದನೆಯ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯೂ ಆರಂಭವಾಯಿತು. ಹಿಲಾರಿ ಶಾಲೆಗೆ ಸೇರಿಕೊಂಡ. ನಂತರ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಂಬರಬೆಟ್ಟುವಿನಲ್ಲೂ ಕಾಲೇಜು ಶಿಕ್ಷಣವನ್ನು ದೂರದ ಶಿವಕಂಡಿಕೆಯಲ್ಲೂ ಮುಗಿಸಿದ.

 ಇತ್ತ ಸ್ವತಃ ಮೈಮುರಿದು ದುಡಿದು ಬೇಸಾಯ ಮಾಡಲು ಸೋಂಬೇರಿತನ ಬಿಡದ ಆಂಥೋನಿ ಮತ್ತು ತಾಮಸರು ನೆರೆಕರೆಯ ಒಂದಷ್ಟು ಕೂಲಿಯಾಳುಗಳನ್ನು ಹೆದರಿಸಿ ಅಥವಾ ಅವರಿಗೆ ಸಾರಾಯಿ ಆಸೆ ತೋರಿಸಿ ಮನೆ ಖರ್ಚಿಗೆ ಬೇಕಾಗುವಷ್ಟು ಭತ್ತ, ಧವಸಧಾನ್ಯ ಮತ್ತು ತರಕಾರಿಗಳನ್ನು ಬೆಳೆಸಿಕೊಳ್ಳುತ್ತ ತಾವು ಸಾರಾಯಿ ವ್ಯಾಪಾರದಲ್ಲಿ ಮಗ್ನರಾಗುತ್ತಿದ್ದರು. ಹಿಲಾರಿಗೆ ಅಕ್ಕ ಮತ್ತು ಅಣ್ಣಂದಿರ ಗುಣ ಸ್ವಭಾವ ಹಾಗೂ ಅವರ ಸಾರಾಯಿ ದಂಧೆ ಸುತಾರಾಂ ಇಷ್ಟವಾಗುತ್ತಿರಲಿಲ್ಲ. ಆ ವಿಷಯವಾಗಿ ಅವನು ಯಾವಾಗಲೂ ಅವರೊಡನೆ ವಾದಿಸುತ್ತಿದ್ದ, ವಿರೋಧಿಸುತ್ತಿದ್ದ. ಜೊತೆಗೆ ತಾಳ್ಮೆಯಿಂದ ಬುದ್ಧಿವಾದವನ್ನೂ ಹೇಳುತ್ತಿದ್ದ. ಆದರೆ ಅವರು ಆಗೆಲ್ಲ ತಮ್ಮನ ಮೇಲೆ ಕಿಡಿಕಾರುತ್ತ ಜಗಳವಾಡುತ್ತ ಅವನನ್ನು ಸುಮ್ಮನಾಗಿಸುತ್ತಿದ್ದರು. ಆಗ ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಹೊಡೆದಾಟವೂ ನಡೆದುಬಿಡುವುದಿತ್ತು. ಆಂಥೋನಿ ಮತ್ತು ತಾಮಸರು ನಾಲ್ಕಾಳುಗಳನ್ನು ಹೆಡಮುರಿಗೆ ಕಟ್ಟಿ ಸದೆಬಡಿಯುವಂಥ ಬಲಿಷ್ಠರು. ಹಾಗಾಗಿ ಅವರಷ್ಟು ಬಲಶಾಲಿಯಲ್ಲದ ಹಿಲಾರಿಯು ಅವರಿಂದ ಏಟು ತಿಂದು ಮೂಲೆ ಸೇರುತ್ತಿದ್ದ. ಆದರೂ ಅವರ ದುರ್ವ್ಯವಹಾರಗಳನ್ನು ಕಟುವಾಗಿ ತಿರಸ್ಕರಿಸುತ್ತಿದ್ದ. ಗ್ರೆಟ್ಟಾಳೂ ಆಂಥೋನಿ ಮತ್ತು ತಾಮಸರಿಗೆ ತಕ್ಕಂಥ ಮನೋಭಾವದವಳು. ಹಾಗಾಗಿ ಅವಳು ಕೂಡಾ ತಮ್ಮಂದಿರ ಅವ್ಯವಹಾರಗಳನ್ನೆಲ್ಲ ಪ್ರೋತ್ಸಾಹಿಸುತ್ತ ಬರುತ್ತಿದ್ದಳು.

(ಮುಂದುವರೆಯುವುದು)

1 comment:

  1. ಕಾದಂಬರಿ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಶುಭ ಹಾರೈಕೆಗಳು

    ReplyDelete

Powered by Blogger.