ವಿಶ್ವಕಪ್ ಕ್ರಿಕೆಟ್ ಇಂದು ಭಾರತಕ್ಕೆ ಅಫ್ಘಾನ್ ಮುಖಾಮುಖಿ, ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭ

ಭಾರತ ಕ್ರಿಕೆಟ್ ತಂಡ ವಿಶ್ವಕಪ್-2023 ರಲ್ಲಿ  ತನ್ನ ಎರಡನೇ ಪಂದ್ಯವನ್ನು ಇಂದು ಅಂದರೆ, ಅಕ್ಟೋಬರ್ 11ರ ಬುಧವಾರದಂದು ಅಫ್ಘಾನಿಸ್ತಾನ ವಿರುದ್ಧ  ಆಡಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಪಯಣ ಆರಂಭಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನ ನಂತರ ಟೀಂ ಇಂಡಿಯಾದ  ಮನೋಬಲ ಹೆಚ್ಚಿದ್ದು, ಸತತ ಎರಡನೇ ಗೆಲುವಿನತ್ತ ದೃಷ್ಟಿ ನೆಟ್ಟಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ  ಹಾಗೂ ಅಫ್ಘಾನಿಸ್ತಾನ ಬೌಲರ್ ನವೀನ್ ಉಲ್ ಹಕ್   ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರು ಆಟಗಾರರ ನಡುವೆ ಕಳೆದ ಐಪಿಎಲ್​ನಲ್ಲಿ ನಡೆದಿದ್ದ ಮಾತಿನ ಚಕಮಕಿ ಈ ಪಂದ್ಯದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನು ಈ ಉಭಯ ತಂಡಗಳ ಮುಖಾಮುಖಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಅಫ್ಘಾನಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ. ಭಾರತದ ವಿರುದ್ಧ ಅಫ್ಘಾನಿಸ್ತಾನ ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದರೆ ಅಫ್ಘಾನಿಸ್ತಾನ ತಂಡವನ್ನು ರೋಹಿತ್ ಪಡೆ ಕಡೆಗಣಿಸುವಂತಿಲ್ಲ. ಏಕೆಂದರೆ ಈ ತಂಡ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸುವ ಸಾಮಥ್ಯ್ರ ಹೊಂದಿದೆ. ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಇದುವರೆಗೆ ಒಟ್ಟು 3 ಏಕದಿನ ಪಂದ್ಯಗಳನ್ನು ಆಡಿದೆ. ಈ ಪೈಕಿ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದರೆ, ಒಂದು ಪಂದ್ಯ ಟೈ ಆಗಿದೆ. ಹೀಗಾಗಿ ಇದೀಗ ಟೀಂ ಇಂಡಿಯಾಗೆ ಮೂರನೇ ಗೆಲುವು ಸಿಗುತ್ತೋ ಅಥವಾ ಅಫ್ಘಾನಿಸ್ತಾನ ಗೆಲುವಿನ ಖಾತೆ ತೆರೆಯುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.

No comments

Powered by Blogger.