ಸರ್ಕಾರದ ಗ್ಯಾರಂಟಿಗೆ ಬಲಿಪಶುಗಳಾಗುತ್ತಿರುವ ಸರಕಾರಿ ಬಸ್ ನಿರ್ವಾಹಕರು:
ಸರ್ಕಾರದ ಗ್ಯಾರಂಟಿಗೆ ಬಲಿಪಶುಗಳಾಗುತ್ತಿರುವ ಸರಕಾರಿ ಬಸ್ ನಿರ್ವಾಹಕರು:
ಶಕ್ತಿ ಯೋಜನೆ ಜಾರಿ ಬಳಿಕ 300 ಜನ ಕಂಡಕ್ಟರ್ಸ್ ಸಸ್ಪೆಂಡ್
ಉಡುಪಿ ಅ.07: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದಿವೆ. ಈ ಯೋಜನೆ ಅಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಪ್ರಯಾಣ ಜಾರಿಯಾಗುತ್ತಿದ್ದಂತೆ ಸಭೆ, ಸಮಾರಂಭ ಮತ್ತು ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇದರಿಂದ ನಾಲ್ಕು ನಿಗಮಗಳಿಗೆ ಆದಾಯ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ 70,73,05,946 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1648,51,39,030 ಆಗಿದೆ. ನಿಗಮಗಳಿಗೆ ಆದಾಯವೇನೋ ಹೆಚ್ಚಿದೆ ಆದರೆ ನಿರ್ವಾಹಕರಿಗೆ (ಕಂಡಕ್ಟರ್)ಗಳಿಗೆ ತಲೆಬಿಸಿ ಶುರುವಾಗಿದೆ.
ಹೌದು ಶಕ್ತಿ ಯೋಜನೆ ಜಾರಿಯದ ಬಳಿಕ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದ ಮತ್ತು ನಿರ್ವಾಹಕರ ಸ್ವಯಂಕೃತ ತಪ್ಪಿನಿಂದ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮ ಸೇರಿ ಒಟ್ಟು 300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿದೆ ಎಂದು ಓರ್ವ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರೂ, ಮಹಿಳೆಯರು ಟಿಕೆಟ್ ಪಡೆದೇ ಪ್ರಯಾಣಿಸಬೇಕು. ನಿರ್ವಾಹಕ ಮಹಿಳೆಯರಿಗೆ ಅವರು ಪ್ರಯಾಣಿಸುವ ಮಾರ್ಗದ ಟಿಕೆಟ್ ನೀಡುತ್ತಾರೆ. ಆದರೆ ಮಹಿಳೆ ತಾನು ಹೋಗಬೇಕಾದ ಸ್ಥಳವನ್ನು ತಲುಪದೆ ಮಾರ್ಗ ಮಧ್ಯೆ ಇಳಿದರೆ, ನಿರ್ವಾಹಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಉದಾ: ಒಬ್ಬ ಮಹಿಳೆ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತಿ ಹುಬ್ಬಳ್ಳಿಗೆ ಟಿಕೆಟ್ ಪಡೆಯುತ್ತಾಳೆ. ಮಾರ್ಗ ಮಧ್ಯೆ ಮಹಿಳೆ ದಾವಣಗೆರೆಯಲ್ಲಿ ಇಳಿಯುತ್ತಾಳೆ.
ನಂತರ ಟಿಕೆಟ್ ಕಲೆಕ್ಟರ್ ಪರಿಶೀಲನೆಗೆ ಬಂದಾಗ ಮಹಿಳಾ ಪ್ರಯಾಣಿಕ ಇರುವುದಿಲ್ಲ. ಇದರಿಂದ ಅನುಮಾನಗೊಂಡ ಕಲೆಕ್ಟರ್ ನಿರ್ವಾಹಕನಿಗೆ “ನೀನು ಇಲಾಖೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀಯಾ” ಎಂದು ಇಲಾಖೆಗೆ ವಿಷಯ ತಿಳಿಸುತ್ತಾನೆ. ಆಗ ಮೇಲಾಧಿಕಾರಿಗಳು ನಿರ್ವಾಹಕನನ್ನು ಸಸ್ಪೆಂಡ್ ಮಾಡುತ್ತಾರೆ.
ಅಲ್ಲದೆ ಕೆಲವು ನಿರ್ವಾಹಕರು ಇನ್ಸೆಂಟಿವ್ (ಪ್ರೋತ್ಸಾಹಧನ) ಆಸೆಗೆ ಸುಳ್ಳು ಟಿಕೆಟ್ ಹರಿಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಎರಡು ಕಾರಣದಿಂದ ಹೀಗೆ ರಾಜ್ಯಾದ್ಯಂತ ಸಾರಿಗೆ ಇಲಾಖೆ 300ಕ್ಕೂ ಹೆಚ್ಚು ನಿರ್ವಾಹಕರನ್ನು ಸಸ್ಪೆಂಡ್ ಮಾಡಿದೆ. ಇನ್ನು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿರುವುದಾಗಿ ಆರೋಪಿಸಿ ರಾಜ್ಯ ಸರ್ಕಾರ, ಸಾರಿಗೆ ಇಲಾಖೆಗೆ ಒಂದು ತಿಂಗಳ ಹಿಂದೇ ನೋಟಿಸ್ ನೀಡಿದೆ.
ಉಡುಪಿಯಲ್ಲಿ ಇದೇ ರೀತಿಯಾದ ಒಂದು ಘಟನೆ ನಡೆದಿದೆ. ಶಿರಸಿಯಿಂದ ಉಡುಪಿಗೆ ಟಿಕೆಟ್ ಪಡೆದು ಮಹಿಳೆ ಹೊರಟಿದ್ದಳು. ಆದರೆ ಮಹಿಳೆ ಭಟ್ಕಳದಲ್ಲೇ ಇಳಿದು ಧರ್ಮಸ್ಥಳದ ಬಸ್ ಹಿಡಿದಿದ್ದರು. ಈ ಬಗ್ಗೆ ನಿರ್ವಾಹಕನಿಗೆ ಕುಂದಾಪುರದಲ್ಲಿ ಗಮನಕ್ಕೆ ಬಂದಿದೆ. ಆಗ ನಿರ್ವಾಹಕ ಧರ್ಮಸ್ಥಳ ಬಸ್ ನಿರ್ವಾಹಕನ ಸಂಪರ್ಕ ಸಾಧಿಸಿ ಮಹಿಳೆಯನ್ನು ಉಡುಪಿಯಲ್ಲಿ ತಡೆದಿದ್ದಾರೆ. ನಂತರ ನಿರ್ವಾಹಕರು ಮಹಿಳೆಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ವಾಹಕರು ಆಗ್ರಹಿಸಿದ್ದಾರೆ.
Post a Comment