ವಿವಶ ....
----------------------------
-------- ಮುನ್ನುಡಿ --------
ಪಾಪ ಮತ್ತು ಪಶ್ಚಾತ್ತಾಪ ಇವೆರಡು ಮನುಷ್ಯಜೀವಿಗೆ ತಗುಲಿಕೊಂಡು ಬಂದಿರುವ ವಿದ್ಯಾಮಾನಗಳು. ಪಾಶ್ಚಾತ್ಯ ಸಾಹಿತ್ಯದಲ್ಲಿ ಗ್ರೀಕ್ ನಾಟಕಗಳಿಂದ ಹಿಡಿದು ಇತ್ತೀಚಿನ ಸಾಹಿತ್ಯದವರೆಗೂ ಪಾಪ ಮತ್ತು ಪರಿತಾಪ ಮುಖ್ಯ ಪಾತ್ರಗಳನ್ನು ವಹಿಸುತ್ತ ಬಂದಿವೆ. ಪಾಪವನ್ನು ಮಾಡಿಸುವ ಚಟ ಪಾಶ್ಚಾತ್ಯ ಧಾರ್ಮಿಕ ನಂಬಿಕೆಗಳ ಬುನಾದಿ. ಆದರೆ ಭಾರತೀಯ ಸಾಹಿತ್ಯ ಇದಕ್ಕಿಂದ ಭಿನ್ನವಾದ ಮಜಲುಗಳನ್ನು ಹೊಂದಿದೆ.
ಗೆಳೆಯ ಗುರುರಾಜ್ ಸನಿಲ್ ಅವರ ‘ವಿವಶ’ ಕಾದಂಬರಿ ಅನೇಕ ತಿಂಗಳುಗಳಿಂದ ನಮ್ಮ ನಡುವೆ ಒಂದು ಬಹು ಚರ್ಚಿತ ವಿಚಾರವಾಗಿ ಕೆಲಸ ಮಾಡುತ್ತಾ ಬಂದಿದೆ. ಮುಖ್ಯವಾಗಿ ಕನ್ನಡ ಸಾಹಿತ್ಯದಲ್ಲಿ ಡಾ. ಕಾರಂತ, ಕುವೆಂಪು, ಭೈರಪ್ಪ, ರಾವ್ ಬಹದ್ದೂರ, ಲಂಕೇಶ್, ತೇಜಸ್ವೀ, ಕಂಬಾರ, ದೇವನೂರು ಮುಂತಾದವರ ಕಾದಂಬರಿಗಳನ್ನು ನಾನು ಓದುತ್ತ ವಿಶಿಷ್ಟ ಅನುಭವಗಳನ್ನು ಪಡೆದಿದ್ದೇನೆ. ಜೀವನದ, ಬದುಕಿನ ಸ್ತರಗಳು ಬೇರೆ ಬೇರೆ. ಆದುದರಿಂದ ಪ್ರತಿಯೊಬ್ಬ ಬರಹಗಾರನೂ ಒಂದು ಭಿನ್ನ ಸ್ತರದಲ್ಲಿ ಬದುಕುತ್ತಿರುತ್ತಾನೆ. ಬಹುತೇಕ ಜನರು ನಾವೆಲ್ಲ ಒಂದಲ್ಲಾ ಒಂದು ಜಾತಿಯಲ್ಲಿ ಹುಟ್ಟಿಯೇ ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ. ಹುಟ್ಟಿದ ಮಾತ್ರಕ್ಕೆ ಅದೇ ಜಾತಿಯಲ್ಲಿ ಸಾಯಬೇಕೆಂಬ ನಿಯಮವೇನೂ ಇಲ್ಲ. ಅದನ್ನು ಮೀರಬೇಕಾದ ಕೆಲಸವನ್ನು ಶಿಕ್ಷಣ ಹಾಗೂ ಸಂಸ್ಕೃತಿಯ ಮೂಲಕ ಮಾಡಬೇಕು. ತೀರಾ ಕೆಳಸ್ತರದ ಜೀವನವನ್ನು ಕಂಡಿರುವ ಗುರುರಾಜ್ ಸನಿಲ್ ಅವರು ತಮ್ಮ ಜೀವನಾನುಭವವನ್ನು ಪ್ರಾಮಾಣಿಕವಾಗಿ ವಿವಶ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಈ ಕಾದಂಬರಿಯಲ್ಲಿ ಹುಟ್ಟಿ ಬದುಕುವ ಎಲ್ಲಾ ಪ್ರೇಮಿಗಳೂ ವ್ಯಕ್ತಿಗಳೂ ನಾಗರಿಕವೆಂದು ನಾವು ಕರೆಯುವ ಸಮಾಜದ ಕಲ್ಪನೆಗೆ ವಿರುದ್ಧ ದಿಕ್ಕಿನಲ್ಲಿ ಬದುಕುತ್ತಿರುವವರು. ಸಮಾಜದ ಎಲ್ಲರಂತೆ ಇವರೂ ಧರ್ಮ, ದೇವರು, ರಾಜಕೀಯ ಸಾಮಾಜಿಕ ಆವರಣದಲ್ಲೇ ಬದುಕನ್ನು ಕಟ್ಟಿಕೊಂಡವರು. ಆದರೆ ಇವರ ಬದುಕಿನಲ್ಲಿ ಮತದಾನ ರಾಜಕೀಯ ಬರುವುದಿಲ್ಲ. ಧರ್ಮ, ದೇವರುಗಳ ಜಿಜ್ಞಾಸೆ ಬರುವುದಿಲ್ಲ. ಅವರ ಬದುಕನ್ನು ಆಳುವ ಶಕ್ತಿ ಕಾಮ. ಮನುಷ್ಯ ಕಾಮದ ಶಕ್ತಿಯಿಂದ ಆಳಲ್ಪಟ್ಟರೂ ಅದರ ಪರಿಣಾಮವನ್ನು ತಾನು ಮಾಡಿದ್ದೇನೆಂದೇ ಭಾವಿಸುತ್ತಾನೆ. ಅದು ಪ್ರಕೃತಿಯ ಎಲ್ಲಾ ಪ್ರಾಣಿಗಳಲ್ಲೂ ಸಹಜ. ಹಾಗೆಂದು ತನ್ನನ್ನು ಆಳುವ ಕಾಮ, ಪ್ರೇಮಗಳನ್ನು ಮನುಷ್ಯ ದೇವರೆಂದು ಪೂಜಿಸಿಲ್ಲ. ಇದನ್ನೆಲ್ಲ ಆಳುವ ಇನ್ನೊಬ್ಬನಿಂದ್ದಾನೆಂದು ಮನುಷ್ಯ ಸಮಾಜ ನಂಬಿಕೊಂಡು ಬಂದಿರುವುದು ಮನುಷ್ಯ ಜೀವನ ಇತಿಹಾಸದ ವಿಸ್ಮಯ.
ವಿವಶ ಕಾದಂಬರಿ ಆರಂಭವಾಗುವುದೇ ಆಸ್ತಿಪಾಲುಗಾರಿಗೆಯ ಕೊಲೆ ಪ್ರಯತ್ನದ ದೃಶ್ಯದೊಂದಿಗೆ. ಭಾವನೆಯ ಸ್ತರಗಳಲ್ಲಿ ತಮ್ಮನ್ನು ಅಂಕೆಯಲ್ಲಿಟ್ಟುಕೊಳ್ಳಲಾರದ ಪಾತ್ರಗಳ ಚಿತ್ರಣವೇ ವಿವಶದ ಜೀವಾಳ. ಶ್ರೀಧರ ಶೆಟ್ಟರು ಒಬ್ಬ ಅಪಾರ ಶ್ರೀಮಂತಿಕೆಯನ್ನು ಗಳಿಸುವ ವ್ಯಕ್ತಿಯಾದರೆ ಅವರ ಸುತ್ತಮುತ್ತ ಬದುಕುವ ವ್ಯಕ್ತಿಗಳೆಲ್ಲ ದುಡಿಮೆಯ ವರ್ಗದವರು. ಕಾದಂಬರಿಯಲ್ಲಿ ಕಾಣಬರುವ ಮುಖ್ಯ ಪಾತ್ರಗಳಾದ ತೋಮ ಮತ್ತು ಅವನ ಹೆಂಡತಿಯಾಗುವ ಪ್ರೇಮ ಮೊದಮೊದಲು ಯೌವನದ ಒತ್ತಡಕ್ಕೆ ಒಳಗಾಗಿ ಪ್ರೇಮಿಸತೊಡಗುತ್ತಾರೆ. ಕ್ರಮೇಣ ಅವರ ಬದುಕಿನಲ್ಲಿ ಹೊಟ್ಟೆಯ ಹಸಿವು, ಮನಸ್ಸಿನ ಹಸಿವು ಇವುಗಳ ಜತೆ ಇವುಗಳನ್ನು ನಿಯಂತ್ರಿಸುವ ಮೂರನೆಯ ಸಂಗತಿಯೊಂದು ಕಾಣಿಸಿಕೊಳ್ಳುತ್ತದೆ. ಅದು ಸಾರಾಯಿ. ಮೊದಲೇ ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಲಾಗದ ಈ ಪ್ರೇಮಿಗಳ ಜೀವನ ಅಮಲಿನ ವಾತಾವರಣದಲ್ಲೇ ಸಾಗತೊಡಗುತ್ತದೆ. ಮಿತಿಯಿಲ್ಲದ ಕ್ರೌರ್ಯ ಅವರ ಜೀವನವನ್ನು ಆಳತೊಡಗುತ್ತದೆ. ತೋಮ ತನ್ನ ಕಾಮ ಪ್ರೇಮಗಳ ಜೀವನವನ್ನು ಮೇರಿಯೊಂದಿಗೂ ತಳಕು ಹಾಕಿಕೊಳ್ಳುತ್ತಾನೆ. ಪ್ರೇಮದಲ್ಲಿ ಆರಂಭವಾದ ಅವರ ಜೀವನಯಾತ್ರೆ ಕ್ರೌರ್ಯದ ಗಡುವನ್ನು ವಿಸ್ತರಿಸುತ್ತದೆ. ಇದಕ್ಕೆಲ್ಲ ಪೂರಕವಾಗಿ ಕುಮ್ಮಕ್ಕು ನೀಡುವ ಕುಡಿತವು ಅವರ ಜೀವಿತವನ್ನು ದಾರುಣ ನರಕವನ್ನಾಗಿ ಮಾಡುತ್ತದೆ. ತೋಮನ ಸಾವು ಕೂಡಾ ಕುಡಿತದ ಮಿತಿಯಿಲ್ಲದ ಉದಾಹರಣೆ. ಆದರೆ ಇವರೆಲ್ಲರ ಬದುಕಿನ ಹಿನ್ನೆಲೆಯಲ್ಲಿ ತಾವೇಕೆ ಹೀಗೆ ಮಾಡುತ್ತಿದ್ದೇವೆ ಹೀಗೆ ಮಾಡುವುದು ಸರಿಯೇ ಎಂಬ ಒಂದು ಸಣ್ಣ ಪ್ರಶ್ನೆಯೂ ಮೂಡುವುದಿಲ್ಲ. ಇವರ ಉಸಿರಾಟದ ಜತೆಗೆ ಬೆರೆತು ಬಾಳುವ ಇವರ ಮಗಳು ಶ್ವೇತಾ ಇವರ ಯಾವುದೇ ರೀತಿಯ ಚಾಳಿ, ಗೀಳುಗಳಿಗೆ ಬಲಿಯಾಗದೆ ಬೇರೆ ರೀತಿಯ ಸ್ವಭಾವವನ್ನು ರೂಢಿಸಿಕೊಳ್ಳುವುದು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಧ್ವನಿಸುವ ವಿಶೇಷ ಸಂಗತಿಯಾಗಿದೆ.
