ಅಣ್ಣ ತಂಗಿ ಸಂಬಂಧ ತಪ್ಪಾಗಿ ಅರ್ಥೈಸಿಕೊಂಡ ಪತಿ.. ಜೋಡಿ ಕೊಲೆ, ತಂದೆ ಮಗ ಬಂಧನ


ವಿಜಯನಗರ ಜಿಲ್ಲೆಯಲ್ಲಿ ನಡೆದ ಜೋಡಿ ಕೊಲೆಯೊಂದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಅಣ್ಣ ತಂಗಿಯ ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಂಡ ಪತಿ ಮತ್ತು ಆತನ ತಂದೆ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ/ವಿಜಯನಗರ: ಅಣ್ಣ ತಂಗಿಯ ಸಂಬಂಧವನ್ನು ಪತಿ ತಪ್ಪಾಗಿ ತಿಳಿದು ಇಬ್ಬರನ್ನು ಕೊಲೆ ಮಾಡಿದ್ದಾನೆ. ಈ ಜೋಡಿ ಕೊಲೆಗೆ ಆರೋಪಿ ತಂದೆಯೂ ಸಾಥ್​ ನೀಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಕೊಲೆ ಮಾಡಿದ ಬಳಿಕ ಅಣ್ಣ ತಂಗಿ ಇಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ತಂದೆ ಮಗ ಇಬ್ಬರು ಕಥೆ ಕಟ್ಟಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಬಳಿಕ ಸತ್ಯಾಸತ್ಯತೆ ಹೊರ ಬಿದ್ದಿದೆ.

ಏನಿದು ಪ್ರಕರಣ: ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಅಕ್ಟೋಬರ್​ 8ರಂದು ಜೋಡಿ ಕೊಲೆ ನಡೆದಿತ್ತು. ಅಣ್ಣ ತಂಗಿ ಶವ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಅಣ್ಣ ತಂಗಿ ಇಬ್ಬರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಕೊಲೆ ಮಾಡಿದ್ದ ತಂದೆ ಮತ್ತು ಮಗ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಮೃತರನ್ನು ಕಾವ್ಯ (30) ಮತ್ತು ಕೊಟ್ರೇಶ್ (35) ಎಂದು ಗುರುತಿಸಲಾಗಿದೆ. ಮಗ ಬಸವರಾಜ್ ನಂದೀಶ್ ಹಾಗೂ ತಂದೆ ಜಾತಪ್ಪ ಕೊಲೆ ಮಾಡಿದ ಆರೋಪಿಗಳು.

ಜೋಡಿ ಕೊಲೆ ಬಳಿಕ ನಂದೀಶ್ ಹಾಗೂ ಜಾತಪ್ಪ ಪೊಲೀಸ್ ಠಾಣೆಗೆ ತೆರಳಿ ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿ ದೂರು ನೀಡಲು ಚಿಗಟೇರಿ ಪೋಲಿಸ್ ಠಾಣೆಗೆ ತೆರಳಿದ್ದರು. ಆದರೆ ಶವ ನೋಡಿದ ಚಿಗಟೇರಿ ಪೊಲೀಸರಿಗೆ ಸಂಶಯ ವ್ಯಕ್ತವಾಗಿದ್ದು, ಪಕ್ಕದ ಕೊಟ್ಟೂರಿನಿಂದ ಮೃತ ಕಾವ್ಯಾಳ ತಾಯಿ ಜಿ. ಬಸಮ್ಮ ಅವರಿಂದ ದೂರು ಸ್ವೀಕರಿಸಿ ತನಿಖೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ.

ಅಣ್ಣ ತಂಗಿಯ ಮಧ್ಯೆ ವಿವಾಹೇತರ ಸಂಬಂಧವಿದೆ ಎಂದು ತಿಳಿದು ನಂದೀಶ್ ಹಾಗೂ ಜಾತಪ್ಪ ಅವರಿಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇನ್ನು ಈ ಕೊಲೆ ಪ್ರಕರಣವನ್ನು 12 ಗಂಟೆಯೊಳಗೆ ಚಿಗಟೇರಿ ಪೊಲೀಸರು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಒಂಬತ್ತು ವರ್ಷದ ಹಿಂದೆ ಕೊಟ್ಟೂರಿನ ಕಾವ್ಯಾಳನ್ನ ಚಿಗಟೇರಿಯ ನಂದೀಶ್​ಗೆ ಕೊಟ್ಟು ಮದ್ವೆ ಮಾಡಲಾಗಿತ್ತು. ಆಸ್ತಿ ಇರುವ ಕಾರಣ ಕೆಲ ವ್ಯಾಜ್ಯಗಳು ನಡೆದಿದ್ದು, ಗಲಾಟೆ ಕೂಡ ಮಾಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೊಲೆ ನಡೆದ ಸ್ಥಳಕ್ಕೆ ವಿಜಯನಗರ ಎಸ್ಪಿ ಹರಿಬಾಬು ಹಾಗೂ ಹರಪನಹಳ್ಳಿ ಡಿವೈಎಸ್ಪಿ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆ ಪ್ರಕರಣದ ಮಾಹಿತಿ ನೀಡಿದ ಎಸ್​ಪಿ ಹರಿಬಾಬು, ಅಕ್ಟೋಬರ್ 08 ರಂದು ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಿಗಟೇರಿ ಗ್ರಾಮದಲ್ಲಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು, ಸಿಬ್ಬಂದಿಗೆ ಮಾಹಿತಿ ದೊರೆತ ಬಳಿಕ ತೆರಳಿ ತನಿಖೆ ನಡೆಸಿದ್ದಾರೆ. ಇನ್ನು ಆರೋಪಿ ಜಾತಪ್ಪ ಅವರ ಹೇಳಿಕೆ ಆಧಾರಿಸಿ ಪ್ರಕರಣ ದಾಖಲಿಸಿದ್ದು, ಕಾವ್ಯಾ(30) ಹಾಗೂ ಅವರ ಅಣ್ಣ ಕೊಟ್ರೇಶ್ (35) ಇಬ್ಬರ ಮೃತದೇಹಗಳು ಒಂದೇ ಮನೆಯಲ್ಲಿ ಪತ್ತೆಯಾಗಿವೆ. ಮೃತ ಕಾವ್ಯ ಶೀಲ ಶಂಕಿಸಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಜಾತಪ್ಪ ಹಾಗೂ ಬಸವರಾಜ್ ನಂದೀಶ್ ಇಬ್ಬರನ್ನು ಬಂಧಿಸಲಾಗಿದೆ. ಇದರ ಸಂಬಂಧ ಕೊಲೆ ಪ್ರಕರಣ ಚಿಗಟೇರಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ

No comments

Powered by Blogger.