ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ್ ಜೆ.ಸುವರ್ಣ ಆಯ್ಕೆ.
ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ
ಸೂರ್ಯಕಾಂತ್ ಜೆ.ಸುವರ್ಣ ಆಯ್ಕೆ.
ವರದಿ : ವಾಣಿ ಪ್ರಸಾದ್
ಮುಂಬೈಯ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಏಸೋಸಿಯೇಷನ್ ಪ್ರಯೋಜಕತ್ವದ ,ದೇಶದ ಸಹಕಾರಿ ರಂಗದ ಜನಪ್ರಿಯ ಬ್ಯಾಂಕ್ ಆಗಿರುವ ,ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ ಜೆ.ಸುವರ್ಣ ಆಯ್ಕೆಯಾಗಿದ್ದಾರೆ.
ಇಂದು ಗೊರೆಗಾವ್ ಪೂರ್ವದ ಬ್ಯಾಂಕ್ ನ ಕೇಂದ್ರ ಕಚೇರಿ ಮಾರುತಾಗಿರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ,ಮಹಾರಾಷ್ಟ್ರ ಸರಕಾರದಿಂದ ನಿಯುಕ್ತಿಗೊಂಡ ಸಹಕಾರ ಇಲಾಖೆಯ ಚುನಾವಣಾಧಿಕಾರಿ ಎ. ಕೆ.ಚವಾಣ್ ಅವರ ಉಪಸ್ಥಿತಿಯಲ್ಲಿ ಸೂರ್ಯಕಾಂತ್ ಜೆ.ಸುವರ್ಣ ಅವರನ್ನು ಬ್ಯಾಂಕ್ ನ ಕಾರ್ಯಧ್ಯಕ್ಷರಾಗಿ ಆಯ್ಕೆಮಾಡಲಾಯಿತು.
ಭಾರತ್ ಬ್ಯಾಂಕ್ ನ 2023-28 ರ ಸಾಲಿನ ಆಡಳಿತ ಮಂಡಳಿಗಾಗಿ ಆಕ್ಟೊಬರ್ 2 ರಂದು ,ಚುನಾವಣೆ ನಡೆದು, 4 ರಂದು ಮತ ಎಣಿಕೆ ನಡೆದು ಜಯ ಸುವರ್ಣ ಪ್ಯಾನೆಲ್ ಜಯಭೇರಿ ಗಳಿಸಿತ್ತು.
ಜಯ ಸುವರ್ಣ ಬಣದ ನೇತೃತ್ವ ವಹಿಸಿದ್ದ ಸೂರ್ಯಕಾಂತ ಸುವರ್ಣ ,ಅವಿರತವಾಗಿ ದುಡಿದು, ತಮ್ಮ ತಂಡದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದರು.
ಓರ್ವ ಯಶಸ್ವಿ ಉದ್ಯಮಿಯೂ ಆಗಿರುವ ಸೂರ್ಯಕಾಂತ್ ಈ ಬಾರಿ 3 ನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಜಯ ಸುವರ್ಣ ಅವರ ಹಿರಿಯ ಪುತ್ರನಾಗಿರುವ ಸೂರ್ಯ , ತಂದೆಯ ಆದರ್ಶಗಳನ್ನು ಪಾಲಿಸುತ್ತಾ ,ಅವರ ಮಾರ್ಗದರ್ಶನದಲ್ಲಿ ನಿಧಾನವಾಗಿ ಬೆಳೆದು ,ಇಂದು ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾಗಿ ಆಯ್ಕೆಯಾಗಿರುವುದು, ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಸೂರ್ಯಕಾಂತ್ ಅವರ ಸಂಕ್ಷಿಪ್ತ ಪರಿಚಯ.
ಸೂರ್ಯ ತಮ್ಮ ವಿದ್ಯಾಭ್ಯಾಸವನ್ನು ಎಸ್.ಎಸ್.ಸಿ ವರೆಗೆ ಮಹಾರಾಷ್ಟ ದ ಪಂಚಗನಿಯ ಸಂಜೀವನ್ ಬೋರ್ಡಿಂಗ್ ಶಾಲೆಯಲ್ಲಿ ಪೂರೈಸಿ ,ಉನ್ನತ ಶಿಕ್ಷಣವನ್ನು ಅಂಧೇರಿಯ ಎಂ.ವಿ.ಎಲ್ ಕಾಲೇಜ್ ನಲ್ಲಿ , ಆ ಬಳಿಕ ಯು.ಎಸ್. ನ ಡಲ್ಲಾಸ್ ನಲ್ಲಿ ವಾಣಿಜ್ಯ ಪೈಲೆಟ್ ತರಭೇತಿ ಪಡೆದು, ಪರವಾನಿಗೆ ಹೊಂದಿದ್ದಾರೆ.
ತಂದೆಯಂತೆಯೇ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೂರ್ಯಕಾಂತ್ 2011 ರಿಂದ 2019 ರ ತನಕ ಬಿಲ್ಲವರ ಏಸೋಸಿಯೇಷನ್ ನ ಯುವ ಅಭ್ಯುದಯ ಉಪಸಮಿತಿಯಲ್ಲಿ ಸೇವೆ ಗೈದಿರುವರು.ಬಿಲ್ಲವರ ಮಹಾ ಮಂಡಲ ದ ಉಪಾಧ್ಯಕ್ಷರಾಗಿ, ಶ್ರೀ ನಾರಾಯಣ ಗುರು ಇಂಗ್ಲೀಷ್ ಮಾಧ್ಯಮ ಶಾಲೆ ಮುಲ್ಕಿಯ ಟ್ರಸ್ಟಿಯಾಗಿ, ದೇಯಿ ಬೈದತಿ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್ ಬಿತ್ತಲ್ ನ ಟ್ರಸ್ಟಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಅಭಿವೃದ್ಧಿ ಸಮಿತಿಯ ಸದಸ್ಯ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಮುಂಬೈ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸೂರ್ಯ ಅವರ ಮುಂದಾಳತ್ವದಲ್ಲಿ ಭಾರತ್ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಾ ,ಸಹಕಾರಿ ರಂಗದ ಅಗ್ರ ಶ್ರೇಣಿಯ ಬ್ಯಾಂಕ್ ಆಗಲಿ ಎಂಬ ಶುಭ ಹಾರೈಕೆ ನಮ್ಮದು.
Post a Comment