ತೋಮ, ಪ್ರೇಮರ ಹಾಗೆಯೇ ಇನ್ನೊಂದು ಸಂಸಾರ ಲಕ್ಷ್ಮಣ ಸರೋಜಾರದ್ದು. ಮನೆಬಿಟ್ಟು ಹೊರಟು ಅವರು ಕಟ್ಟಿಕೊಳ್ಳುವ ಬದುಕು ಒಂದು ಮನೋಹರ ದಾಂಪತ್ಯದ ಸೂಚನೆಯನ್ನು ಮೊದಲು ನೀಡುತ್ತದೆ. ಆದರೆ ಲಕ್ಷ್ಮಣ ನಿಗೆ ಒದಗುವ ಉಸ್ಮಾನ್ ಸಾಹೇಬರ ಸಹಚರ್ಯ ಅವನ ಬದುಕಿನ ದಿಕ್ಕನೇ ಬದಲಿಸಿಬಿಡುತ್ತದೆ. ಉಸ್ಮಾನ್ ಸಾಹೇಬನ ಕಳ್ಳ ನಾಟಾ ದಂಧೆಯಲ್ಲಿ ಲಕ್ಷ್ಮಣ ತನ್ನ ಬದುಕನ್ನು ಸಮರ್ಥಿಸಿಕೊಳ್ಳಲು ಹೋಗಿ ತಾನು ಕೂಡಾ ಜೀವನದ ಕ್ರೌರ್ಯದ ಆಟಗಳಿಗೆ ಬಲಿಯಾಗುತ್ತಾನೆ. ಅವನು ಕಾಡಿನಲ್ಲಿ ಗಾಯಗೊಳಿಸಿದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆಯು ಮುಂದೆ ಅವನ ಜೀವನದ ಧಾರುಣ ಹಿಂಸೆಗೆ ಕಾರಣವಾಗುತ್ತದೆ. ಶ್ರೀಧರ ಶೆಟ್ಟರ ಬಂಧು ಪೊಲೀಸ್ ಇನ್ಸ್ಪೆಕ್ಟರ್ ಭೂತಕಾಲದ ನೆನಪಿನೊಂದಿಗೆ ಅವನ ಮೇಲೆ ದೆವ್ವವಾಗಿ ಎರಗುತ್ತಾನೆ. ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದು ಹೈರಾಣಾಗಿ ಬಂದ ಲಕ್ಷ್ಮಣ ಕುಡಿತ, ಕಳ್ಳತನವನ್ನು ಮೀರಲಾಗದ ಒಂದು ದುರಂತ ಜೀವನ ಅವರ ಬದುಕಿನ ಜತೆ ಅವರ ಮೊದಲ ಮಗಳು ಶಾರದಾಳ ಜೀವನವನ್ನೂ ಬಲಿತೆಗೆದುಕೊಳ್ಳುತ್ತದೆ. ಅವಳು ಮುಂಬೈ ಕಾಮಟಿಪುರದ ಸೊತ್ತಾಗಿಬಿಡುವುದು ಇನ್ನಿಲ್ಲದ ವಿಷಾದದ ಸಂಗತಿಯಾಗುತ್ತದೆ.
ಸರೋಜಾ, ಲಕ್ಷ್ಮಣ ನ ಜತೆ ಕುಡಿತದ ಗೀಳಿಗೆ ಒಳಗಾಗುವುದು ತಾಮಸನ ಎದೆಯಲ್ಲಿ ತನ್ನ ಉಸಿರನ್ನು ಉದುಗಿಸಿ ಸುಖಪಡುವುದು ಅವಳ ದುರಂತಕ್ಕೆ ಕಾರಣವಾಗುತ್ತದೆ. ಈ ಎರಡು ಪ್ರಮುಖ ಪ್ರೇಮಗಳ ಚಿತ್ರಣದೊಂದಿಗೆ ಸನಿಲ್ ತನ್ನ ಲೇಖನಿಯನ್ನು ಜೀವನ ಪ್ರವಾಹ ಒಯ್ದತ್ತ ಹರಿಯಬಿಟ್ಟಿದ್ದಾರೆ. ಯಾವ ಪಾತ್ರಗಳನ್ನೂ ಅವುಗಳು ತಾವಾಗಿ ಮಾಡಿದ ಪಾಪಗಳಿಂದ ರಕ್ಷಿಸಲು ಅವರು ಹೋಗುವುದಿಲ್ಲ.
ಮೂರನೆಯ ಮುಖ್ಯವಾದ ಸಂಗತಿ ಎಂದರೆ ರಾರ್ಬಟ್ ಹಾಗೂ ಜೆಸಿಂತಾ ಬಾಯಿಯ ಮಕ್ಕಳಾದ ಅಂಥೋನಿ ತಾಮಸರ ಅಮಲು ಲೋಕದ ಕತೆ. ಈ ಸಂಸಾರ ಊರಿನಲ್ಲಿದ್ದ ಯಾವ ಸಂಸಾರಗಳನ್ನೂ ಕುಡಿತದ ಪ್ರಭಾವದಿಂದ ಹೊರತಾಗಲು ಬಿಡುವುದಿಲ್ಲ. ಅದಕ್ಕೆ ಸಾಕ್ಷಿ ಗೋಪಾಲಕೃಷ್ಣ ಭಟ್ಟರ ಮಗ ರಾಮಭಟ್ಟ ಕುಡಿತದ ಗೀಳಿಗೆ ಒಳಗಾಗುವುದು. ತಾಮಸನ ಅತಿಕಾಮದ ಕ್ರೌರ್ಯದ ಘಟನೆಯೆಂದರೆ ನಾಗರತ್ನ ಮತ್ತು ವಿಮಲರ ಮೇಲೆ ತನ್ನ ಪಡೆಯ ಮೂಲಕ ಮಾಡುವ ಅತ್ಯಾಚಾರ. ನಾಗರತ್ನ ನೀಡಿದ ಪ್ರತಿಕ್ರಿಯೆಯಿಂದಾಗಿ ಉತ್ತೇಜಿತನಾದ ತಾಮಸನ ಪಡೆ ವಿಠ್ಠಲ ಶೇಣವನ ಸಾಕ್ಷಿಯಲ್ಲಿ ಕಾಡಿನಲ್ಲಿ ನಡೆಸುವ ಅತ್ಯಾಚಾರದ ಘಟನೆಯ ವಿವರ ಎಂಥವರನ್ನೂ ಬೆಚ್ಚಿ ಬೀಳಿಸುತ್ತದೆ. ಅತ್ಯಾಚಾರ, ಸಾರಾಯಿ ತಯಾರಿಕೆ ಮತ್ತು ಹಂಚುವಿಕೆಯಲ್ಲಿ ಸರಿದೂಗಿಸಿಕೊಂಡು ಹೋಗುವ ತಾಮಸ ಆಂಥೋನಿಯರಿಗೆ ಬ್ರಾಹ್ಮಣವರ್ಗದವರೂ ತಮ್ಮ ಪೌರುಷದಿಂದ ಬಗ್ಗಿಸಲು ಹೋಗುವ ದೃಶ್ಯ ಯಾವ ವರ್ಣವೂ ಎಷ್ಟೇ ಧರ್ಮದೇವರುಗಳ ಕುರಿತು ಮಾತಾಡಿದರೂ ಕ್ರೌರ್ಯದಿಂದ ಮುಕ್ತವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಲಕ್ಷ್ಮಣ ನಿಂದಾಗಿ ಶ್ರೀಧರದ ಶೆಟ್ಟರ ಮಗ ಜಯಂತನೊಡನೆ ಜಗಳಾಡುವ ಅಣ್ಣಪ್ಪ ಕಾಮತರೂ ಅವನ ಧಮಕಿಗೆ ಜಗ್ಗುವುದಿಲ್ಲ. ಒಟ್ಟು ಕಾದಂಬರಿ ಸನಿಲ್ ಚಿತ್ರಿಸುವ ಜೀವನ ಸ್ತರದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುವಂಥದ್ದು.
