ಮೈಸೂರು: ಮಹಿಷ ದಸರಾ ಆಚರಣೆ ವಿರೋಧಿಸಿ ಕೋರ್ಟ್ಗೆ ಅರ್ಜಿ.
ಮೈಸೂರು: ಮಹಿಷ ದಸರಾ ಆಚರಣೆ ವಿರೋಧಿಸಿ ಕೋರ್ಟ್ಗೆ ಅರ್ಜಿ.
ಮೈಸೂರು ಅ.08: ಮಹಿಷ ದಸರಾ ಆಚರಣೆ ವಿರೋಧಿಸಿ ಮೈಸೂರಿನ 8ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸ್ನೇಹಮಹಿ ಕೃಷ್ಣ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 11ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿದೆ. ಕಳೆದ ಐದಾರು ವರ್ಷದಿಂದ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆ ಸಮಿತಿ, ಮಹಿಷ ದಸರಾ ಆಚರಣೆ ಮಾಡುತ್ತಿದೆ. ದಸರಾ ಸಮಯದಲ್ಲಿ ಈ ಆಚರಣೆಗೆ ವ್ಯಾಪಕ ವಿರೋಧ ವ್ಯಕವಾಗುತ್ತಿದೆ.
ಅಕ್ಟೋಬರ್ 13 ರಂದು ಮಹಿಷ ದಸರಾ
ಮಹಿಷ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಅ.13 ರಂದು ಮಹಿಷ ದಸರಾ ಆಚರಿಸಲು ನಿರ್ಧರಿಸಿದೆ. ತೀವ್ರ ವಿರೋಧದ ನಡುವೆಯೂ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಎರಡು ದಿನಕ್ಕೂ ಮುಂಚೆ ಮಹಿಷ ದಸರಾ ಆಚರಣೆ ನಡೆಸಲು ಸಮಿತಿ ನಿರ್ಧರಿಸಿದೆ. ಮಹಿಷಾಸುರನ ಭಾವಚಿತ್ರವಿರುವ ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಅಂತ ನಮೂದಿಸಲಾಗಿದೆ.
ಅದಾಗ್ಯೂ, ಮಹಿಷ ದಸರಾ ಆಚರಣೆಗೆ ನಾವು ಬಿಡುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಆಚರಣೆ ವಿರೋಧಿಸಿ ಅ.13 ರಂದು ಬಿಜೆಪಿಯಿಂದ ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಈ ಚಲೋ ನಡೆಯಲಿದೆ ಎಂದು ಹೇಳಿದ್ದರು.
ಮಹಿಷಾಸುರ ಮೂಲ ನಿವಾಸಿಗಳ ದೇವರು ಯಾವಾಗ ಆಗಿದ್ದರು? ದೆವ್ವ ಯಾವಾಗ ದೇವರಾಯಿತು ಎಂದು ಗೊತ್ತಿಲ್ಲ ಎಂದ ಪ್ರತಾಪ್ ಸಿಂಹ, ದೇವಿಯನ್ನು ದೆವ್ವ, ದೆವ್ವವನ್ನು ದೇವರು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಚಾಮುಂಡೇಶ್ವರಿ ನಿಮ್ಮ ತಾಯಿಯಲ್ಲವೇ? ಎಲ್ಲರೂ ಪಕ್ಷಾತೀತವಾಗಿ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಈಗಾಗಲೇ ಮನವಿ ಮಾಡಿದ್ದಾರೆ.
2015ರಲ್ಲಿ ಆರಂಭವಾದ ಮಹಿಷ ದಸರಾ ಆಚರಣೆಗೆ ದಿಢೀರ್ 50 ವರ್ಷದ ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Post a Comment