ಇಂಥ ಕ್ರೌರ್ಯದ ಸುಡುಬಿಸಿಲಿನಲ್ಲೇ ಸಾಗುವ ಬಾಳಿನ ಯಾತ್ರೆಯಲ್ಲಿ ಅಶೋಕ ಹಾಗೂ ಅವನ ಹೆಂಡತಿ ಸುಮತಿ, ಪ್ರೇಮಾಳ ಬದುಕಿನ ಕೊನೆಯ ಆಸರೆಯಾಗಿ ನಿಲ್ಲುವುದು. ಅಶೋಕ ತನ್ನ ಹೆಂಡತಿಯ ಮಾರ್ದವತೆಗೆ ಬಾಗಿ ತನ್ನ ಬದುಕನ್ನು ಕ್ರೌರ್ಯದ ಪರಿಧಿಯಿಂದ ಹೊರಗೆ ತಂದು ನಿಲ್ಲಿಸುವುದು ಕಾದಂಬರಿಯ ಕುತೂಹಲದ ತಿರುವಾಗಿದೆ. ಸರೋಜಾಳ ಬದುಕೂ ಅವಳ ಹಿರಿಯರ ಮನೆಯ ಪಾಲಿನಿಂದಾಗಿ ಅಲ್ಲಿರುವ ಅವಳ ಮುಂದಿನ ತಲೆಮಾರುಗಳ ವ್ಯಕ್ತಿತ್ವದಿಂದ ಕೊನೆಗಾಲದಲ್ಲಿ ಒಂದು ಸಮಾಧಾನಕ್ಕೆ ಮರಳುವುದು ಕಾದಂಬರಿಕಾರ ಜೀವನದ ಅನ್ಯ ಮಜಲುಗಳ ಹುಡುಕಾಟದಲ್ಲಿರುವುದನ್ನು ಸೂಚಿಸುತ್ತದೆ. ಕಾದಂಬರಿಯಲ್ಲಿ ಬರುವ ಮೇಲುಮಟ್ಟದ ಬದುಕಿನ ವ್ಯಕ್ತಿಗಳಾದ ಶ್ರೀಧರಶೆಟ್ಟರು, ಅವರ ಬಂಧು ಪೊಲೀಸ್ ಅಧಿಕಾರಿ, ಅಂಗಡಿಯ ಕಾಮತರು, ಸಾಮಗರು, ಗೋಪಾಲಕೃಷ್ಣ ಭಟ್ಟರು ಯಾರು ಕೂಡಾ ಕೋಪ ಹಾಗೂ ಅದರಿಂದ ಬರುವ ಪೌರುಷದಿಂದ ಹೊರತಾದವರಲ್ಲ. ಆದರೆ ಸನಿಲ್ ರೂಪಿಸುವ ಬದುಕಿನ ಎಲ್ಲ ಘಟನೆಗಳು ಎಲ್ಲಾ ಕ್ರೌರ್ಯದ ಪರಮಾವಧಿಗಳೂ ಪ್ರೇಮದ ತಣ್ಣನೆಯ ಸ್ಪರ್ಶದಲ್ಲಿ ಮಾಗುವುದು ಅವರ ಆಶಯದ ಪ್ರತೀಕವಾಗಿದೆಯೇನೋ. ತಾಮಸ ತನ್ನ ಬದುಕಿನ ಅಂತ್ಯದಲ್ಲಿ ರಿಕ್ಷಾದಲ್ಲಿ ತಿರುಗಾಡಿ ಬರುವುದು. ನೀರವ ಚರ್ಚಿನ ಮೌನದ ಆವರಣದಲ್ಲಿ ಪ್ರಾರ್ಥಿಸುವುದು ಇದಕ್ಕೆ ಉದಾಹರಣೆ. ಪ್ರೇಮಾಳಿಗೆ ಅಶೋಕನ ಮನೆಯಲ್ಲಿ ಸಂಜೆಗತ್ತಲಲ್ಲಿ ತೋಮನ ರೂಹು ಗೋಚರಿಸುವುದು. ಅವಳು ಅವನಿಗೆ ಎಡೆ ಇಡಲು ಹೇಳುವುದು ನಂಬಿಕೆಯನ್ನು ಮೀರಿದ ಪ್ರೇಮದ ಒಂದು ದ್ಯೋತಕವಾಗಿದೆ.
ಬದುಕುವವರೆಲ್ಲರೂ ಬರಹಗಾರರಾಗಲು ಸಾಧ್ಯವಿಲ್ಲ. ಹೆಚ್ಚಿನವರು ಬರಹದ ಆಕರಗಳಾಗುತ್ತಾರೆ. ಕೆಲವರು ಬರೆಯುತ್ತಾರೆ. ಹೀಗೆ ಬರೆಯುವವರಲ್ಲಿ ಜೀವನದ ಪ್ರವಾಹವನ್ನು ವಿಶಿಷ್ಟವಾಗಿ ಗ್ರಹಿಸುವ ಶಕ್ತಿಯಿರುತ್ತದೆ. ಬದುಕುವವರೆಲ್ಲರೂ ತಮ್ಮ ಸೀಮಿತ ಬದುಕಿನ ಮಿತಿಯಲ್ಲಿ ಬದುಕಿಗೆ ಅರ್ಥ ನೀಡಲು ಪ್ರಯತ್ನಿಸುತ್ತಲೂ ಇರಬಹುದು. ಆದರೆ ತಾನು ಏಕೆ ಹುಟ್ಟಿದೆ? ಏಕೆ ಬದುಕುತ್ತಿದ್ದೇನೆ ಎಂಬ ಮೂಲಭೂತ ಪ್ರಶ್ನೆಯೊಂದು ಜೀವಿಯನ್ನು ಒಂದಲ್ಲ ಒಂದು ಹಂತದಲ್ಲಿ ಕಾಡುತ್ತಲೇ ಇರುತ್ತದೆ. ಲೇಖಕನಿಗೆ ಜೀವನವೇ ಆದಿ ಜೀವನವೇ ಅಂತ್ಯ. ಜೀವನವೇ ಇತಿ, ಜೀವನವೇ ಮಿತಿ. ಸನಿಲ್ ಕಾಣಿಸಿಕೊಟ್ಟಿರುವ ಜೀವನದ ಮಜಲು ಎಲ್ಲ ಕಾಲದಲ್ಲೂ ಎಲ್ಲಾ ಸಮಾಜದಲ್ಲೂ ಇದ್ದೇ ಇರುವಂಥದ್ದು. ಈ ಸ್ತರದ ಜೀವನಕ್ಕೆ ಶಿಕ್ಷಣದಿಂದ, ಸಂಸ್ಕೃತಿಯಿಂದ, ಧರ್ಮದೇವರುಗಳಿಂದ ಬದಲಾವಣೆ ತರಬಹುದೇ ಎನ್ನುವುದು ಒಂದು ಸಂದಿಗ್ಧ ವಿಷಯ. ಏಕೆಂದರೆ ನಾಗರಿಕವೆಂದು ಕರೆಯಿಸಿಕೊಂಡು ಬಾಳುವ ರಾಜಕೀಯ ಜೀವನದ ಸ್ತರದಲ್ಲಿ ಕಾಮ ಮತ್ತು ಕ್ರೌರ್ಯ ಹಾಗೂ ಕುಡಿತದ ಪಾಲು ಬಹಳಷ್ಟಿದೆ. ಅದರಲ್ಲಿ ಇನ್ನೊಂದು ರೀತಿಯ ಸಭ್ಯತೆಯ ಮುಖವಾಡವನ್ನು ಹಾಕಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಬದುಕುವವರು ಒಂದು ಫ್ಯಾಂಟಿಸಿಯಲ್ಲಿ ಬದುಕಬಲ್ಲರು. ಆದರೆ ಪ್ರೇಮ, ತೋಮರು, ಲಕ್ಷ್ಮಣ ಸರೋಜಾ, ತಾಮಸ, ಆಂಥೋನಿ ಇವರೆಲ್ಲ ತಮ್ಮ ಬದುಕನ್ನು ಪತನಕ್ಕೆ ಕೊಂಡೊಯ್ದು ಪಶ್ಚಾತ್ತಾಪದಿಂದ ಮಾಗುತ್ತಾರೆಯೇ ಹೊರತು ಬೆಟ್ಟಗುಡ್ಡಗಳನ್ನು ನಾಶ ಮಾಡಿ, ಕಾಡುಗಳ್ಳರಾಗಿ ಶ್ರೀಮಂತರಾಗಿ ಭೂಮಿಗೇ ಹಿರಣ್ಯಾಕ್ಷರಾಗುವ ಸಂತತಿಯವರಲ್ಲ. ಆದರೆ ಇವೆಲ್ಲದರ ನಡುವೆ ಎಲ್ಲರಂತೆ ಎಲ್ಲ ರೀತಿಯ ಭಾವನೆಗಳಿಗೆ ಒಳಗಾಗಿಯೂ ಅವರಿಂದ ಹೊರತಾದ ವಿವರವಾದ ವ್ಯಕ್ತಿತ್ವವನ್ನು ಹೊಂದಿರುವ ಅಕ್ಕಯಕ್ಕ ಎಲ್ಲಾ ಪಾತ್ರಗಳನ್ನೂ ಮೀರಿ ಜೀವನವನ್ನು ಗೆದ್ದು ನಿಲ್ಲುತ್ತಾಳೆ. ಇದು ವಿಸ್ಮಯ.
ಇದಕ್ಕೆ ಉದಾಹರಣೆಯಾಗಿ, “ಅಷ್ಟರಲ್ಲಾಗಲೇ ಕಾಲವೂ ಸಾಕಷ್ಟು ಬದಲಾಗಿತ್ತು. ಚೌಳುಕೇರಿಯ ಅನೇಕ ಗುಡಿಸಲುಗಳು ಹಂಚಿನ ಮನೆಗಳಾಗಿ ಮಾರ್ಪಟ್ಟಿದ್ದುವು. ಮುಖ್ಯ ರಸ್ತೆಗಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಂದು ಬೆಳಗುತ್ತಿದ್ದುವು. ಆದರೆ ಅಕ್ಕಯಕ್ಕನ ಗುಡಿಸಲು ಮಾತ್ರ ಮೊದಲಿಗಿಂತಲೂ ಅಧೋಗತಿಗಿಳಿದಿತ್ತು. ಅವಳೀಗ ಹಣ್ಣುಹಣ್ಣು ಮುದುಕಿಯಾಗಿದ್ದಳು. ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಿವಿಗಳು ಮಂದವಾಗಿದ್ದವು. ಅವಳ ದೂರದ ಸಂಬಂಧಿಹುಡುಗನೊಬ್ಬ ಅವಳನ್ನು ನೋಡಿಕೊಳ್ಳುತ್ತಿದ್ದ. ತನ್ನ ಮನೆ ಬಾಗಿಲಿಗೆ ಎರಡನೆಯ ಬಾರಿ ಬಂದು ನಿಂತ ಲಕ್ಷ್ಮಣನ ಗುರುತು ಅವಳಿಗೆ ಬೇಗನೇ ಹತ್ತಲಿಲ್ಲ. ಆದ್ದರಿಂದ ಲಕ್ಷ್ಮಣ ನೇ ತನ್ನನ್ನು ಪರಿಚಯಿಸಿಕೊಂಡ. ಅಷ್ಟು ಕೇಳಿದ ಅವಳು ಕ್ಷಣಹೊತ್ತು ಅವನನ್ನೇ ಮೌನವಾಗಿ ದಿಟ್ಟಿಸಿದಳು. ಬಳಿಕ ಅವಳ ಬೆಳ್ಳಗಿನ ಹುಬ್ಬುಗಳು ನಿಧಾನವಾಗಿ ಬಿಗಿದುಕೊಂಡವು. ಕಣ್ಣುಗಳು ಮೆಲ್ಲನೆ ಮಂಜಾದುವು. ಮರುಕ್ಷಣ ಅವನ ಮುಖ ನೋಡಲೇ ಇಷ್ಟವಿಲ್ಲದಂತೆ ಮುದುಕಿಯ ಮುಖವು ಕಳೆಗುಂದಿತು. ಮಗನೆಂದುಕೊಂಡಿದ್ದ ಮಮಕಾರವೂ, ಆನಂತರ ನಡೆದ ಘಟನೆಗಳೆಲ್ಲವೂ ಒಟ್ಟೊಟ್ಟಿಗೆ ಅವಳ ಮುನ್ನೆಲೆಗೆ ಬಂದು ಮನಸ್ಸು ಹಿಂಡಿದ್ದರಿಂದಲೋ ಏನೋ ಬರುಡೆಯ ಆಳಕ್ಕಿಳಿದು ಕುಳಿತಿದ್ದ ಕಣ್ಣುಗಳಲ್ಲಿ ಕೋಪದ ಕಿಡಿ ಕಾಣಿಸಿತು. ಮುಂದಿನಕ್ಷಣ ಅವಳೊಳಗಿನ ಹತಾಶೆಯ ಭಾವಗಳು ಭುಗಿಲೆದ್ದು ಮನಸೋಇಚ್ಛೆ ಬೈಗುಳದ, ಅಳುವಿನ ರೂಪದಲ್ಲಿ ಲಕ್ಷ್ಮಣ ನ ಮೇಲೆ ಹರಿಹಾಯ್ದವು. ಆದರೆ ಲಕ್ಷ್ಮಣ ನು ಅವಳಿಗಿಂತಲೂ ಜರ್ಝರಿತನಾಗಿದ್ದವನು. ಹಾಗಾಗಿ ಅವನಿಂದ ಯಾವೊಂದು ಪ್ರತಿಕ್ರಿಯೆಯೂ ಹೊರಡಲಿಲ್ಲ. ಅವನು ಹೊರಗಿನ ಜಗುಲಿಯಲ್ಲಿ ತಲೆತಗ್ಗಿಸಿ ಕುಳಿತಿದ್ದವನು, ಸೆಗಣಿ ಸಾರಿಸಿದ ಅಂಗಳದಲ್ಲಿ ಒರಟು ಒರಟಾಗಿ ಎದ್ದು ಕಾಣಿಸುತ್ತಿದ್ದ ಸಣ್ಣಸಣ್ಣ ಕಲ್ಲುಗಳನ್ನು ತನ್ನ ಬಲಗಾಲಿನ ಹೆಬ್ಬೆರಳಿನಿಂದ ಕೆದಕುತ್ತ ಇದ್ದುಬಿಟ್ಟ. ಕೆಲವು ಕ್ಷಣಗಳ ನಂತರ ಅಕ್ಕಯಕ್ಕ ತಣ್ಣಗಾದಳು. ಅವನ ಪರಿಸ್ಥಿತಿಯು ಅವಳಲ್ಲಿ ಕನಿಕರವನ್ನೂ ಮೂಡಿಸಿತು. ಹಾಗಾಗಿ, ‘ಹೋಗು, ಹೋಗು. ಇನ್ನಾದರೂ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಬುದ್ಧಿಯನ್ನು ದೇವರು ನಿನಗೆ ಕೊಡಲಿ!’ ಎಂದು ಒರಟಾಗಿ ಹರಸಿ, ಸರೋಜಾಳ ವಿಳಾಸಕೊಟ್ಟು ಕಳುಹಿಸಿದಳು. ಲಕ್ಷ್ಮಣ ನು ದುಃಖದಿಂದ ಎದ್ದವನು ಅಕ್ಕಯಕ್ಕನ ಪಾದಮುಟ್ಟಿ ನಮಸ್ಕರಿಸಿ ಅಲ್ಲಿಂದ ಹಿಂದಿರುಗಿದ” ಎಂದು ಅಕ್ಕಯಕ್ಕನ ಭಾವಕೋಶವನ್ನು ಲೇಖಕರು ಚಿತ್ರಿಸುವ ರೀತಿ ಮಾರ್ಮಿಕವಾಗಿದೆ.
ಮುಖ್ಯವಾಗಿ ಕಾದಂಬರಿ ಆರಂಭವಾಗಿ ಜೀವನ ಯಾತ್ರೆ ಸಾಗಿ ಅದು ಕೊನೆಗೊಳ್ಳುವ ರೀತಿ ಅತ್ಯಂತ ಕುತೂಹಲಕರವಾಗಿದೆ. ಕಾದಂಬರಿ ಓದಿದ ಮೇಲೆ ಇಷ್ಟೆಲ್ಲಾ ಕಾಡುತ್ತದೆ ಎಂದರೆ ಜೀವನ ಹಗುರವಾಗಿ ತೆಗೆದುಕೊಳ್ಳುವ ವಿಚಾರವೇನಲ್ಲ. ಇದರ ಕುರಿತು ಗಂಭೀರವಾಗಿ ಕಾಡಿಸಿಕೊಳ್ಳುವ ಲೇಖಕ ಗುರುರಾಜ್ ಸನಿಲ್ ಅವರು, ವ್ಯಕ್ತಿಯೊಬ್ಬ ತನ್ನೊಳಗಿನ ಕಿಡಿಯನ್ನು ಹೊತ್ತಿಸಿಕೊಂಡು ತನಗೇ ಬೆಳಕಾಗಬಲ್ಲ ಎಂಬುದಕ್ಕೆ ನಮ್ಮ ನಡುವೆ ಸಾಕ್ಷಿಯಾಗುತ್ತಾರೆ.
ಸರ್ಪಗಳಲ್ಲಿ ವಿಷವಿದ್ದು ಅವುಗಳನ್ನು ಪ್ರೀತಿಸಿ ಪರಿಸರ ಪ್ರೇಮಿಯಾಗಿ ಪರಿಸರದ ಕುತೂಹಲದ ಅಧ್ಯಯನವನ್ನು ಮುಂದುವರೆಸಿಕೊಂಡು ಬಂದಿರುವ ಸನಿಲ್ ಅವರು ಮನುಷ್ಯ ಸ್ವಭಾವದಲ್ಲಿ ಅದಕ್ಕಿಂತಲೂ ಹೆಚ್ಚಿನ ವಿಷವನ್ನು ಕಂಡಿರಬಹುದು. ಆದುದರಿಂದ ಅವರ ಅಪಾರ ಅನುಭವಗಳಿಗೆ ಕಾದಂಬರಿ ಒಂದು ಒಳ್ಳೆಯ ಅಭಿವ್ಯಕ್ತಿ ಮಾಧ್ಯಮ. ಈಗಾಗಲೇ ‘ಆವರ್ತನ’ ಎಂಬ ಎರಡನೆಯ ಕಾದಂಬರಿಯನ್ನೂ ಬರೆದು ಮುಗಿಸಿರುವ ಸನಿಲ್ ಅವರು ಈ ಕೃಷಿಯನ್ನು ಮುಂದುವರೆಸಿ ಇನ್ನಷ್ಟು ಅಸಾಧಾರಣ ಕೃತಿಗಳ ಸೃಷ್ಟಿಗೆ ಕಾರಣರಾಗುತ್ತಾರೆ ಎಂಬ ಭರವಸೆ ನನ್ನದು. ಕಾದಂಬರಿಯ ಕುರಿತು ಇಷ್ಟನ್ನು ಬರೆಯಲು ಅವಕಾಶ ಕೊಟ್ಟ ಅವರ ಸ್ನೇಹಕ್ಕೆ ನಾನು ಕೃತಜ್ಞನಾಗಿದ್ದೇನೆ.
✍✍ ಶ್ರೀ ಗುರುರಾಜ ಮಾರ್ಪಳ್ಳಿ
--------------------------------
------ ಕಾದಂಬರಿಕಾರನ ಮಾತು... ------
ಕಾದಂಬರಿ ಬರೆಯಬೇಕೆಂಬ ಆಸೆ ಬಹಳ ಹಿಂದಿನದು. ಹಾಗಾಗಿ ಇತ್ತೀಚೆಗೆ 2018ರಲ್ಲಿ ಧೈರ್ಯ ಮಾಡಿ ಕುಳಿತು ಒಂದಷ್ಟು ಪುಟಗಳನ್ನು ಬರೆದೆ. ಆದರೆ ಕೊನೆಯಲ್ಲಿ ಇಡೀ ಕಥೆ ಗೋಜಲ ಹಂದರವಾಗಿ ಕಂಡಿದ್ದರಿಂದಬದಿಗಿರಿಸಿಬಿಟ್ಟೆ. ಆನಂತರ ಸಣ್ಣ ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸತೊಡಗಿದೆ. ಅವೆಲ್ಲ ಬಹುತೇಕ ತಕರಾರಿಲ್ಲದೆ ಪ್ರಕಟಗೊಂಡವು ಮತ್ತು ಅಷ್ಟೇ ಬೇಗ, ‘ಗುಡಿ ಮತ್ತು ಬಂಡೆ’ ಕಥಾಸಂಕಲವಾಗಿ ಬೆಳಕು ಕಂಡವು. ಆ ಸ್ಫೂರ್ತಿಯಿಂದ ಮತ್ತೆ ಕಾದಂಬರಿಯನ್ನು ಕೈಗೆತ್ತಿಕೊಂಡೆ. ಬರವಣಿಗೆಯ ಶೈಲಿ ತುಸು ಮಾಗಿದ್ದರಿಂದಲೋ ಏನೋ ಕಥಾವಸ್ತುವು ಸರಾಗವಾಗಿ ಬೆಳೆಯುತ್ತ ಹೋಗಿ ಸಾವಿರ ಪುಟ ತಲುಪುವ ಸೂಚನೆ ಕಂಡಿತು. ಆದ್ದರಿಂದ ಅದಕ್ಕೊಂದು ಸ್ಪಷ್ಟ ರೂಪ ಕೊಡುವಲ್ಲಿ ಮತ್ತೆ ತೊಡಕಾಯಿತು. ಬರೆದುದರ ಮೂರನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಅದಕ್ಕೆ ಜೀವ ತುಂಬಿದೆ. ಅದುವೇ ‘ವಿವಶ’ ವಾಯಿತು.
ಇಲ್ಲಿನ ಕಥೆಯು ಸುಮಾರು ಸಾವಿರದ ಒಂಬೈನೂರ ಐವತ್ತರಿಂದ ಎರಡು ಸಾವಿರದ ಹತ್ತನೆಯ ಇಸವಿಯವರೆಗೆ ನಡೆದಿರುವ ವಿಲಕ್ಷಣ ಜನಜೀವನವೊಂದರ ವಿಸ್ತೃತ ನೋಟವೆನ್ನಬಹುದು. ಆಗಿನ ಉಡುಪಿ ತಾಲೂಕಿನ ಸಣ್ಣದೊಂದು ಗ್ರಾಮದ ತಳಮಟ್ಟದ ಜನರ ಬದುಕನ್ನು ಪೀಡಿಸಿದ ಬಡತನ ಮತ್ತದಕ್ಕೆ ಜೊತೆಯಾದ ಅವರ ಅಜ್ಞಾನ ಹಾಗೂ ದುಶ್ಚಟ. ಅವಕ್ಕೆ ಅಂಟಿಕೊಂಡೇ ಸಾಗಿದ ಅವರ ಕಡಿವಾಣವಿಲ್ಲದ ಕಾಮ ಮತ್ತು ಕ್ರೌರ್ಯಗಳು. ‘ದೇವರು ಯಾಕೋ ಹುಟ್ಟಿಸಿದ್ದಾನೆ. ಹುಟ್ಟಿದ ಮೇಲೆ ಬದುಕಬೇಕು. ಅದಕ್ಕಾಗಿ ನಮಗೆ ತೋಚಿದಂತೆ ಬದುಕುತ್ತಿದ್ದೇವೆ. ಅದನ್ನು ಬಿಟ್ಟು ಬೇರೇನೂ ವಿಶೇಷವಿಲ್ಲ. ಇದ್ದರೂ ನಮ್ಮಂಥವರಿಗದು ಅನ್ವಯಿಸುವುದಿಲ್ಲ! ಎಂಬಂತೆಯೇ ಬದುಕಿದವರು ಇಲ್ಲಿನ ಮುಖ್ಯ ಪಾತ್ರಗಳು. ಅಂಥವರನ್ನು ಕರುಣೆ, ನ್ಯಾಯ ಮತ್ತು ಉದ್ಧಾರದ ನೆಪದಿಂದಲೂ ಲಾಭ, ದುರಾಸೆಯಿಂದಲೂ ಶೋಷಿಸುತ್ತ ನೆಮ್ಮದಿ ಕಾಣುತ್ತಿದ್ದ ಒಂದಷ್ಟು ಸ್ಥಿತಿವಂತವರ್ಗ ಹಾಗೂ ಅಂದಿನ ಕೆಲವು ಅಧಿಕಾರಿಗಳ ದೌರ್ಜನ್ಯಗಳನ್ನು ಸಮೀಪದಿಂದ ಕಾಣುತ್ತ ಬಂದವನು ನಾನು. ಆದ್ದರಿಂದ ಮನುಷ್ಯರು ಹೀಗೂ ಬದುಕಬಹುದೇ? ಸುತ್ತಮುತ್ತಲಿನ ನಾಗರಿಕ ಸಮಾಜದ ಮೇರುಮಟ್ಟದ ಸಂಸ್ಕೃತಿ, ಸಂಸ್ಕಾರಗಳು ಅವರನ್ನೆಲ್ಲ ತಾವೆಣಿಸಿದಂಥ ಪರಿಪೂರ್ಣತೆಯತ್ತ ಕೊಂಡೊಯ್ಯುತ್ತಿರುವಾಗ ಈ ಜನರು ಮಾತ್ರ ಯಾವೊಂದು ದೂರದೃಷ್ಟಿತ್ವವೂ ಇಲ್ಲದೆ ಪಶ್ಚಾತ್ತಾಪ ಅಥವಾ ಪಾಪಪ್ರಜ್ಞೆಗಳೆಲ್ಲ ತಮ್ಮ ಮನೆಯ ಹಿತ್ತಲ ಬೇಲಿಯ ಮುಳ್ಳುಕಂಟಿಗಳಿದ್ದಂತೆಯೇ ಎಂದು ನಿಸ್ಸಾರವಾಗಿ ಬದುಕಿಬಿಟ್ಟರಲ್ಲ! ಎಂಬ ಆಘಾತ ಮತ್ತು ಅನುಕಂಪದಿಂದ ಹುಟ್ಟಿದ ವಿಚಿತ್ರ ತಳಮಳವೇ ನನ್ನಿಂದ ಈ ಕೃತಿಯನ್ನು ಬರೆಯಿಸಿತೆಂದು ಕಾಣುತ್ತದೆ. ಇಲ್ಲಿ ಕಲ್ಪಿತವಾಗಿರುವ ಹೆಚ್ಚಿನ ಪಾತ್ರಗಳು ನಾನು ಸಮೀಪದಿಂದ ಕಂಡವು ಮತ್ತು ಒಡನಾಡಿದವು. ಹಾಗಾಗಿ ಈ ಕಾದಂಬರಿಯು ಕೆಲವು ದಶಕಗಳಷ್ಟು ಹಿಂದೆ ಸರಿದ ಕಾಲಮಾನದ ವಿಭಿನ್ನ ಜನಜೀವನವೊಂದರ ಚಿತ್ರಣವನ್ನು ವಸ್ತುನಿಷ್ಠವಾಗಿ ಪ್ರಿಯ ಓದುಗರಿಗೆ ಕಾಣಿಸಬಲ್ಲದು ಎಂಬುದು ನನ್ನ ನಂಬಿಕೆ.
ಈ ಬರಹದ ಕರಡು ಪ್ರತಿಯನ್ನು ಓದಿ ಮುಕ್ತವಾಗಿ ಚರ್ಚಿಸಿ, ವಿರ್ಮಶಿಸಿ ತಿದ್ದುಪಡಿಗೊಳಿಸುವಲ್ಲಿ ಸಹಕರಿಸಿದ ಮುಂಬೈ ಗೆಳತಿ, ಖ್ಯಾತ ಸಾಹಿತಿ, ಶ್ರೀಮತಿ ಅನಿತಾ ಪಿ. ತಾಕೋಡೆ ಅವರಿಗೆ ಕೃತಜ್ಞತೆಗಳು. ಈ ಕೃತಿಯನ್ನು ಓದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಕೆಲವು ಸಲಹೆಗಳನ್ನು ನೀಡಿ ಮುನ್ನುಡಿಯನ್ನೂ ಬರೆದ ಸಾಹಿತಿ, ಚಿಂತಕ ಹಾಗೂ ನಿದೇರ್ಶಕರಾದ ಹಿರಿಯ ಸ್ನೇಹಿತ ಶ್ರೀ ಗುರುರಾಜ ಮಾರ್ಪಳ್ಳಿ ಅವರಿಗೆ ಧನ್ಯವಾದಗಳು.
ನಾನೊಬ್ಬ ಸ್ವತಃ ಪ್ರಕಾಶಕನಾಗಿ ನನ್ನದೇ ಒಂಬತ್ತು ಕೃತಿಗಳನ್ನು ಪ್ರಕಟಿಸಿರುವೆನಾದರೂ ಆ ಕೃತಿಗಳ ಮಾರಾಟದ ವಿಷಯದಲ್ಲಾದ ಅನುಭವಗಳಿಂದಾಗಿ ಆ ನಂತರ ಬರೆದ ಎರಡು ಕಾದಂಬರಿಗಳನ್ನು ಓದುಗರಿಗೆ ತಲುಪಿಸುವಂಥ ಉತ್ತಮ ಪ್ರಕಾಶನವೊಂದರ ನಿರೀಕ್ಷೆಯಲ್ಲಿದ್ದೆ. ಅದೇ ಸಂದರ್ಭದಲ್ಲಿ ‘ಮಂಗಳ’ ವಾರ ಪತ್ರಿಕೆಯ ಸಂಪಾದಕರಾದ ಶ್ರೀ ‘ಎನ್ನೇಬಿ’ ಮೊಗ್ರಾಲು ಪುತ್ತೂರು ಅವರ ಸಹಾಯ ದೊರಕಿದ್ದು ನೆಮ್ಮದಿಯ ವಿಚಾರ. ಹಾಗಾಗಿ ಆತ್ಮೀಯ ಎನ್ನೇಬಿ ಅವರಿಗೂ, ‘ಕಾವ್ಯ ಸ್ಪಂದನ’ ಪಬ್ಲಿಕೇಷನ್‌ನ ಶ್ರೀ ಭದ್ರಾವತಿ ರಾಮಾಚಾರಿ ಅವರಿಗೂ ಕೃತಜ್ಞನಾಗಿದ್ದೇನೆ.
✍✍ ಗುರುರಾಜ ಸನಿಲ್, ಉಡುಪಿ
‘ನನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೇ ಸಮಪಾಲು ಕೊಡುವುದಿಲ್ಲವಂತೆ! ಎಷ್ಟೊಂದು ಕೊಬ್ಬು ಇವುಗಳಿಗೆ? ಅಪ್ಪ ಸಾಯುವ ಮುಂಚೆ ಎಲ್ಲವನ್ನೂ ಇತ್ಯರ್ಥ ಮಾಡಿಯೇ ಕಣ್ಣುಮುಚ್ಚಿದರಲ್ಲ? ಹಾಗಾದರೆ ಇವರು ನನಗೆ ಕೊಡುತ್ತಿರುವುದು ಇವರ ಹೆಂಡತಿಯರ ಮನೆಯ ಆಸ್ತಿಯನ್ನಾ? ಅಪ್ಪ ಇದ್ದಾಗ ನಾಯಿಗಳಂತೆ ಬಾಲ ಮುದುರಿಕೊಂಡಿದ್ದ ಈ ಅಣ್ಣಂದಿರು, ಈಗ ಒಡಹುಟ್ಟಿದ ಸಂಬಂಧ ವನ್ನೇ ಮರೆತು ಗುಳ್ಳೆ ನರಿಗಳಂತೆ ಆಡುತ್ತಿದ್ದಾರೆಂದರೆ ಏನರ್ಥ? ನನ್ನ ಅಜ್ಜ, ಅಪ್ಪನಿಂದ ನ್ಯಾಯವಾಗಿ ಬರಬೇಕಾದ ಆಸ್ತಿಯನ್ನು ನಾನು ಕೇಳುತ್ತಿರುವುದು. ಅದನ್ನು ಕೊಡದಿದ್ದರೆ ಇವರನ್ನು ಸುಮ್ಮನೆ ಬಿಡಲಿಕ್ಕುಂಟಾ! ಕಿರಿಯಣ್ಣ ಶಂಭು ಹೋಗಲಿ ಅವನು ಮೊದಲಿನಿಂದಲೂ ಕೆಡುಕ. ಆದರೆ ಹಿರಿಯಣ್ಣ ರಘುರಾಮ...? ನಿನ್ನೆ ಮೊನ್ನೆಯವರೆಗೆ ತಂದೆಯ ಸ್ಥಾನದಲ್ಲಿ ನಿಂತು ನಮ್ಮನ್ನೆಲ್ಲ ಅಕ್ಕರೆಯಿಂದ ನೋಡಿಕೊಳ್ಳುತ್ತ, ‘ತಮ್ಮಾ... ನೀವೆಲ್ಲಾ ನನ್ನ ಮಕ್ಕಳಿದ್ದಂತೆ ಮಾರಾಯ. ಒಡಹುಟ್ಟಿದವರು ನಾವು, ಕೊನೆಯವರೆಗೂ ಒಗ್ಗಟ್ಟಿನಲ್ಲಿ ಬಾಳಬೇಕು ನೋಡು!’ ಎಂದು ಬೆಣ್ಣೆಯಂತೆ ಮಾತಾಡುತ್ತಿದ್ದವನು ಈಗ ಬೆಳ್ಳಗಿನ ಹೆಂಡತಿಯೊಬ್ಬಳು ಬಗಲಿಗೆ ಬಂದು ನಿಂತ ಕೂಡಲೇ ರಕ್ತ ಸಂಬಂಧವನ್ನೇ ಕಡಿದುಕೊಳ್ಳಲು ಹೊರಟಿದ್ದಾನಲ್ಲ. ಇದೆಲ್ಲ ಇವರ ಒಳ್ಳೆಯದಕ್ಕೆಂದುಕೊಂಡರಾ ಮೂರ್ಖರು...!
ಆ ಹೆಂಗಸರಾದರೂ ಹೊರಗಿನಿಂದ ಬಂದವರು. ಅವರು ತಂತಮ್ಮ ಮಕ್ಕಳು ಮರಿಗಳ ಮತ್ತು ಸ್ವಂತ ಕುಟುಂಬದ ಮೋಹದಿಂದ ಹಾಗೆಲ್ಲಾ ಆಡುತ್ತಿರಬಹುದು. ಆದರೆ ಇವರಿಗೆ ಬುದ್ಧಿ ಬೇಡವಾ? ಪಿತ್ರಾರ್ಜಿತ ಆಸ್ತಿಯನ್ನು ಅಪ್ಪನೊಂದಿಗೆ ಕೂಡಿ ಇವರೇ ತಮ್ಮ ಜೀವ ತೇಯುತ್ತ ಕಾಪಾಡಿಕೊಂಡು ಬಂದವರಂತೆ . ಹಾಗಾಗಿ ಸಮ ಪಾಲು ಕೊಡಲು ಸಾಧ್ಯವಿಲ್ಲವಂತೆ. ಇದೆಂಥ ನ್ಯಾಯ? ಹಿರಿಯರ ಆಸ್ತಿಪಾಸ್ತಿಯನ್ನು ಅವರ ಕಿರಿಯವರಲ್ಲಿ ಯಾರಾದರೂ ದೊಡ್ಡವರು ರಕ್ಷಿಸಿಕೊಂಡು ಬರುವುದು ಸಹಜವಲ್ಲವಾ. ಅದಕ್ಕೆ ಪ್ರತಿಯಾಗಿ ಕಿರಿಯರ ಪಾಲನ್ನೇ ಕಬಳಿಸುವುದೆಂದರೆ...? ಅಲ್ಲಾ, ನಿನ್ನೆಯವರೆಗೆ ಅನ್ಯೋನ್ಯವಾಗಿದ್ದ ಈ ಶಂಭಣ್ಣ ಆಸ್ತಿ ಪಾಲಿನ ಮಾತೆತ್ತಿದ ಕೂಡಲೇ ನನ್ನನ್ನೇ ಕೊಲ್ಲಲು ಕತ್ತಿ ಹಿಡಿದು ಬಂದುಬಿಟ್ಟನಲ್ಲಾ, ಎಂಥ ಅವಮಾನ! ಒಂದುವೇಳೆ ಆಕ್ಷಣ ನಾನೂ ದುಡುಕುತ್ತಿದ್ದರೆ ಅವನು ಉಳಿಯುತ್ತಿದ್ದನಾ? ಆದರೆ ನನಗೆ ನನ್ನದೇ ಆದ ಕನಸುಗಳಿವೆಯಲ್ಲ...! ಅವನ್ನು ಕಟ್ಟಿಕೊಂಡು ದಡ ಸೇರುವುದರ ಬಗ್ಗೆ ಯೋಚಿಸುತ್ತಿರುವುದರಿಂದ ಈವರೆಗೆ ಇವರನ್ನೆಲ್ಲ ಸಹಿಸಿಕೊಳ್ಳುತ್ತ ಬಂದೆ. ಹಾಗಾಗಿಯೇ ಬಹುಶಃ ಆ ಬೇವರ್ಸಿ ಇವತ್ತು ನನ್ನ ಕೈಯಿಂದ ಬಚಾವಾದುದು! ಅದಕ್ಕೆ ಸರಿಯಾಗಿ ಇವಳೊಬ್ಬಳು ನನ್ನ ಹೆಂಡತಿ. ಬರೇ ಒಂದು ಬೆಪ್ಪು ತಕ್ಕಡಿ ಹೆಂಗಸು! ಯಾವ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಳ್ಳುವವಳಲ್ಲ. ಎಲ್ಲದಕ್ಕೂ ಒಂದೇ ರಾಗ, ‘ಅಯ್ಯೋ, ಸುಮ್ಮನಿರಿ..., ದುಡುಕಬೇಡಿ. ದೇವರಿದ್ದಾನೆ. ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಾನೆ!’ ಎನ್ನುತ್ತ ನನ್ನ ಆಸೆ, ಆಕಾಂಕ್ಷೆಗಳಿಗೆಲ್ಲ ಕಲ್ಲು ಹಾಕುತ್ತ ಬಂದಳು. ದೇವರು ಎಂಥದು ನೋಡಿಕೊಳ್ಳುವುದು ಕರ್ಮ...? ಅವನು ಯಾರಿಗೆ ಏನೇನು ಮತ್ತು ಎಷ್ಟೆಷ್ಟು ಕೊಡಬೇಕೋ ಅಷ್ಟಷ್ಟನ್ನು ಕೊಟ್ಟು ಕೈ ತೊಳೆದುಕೊಂಡು ಎಲ್ಲೋ ಕುಳಿತಿದ್ದಾನೆ. ಆದರೆ ಅದನ್ನು ಉಳಿಸಿಕೊಳ್ಳುವುದು ಬಿಡುವುದು ನಮ್ಮ ನಮ್ಮ ಕೈಯಲ್ಲೇ ಇರುವುದು.
ಇನ್ನೂ ಎಷ್ಟು ಕಾಲಾಂತ ಈ ಒಡಹುಟ್ಟಿದ ಸ್ವಾರ್ಥಿಗಳ ಜೀತದಾಳಾಗಿ ಬದುಕಬೇಕು ನಾನು? ನನಗೂ ಸಂಸಾರವಿದೆ. ಅದಕ್ಕೊಂದು ಸ್ವತಂತ್ರ ನೆಲೆಯಾಗಬೇಕು ಮತ್ತು ನನ್ನದೇ ಸ್ವಂತ ಆಸ್ತಿಪಾಸ್ತಿ ಮಾಡಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದಾ? ಅದೆಲ್ಲ ಇವರಿಗೆ ಹೇಗೆ ತಿಳಿಯಬೇಕು? ಇಲ್ಲ, ನನ್ನ ಪಾಲಿನದ್ದು ಅದೊಂದು ಹಿಡಿ ಮಣ್ಣಾದರೂ ಸರಿ, ಯಾರಿಗೂ ಬಿಟ್ಟುಕೊಡುವುದಿಲ್ಲ. ಅದನ್ನು ಪಡೆಯುವಲ್ಲಿ ಯಾವ ಅಡೆತಡೆಗಳು ಬಂದರೂ ಅಥವಾ ಎಂಥ ರಕ್ತ ಸಂಬಂಧಗಳು ಕಡಿದು ಹೋದರೂ ಹಿಂಜರಿಯುವುದಿಲ್ಲ. ಅವಶ್ಯಕತೆ ಬಿದ್ದರೆ ಯಾರನ್ನಾದರೂ ಮುಗಿಸಲೂ ಸಿದ್ಧ! ಯಾರನ್ನು ಯಾಕೆ? ನ್ಯಾಯವಾಗಿ ಆಸ್ತಿ ಕೇಳಿದ್ದಕ್ಕೆ ಒಡಹುಟ್ಟಿದ ತಮ್ಮನನ್ನೇ ಕಡಿಯಲು ಬಂದನಲ್ಲ, ಆ ಅಣ್ಣ ಎನ್ನುವ ಶಂಭುವನ್ನೇ ಮುಗಿಸುತ್ತೇನೆ. ಅನಂತರ ದೊಡ್ಡಣ್ಣಂದಿರನ್ನು ಸಂಭಾಳಿಸುವುದು ಮಹಾ ಕೆಲಸವಲ್ಲ. ಆದರೆ ಇಂಥದ್ದಕ್ಕೆಲ್ಲ ಗೆಳೆಯ ಶಿವನೇ ಸರಿಯಾದ ವ್ಯಕ್ತಿ. ಅವನು ನನ್ನ ಬಾಲ್ಯ ಸ್ನೇಹಿತ ಮತ್ತು ನನಗಾಗಿ ಜೀವ ಕೊಡಲೂ ಸಿದ್ಧನಿರುವವನು!’ ಎಂದು ನಡಂತೂರು ದೊಡ್ಡಮನೆಯ ಮುದ್ದು ಶೆಟ್ಟರ ಆರು ಜನ ಮಕ್ಕಳಲ್ಲಿ ಕೊನೆಯವರಾದ ಶ್ರೀಧರ ಶೆಟ್ಟರು ಸುಮಾರು ದೂರದ ತಮ್ಮ ಬಾಕಿಮಾರು ಗದ್ದೆಯ ಹುಣಿಯಲ್ಲಿ ಗಾಯಗೊಂಡ ಹುಲಿಯಂತೆ ಶತಪಥ ಹೆಜ್ಜೆ ಹಾಕುತ್ತ ಚಿಂತಿಸುತ್ತಿದ್ದರು.
ಅದೇ ಹೊತ್ತಲ್ಲಿ ಶೆಟ್ಟರನ್ನು ಅರಸಿಕೊಂಡು ಅವರ ಗೆಳೆಯ ಶಿವ ಅವರ ಮನೆಯತ್ತ ಹೋದ. ಆದರೆ ಅಲ್ಲಿ ಆಗಷ್ಟೇ ಅಣ್ಣ ತಮ್ಮಂದಿರ ನಡುವೆ ನಡೆದ ರಾದ್ಧಾಂತವನ್ನು ಶೆಟ್ಟರ ಪತ್ನಿ ಕಾವೇರಮ್ಮ ದುಃಖದಿಂದ ಹೇಳಿಕೊಂಡು ಅತ್ತರು. ತನ್ನ ಜೀವದ ಗೆಳೆಯನ ಪತ್ನಿಯ ಗೋಳಾಟವನ್ನು ಕಂಡ ಶಿವ ವಿಚಲಿತನಾದವನು, ‘ನೋಡಿ ಕಾವೇರಕ್ಕಾ, ನೀವು ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ನಿಶ್ಚಿಂತೆಯಿಂದಿರಬೇಕು. ಎಲ್ಲವೂ ಸಮ ಆಗುತ್ತದೆ. ಶ್ರೀಧರಣ್ಣ ಎಲ್ಲಿದ್ದರೂ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು!’ ಎಂದು ಸಾಂತ್ವನ ಹೇಳಿ ಶೆಟ್ಟರನ್ನು ಹುಡುಕುತ್ತ ಗದ್ದೆಯತ್ತ ನಡೆದ.
ಅಲ್ಲೇ ಒಂದಷ್ಟು ದೂರದ ಗದ್ದೆಯ ಹುಣಿಯಲ್ಲಿ ಅತ್ತಿಂದಿತ್ತ ನಡೆದಾಡುತ್ತಿದ್ದ ಶ್ರೀಧರ ಶೆಟ್ಟರು ಹತಾಶೆಯಿಂದ ಕುದಿಯುತ್ತಿದ್ದರು. ಅವರೊಳಗಿನ ಕ್ರೋಧದ ಯೋಚನೆಯಷ್ಟೇ ವೇಗದಲ್ಲಿ ಅವರ ಒರಟು ಹೆಜ್ಜೆಗಳೂ ಗದ್ದೆಯ ಹುಣಿಯಲ್ಲಿ ಹುಲುಸಾಗಿ ಬೆಳೆದಿದ್ದ ದಟ್ಟ ಗರಿಗೆ ಹುಲ್ಲು ಮತ್ತು ಕೋಣದ ಹುಲ್ಲುಗಳನ್ನು ಜಜ್ಜಿ ತುಳಿಯುತ್ತ ಅಡ್ಡಾಡುತ್ತಿದ್ದವು. ಆದರೆ ಕೊನೆಯಲ್ಲಿ ಶತ್ರುವನ್ನು ಮುಗಿಸುವ ನಿರ್ಧಾರ ಬಲಗೊಳ್ಳುತ್ತಲೇ ಅವು ತುಸು ಶಾಂತವಾದವು. ಅಷ್ಟರಲ್ಲಿ ಶಿವ ಬರುತ್ತಿದ್ದುದನ್ನು ಕಂಡವರು ಮರಳಿ ಉನ್ಮತ್ತರಾದರು. ಶೆಟ್ಟರನ್ನು ಸಮೀಪಿಸಿದ ಶಿವ, ‘ನೀವೆಂಥದು ಶ್ರೀಧರಣ್ಣ... ಎಲ್ಲಾ ಬಿಟ್ಟು ಹೀಗೆ ಬಂದು ಬಿಡುವುದಾ? ಅಲ್ಲಿ ಕಾವೇರಕ್ಕ ಕಂಗಾಲಾಗಿದ್ದಾರೆ ಗೊತ್ತುಂಟಾ!’ ಎಂದು ಆಕ್ಷೇಪಿಸಿದ.
‘ಅಯ್ಯೋ...! ಮತ್ತೇನು ಮಾಡುವುದು ಶಿವಾ...? ಒಡಹುಟ್ಟಿದವರೇ ಕಡಿದು ಕೊಲ್ಲುವಷ್ಟು ಮುಂದುವರೆದರೆಂದರೆ ಅಂಥ ಜಾಗದಲ್ಲಿ ಹೇಗೆ ನಿಲ್ಲುವುದು ಹೇಳು?’
‘ವಿಷಯ ನನಗೂ ತಿಳಿಯಿತು ಶ್ರೀಧರಣ್ಣ. ಆದರೆ ಅದಕ್ಕೆಲ್ಲಾ ನೀವು ಇಷ್ಟೊಂದು ಕುಗ್ಗಬಾರದು. ನಿಮ್ಮ ಪಾಲನ್ನು ನೀವು ಕೇಳಿದ್ದರಲ್ಲಿ ಅರ್ಥವಿದೆ. ಆದರೆ ಅದನ್ನವರು ಕೊಡದಿದ್ದರೆ ನಾವೂ ಬಿಡುವುದು ಬೇಡ. ಕೋರ್ಟಿಗೆ ಹೋಗುವ. ಪಂಚ ಪಾಂಡವರ ಮತ್ತು ಕೌರವರ ಮಧ್ಯೆ ನಡೆದ ಯುದ್ಧದ ಕಥೆ ಗೊತ್ತುಂಟಲ್ಲವಾ ನಿಮಗೆ. ಅದು ಚೂರೂ ಸುಳ್ಳಲ್ಲ. ಆಸ್ತಿಪಾಸ್ತಿಗಾಗಿ ಇಲ್ಲಿ ಯಾರು ಯಾರನ್ನಾದರೂ ಲಗಾಡಿ ತೆಗೆಯುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಗತಿಯಲ್ಲವಾ ಶ್ರೀಧರಣ್ಣಾ!’
‘ಅರೇ...! ಕೋರ್ಟಿಗೆ ಯಾಕೆ ಹೋಗಬೇಕು ಶಿವಾ? ನಾನೇನು ಅವರ ಆಸ್ತಿಯನ್ನು ಕೇಳುತ್ತಿದ್ದೇನಾ...? ಇಲ್ಲವಲ್ಲ! ಇಲ್ಲ ಶಿವಾ ನಾನಿದನ್ನು ಸುಮ್ಮನೆ ಬಿಡುವುದಿಲ್ಲ. ಆ ದುರಹಂಕಾರಿ ಶಂಭುವನ್ನು ಮುಗಿಸಿಯೇ ತೀರಬೇಕು. ಹಾಗಾದರೆ ಮಾತ್ರ ಉಳಿದವರೂ ಬಾಲ ಮುದುರಿಕೊಳ್ಳುತ್ತಾರೆ!’ ಎಂದ ಶೆಟ್ಟರು ಕಟಕಟ ಹಲ್ಲು ಕಡಿದರು.
‘ಛೇ, ಛೇ!, ಹಾಗೆಲ್ಲ ಯೋಚಿಸುವುದು ಬೇಡ ಶ್ರೀಧರಣ್ಣ. ಎಷ್ಟಾದರೂ ಅಣ್ಣ ತಮ್ಮಂದಿರಲ್ಲವಾ? ಸ್ವಲ್ಪ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವ. ಕೊಡದೆ ಎಲ್ಲಿಗೆ ಹೋಗುತ್ತಾರೆ? ಇನ್ನೊಮ್ಮೆ ಎಲ್ಲರನ್ನೂ ಸೇರಿಸಿ ಪಂಚಾತಿಕೆ ಮಾಡಿಸಿ. ಅವರು ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ಆಮೇಲೆ ನಿರ್ಧರಿಸುವ!’
‘ಇಲ್ಲ ಶಿವ ನನ್ನ ಅಣ್ಣಂದಿರ ಸ್ವಭಾವ ನಿನಗಿನ್ನೂ ಸರಿಯಾಗಿ ಗೊತ್ತಿಲ್ಲ. ಈ ಪಾಲುಪಟ್ಟಿಯ ಮಾತುಕತೆ ಅಪ್ಪ ಇದ್ದಾಗಿನಿಂದಲೂ ನಡೆದು ಬಂದಿದೆ. ಅವರು ಪಾಪ ಸಾಯುವ ಹೊತ್ತಲ್ಲೂ ಇವರಿಗೆಲ್ಲ ಬುದ್ಧಿವಾದ ಹೇಳಿಯೇ ಸತ್ತರು. ಆದರೆ ಆಗ ಅವರ ಮಾತಿಗೆ ಪೊಳ್ಳು ಗೌರವ ತೋರಿಸುತ್ತಿದ್ದ ಈ ನಾಯಿಗಳು ಈಗ ಬಾಲ ಬಿಚ್ಚಿವೆ. ಹೆದರಿಕೆ ಬೆದರಿಕೆಗಳಿಗೆಲ್ಲ ಬಗ್ಗುವ ಜನ ಇವರಲ್ಲ ಶಿವಾ. ಇವರಿಗೇನಿದ್ದರೂ ಪೆಟ್ಟೊಂದು ತುಂಡೆರಡು ಅಂತಾರಲ್ಲ ಹಾಗೆ ಮಾಡಿದರೆ ಮಾತ್ರ ಬುದ್ಧಿ ಬರುವುದು. ಯಾಕೆಂದರೆ ರಘುರಾಮಣ್ಣ, ಪುರಂದರಣ್ಣ ಒಪ್ಪಿದರೂ ಆ ಬೇವರ್ಸಿ ಖಂಡಿತಾ ಒಪ್ಪುವುದಿಲ್ಲ. ಹಾಗಾಗಿಯೇ ಇವತ್ತು ಅವನು ನನ್ನನ್ನು ಕೊಲ್ಲಲು ಬಂದಿದ್ದು. ಇವಳಲ್ಲದಿದ್ದರೆ ಕಡಿದೇ ಹಾಕುತ್ತಿದ್ದನೇನೋ! ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಶಿವಾ!’ ಎಂದು ಶೆಟ್ಟರು ಕೋಪದಿಂದ ಕಂಪಿಸುತ್ತ ಅಂದಾಗ ಶಿವನಿಗೂ ಸಹಿಸದಾಯಿತು.
‘ಆಯ್ತು ಶ್ರೀಧರಣ್ಣ ನಿಮ್ಮ ಮೇಲೆ ಕೈ ಮಾಡಲು ಬಂದವರು ಯಾರೇ ಆಗಿರಲಿ ಅವರು ನನಗೂ ಶತ್ರುಗಳೇ! ಆದರೂ ಇನ್ನೊಮ್ಮೆ ಅವರನ್ನು ಪಂಚಾಯ್ತಿ ಕರೆಯಿಸಿ. ಅಲ್ಲಿ ಅವನು ಏನು ಹೇಳುತ್ತಾನೆ, ಏನು ಮಾಡುತ್ತಾನೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆಯಿಡುವ ಆಗದಾ...?’ ಎಂದು ಶಿವ ಏನನ್ನೋ ಯೋಚಿಸುತ್ತ ಅಂದ.
‘ಸರಿ. ನಿನ್ನ ಮಾತಿಗೆ ಬೆಲೆಕೊಟ್ಟು ಅದನ್ನೂ ಮಾಡಿ ನೋಡುತ್ತೇನೆ. ಆದರೆ ಅದೂ ವ್ಯರ್ಥವಾದರೆ ಅವನನ್ನು ಮುಗಿಸಲೇಬೇಕು ಮತ್ತು ಆ ಕೆಲಸ ನಿನ್ನಿಂದಲೇ ಆಗಬೇಕು ಶಿವಾ. ನಂತರ ಅದೇನಾಗುವುದೋ ನಾನು ನೋಡಿಕೊಳ್ಳುತ್ತೇನೆ. ನನ್ನ ಒಂದಷ್ಟು ಆಸ್ತಿಪಾಸ್ತಿ ಮಾರಿ ಹೋದರೂ ಚಿಂತೆಯಿಲ್ಲ. ಪ್ರಾಣ ಕೊಟ್ಟಾದರೂ ನಿನ್ನನ್ನು ಉಳಿಸಿಕೊಳ್ಳುತ್ತೇನೆ ಶಿವಾ. ನಿನಗೆ ನನ್ನ ಮೇಲೆ ವಿಶ್ವಾಸ ಉಂಟಲ್ಲವಾ?’
‘ಛೇ,ಛೇ! ಎಂಥ ಮಾತಾಡ್ತೀರಿ ಶ್ರೀಧರಣ್ಣಾ...? ಹಾಗೆಲ್ಲ ನನ್ನನ್ನು ಅಪನಂಬಿಕೆಯಿಂದನೋಡಬೇಡಿ. ನಮ್ಮ ದೇಹಗಳು ಎರಡಾದರೂ ಪ್ರಾಣವೊಂದೇ ಎಂಬಂತೆ ಬೆಳೆದವರು ನಾವು. ಅಂದ ಮೇಲೆ ವಿಶ್ವಾಸ, ಅವಿಶ್ವಾಸದ ಮಾತೆಲ್ಲಿ ಬಂತು. ನನ್ನ ಉಸಿರಿರುವ ತನಕ ನಿಮ್ಮ ಒಂದು ಕೂದಲು ಕೊಂಕಲೂ ಬಿಡುವುದಿಲ್ಲ. ಚಿಂತಿಸಬೇಡಿ. ನಾಳೆಯೇ ಪಂಚಾಯ್ತಿ ಸೇರಿಸಿ!’ ಎಂದು ಶಿವ ಆವೇಶದಿಂದ ಸೂಚಿಸಿದ. ಗೆಳೆಯನ ಭರವಸೆಯಿಂದ ಶೆಟ್ಟರ ಕಣ್ಣುಗಳು ತೇವಗೊಂಡವು.
‘ನಿನ್ನಂತಹ ಸ್ನೇಹಿತನನ್ನು ಪಡೆದ ನನ್ನ ಜೀವನ ಸಾರ್ಥಕವಾಯಿತು ಶಿವಾ. ನನಗಾಗಿ ನೀನು ಏನು ಮಾಡಲೂ ಸಿದ್ಧನಿರುವಿಯೆಂದು ಗೊತ್ತುಂಟು!’ ಎಂದು ಅವನನ್ನು ಬಾಚಿ ತಬ್ಬಿಕೊಂಡ ಶೆಟ್ಟರು, ‘ನಡೆ ಮನೆಗೆ ಹೋಗುವ!’ ಎಂದು ಅವನ ಹೆಗಲ ಮೇಲೆ ಕೈ ಹಾಕಿಕೊಂಡು ಮನೆಯತ್ತ ನಡೆದರು.
(ಮುಂದುವರೆಯುವುದು)
ಮೊದಲ ಸಂಚಿಕೆ ತುಂಬಾ ಚನ್ನಾಗಿ ಮೂಡಿಬಂದಿದೆ
ReplyDeleteವಿವಶ ಕಾದಂಬರಿ ಮುಂಬಯಿ ನ್ಯೂಸ್ ಅಂತರ್ಜಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತಾತಿರುವುದಕ್ಕೆ ಮೊದಲಿಗೆ ಪತ್ರಿಕಾ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು.
ReplyDeleteಹೆಸರಾಂತ ಸಾಹಿತಿ ಗುರುರಾಜ್ ಸನಿಲ್ ಅವರ ವಿವಶ ಕಾದಂಬರಿಯನ್ನು ಆಯ್ಕೆ ಮಾಡಿರು. ಉದು ನಿಜಕ್ಕೂ ಖುಷಿ ನೀಡಿದೆ. ಈಗಾಗಲೇ ಅನೇಕರ ಮೆಚ್ಚುಗೆಗೆ ಪಾತ್ರವಾಗಿರುವ ವಿವಶ ಕಾದಂಬರಿ ಧಾರಾವಾಹಿಯ ಮೂಲಕವೂ ಜನಮನ್ನಣೆಯನ್ನು ಪಡೆದು ಯಶಸ್ವಿಯಾಗಬಲ್ಲದೆಂಬ ಭರವಸೆಯಿದೆ. ಒಂದೊಳ್ಳೆಯ ಕಾದಂಬರಿಗಾಗಿ ಗುರುರಾಜ್ ಸನಿಲ್ ಅವರಿಗೆ ಅಭಿನಂದನೆಗಳು
ಹೃತ್ಪೂರ್ವಕ ಅಭಿನಂದನೆಗಳು ಗುರುರಾಜ ಸನೀಲರೇ. ನಿಮ್ಮ ವಿವಶ ಕಾದಂಬರಿಯ ಮುನ್ನುಡಿ ಮತ್ತು ಮೊದಲ ಅಧ್ಯಾಯ ಓದಿದೆ. ತುಂಬ ಸುಂದರವಾಗಿ ಬರ್ತಾ ಇದೆ. ಮುಂದಿನ ಅಧ್ಯಾಯಗಳನ್ನು ಓದಲು ಕಾತುರದಿಂದ ಕಾಯುತ್ತಿದ್ದೇನೆ.ನಿಮಗೆ ಶುಭವಾಗಲಿ.
ReplyDelete