ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಕಚೇರಿ ಉದ್ಘಾಟನೆ
ಸಹಕಾರ ಕ್ಷೇತ್ರದಲ್ಲಿ ಸಮಾನತೆಯ ಬದುಕು - ಡಾ| ಎಂ.ಎನ್.ಆರ್
ಶಿರ್ವ, ಅ 3: ಕರಾವಳಿಯಲ್ಲಿ ಸಹಕಾರ ಕ್ಷೇತ್ರ ಯಾವುದೇ ರಾಜಕೀಯವಿಲ್ಲದೆ ಎಲ್ಲರನ್ನೂ ಸಮಾನತೆಯಿಂದ ಬದುಕಲು ಅವಕಾಶ ಮಾಡಿ ಕೊಟ್ಟಿದೆ. ಎಲ್ಲ ರೈತರಿಗೆ ಬೇಕಾದ ಸವಲತ್ತು ಹಾಗೂ ನವೋದಯ ಸಂಘಗಳ ಸದಸ್ಯರಿಗೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆ ಕಲ್ಪಿಸಿದ ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಶನಿವಾರ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಸಭಾಂಗಣದಲ್ಲಿ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಹವಾ ನಿಯಂತ್ರಿತ ಪ್ರಧಾನ ಕಚೇರಿ, ಗೋದಾಮು, ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಗ್ರಾಹಕರ ಸೇಫ್ ಲಾಕರ್ ಕೀಯನ್ನು ಹಸ್ತಾಂತರಿಸಿದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಸಮಾಜಮುಖಿ ಸಾಧನೆ ಮಾಡಿದಾಗ ಸಿದ್ಧಿಯಾಗುತ್ತದೆ ಎಂದರು.ಗ್ರಾಹಕರಿಗೆ ನಿರಖು ಠೇವಣಿ ಪತ್ರ ವಿತರಿಸಿದ ಉಡುಪಿ ಶಾಸಕ ಯಶ್‌ಪಾಲ್' ಎ. ಸುವರ್ಣ, ದೇಶದ ಆರ್ಥಿಕತೆಗೆ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸಹಕಾರ ಸಂಘಗಳೂ ಉತ್ತಮ ಸೇವೆ ನೀಡುತ್ತಿವೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸ್ವಾವಲಂಬಿಯಾಗಲು ಶಿರ್ವ ಸಹಕಾರಿ ಸಂಘ ವ್ಯವಸ್ಥೆ ಕಲ್ಪಿಸಿದೆ ಎಂದರು.
ಸಮ್ಮಾನ
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇಗ್ನೇಶಿಯಸ್ ಡಿ'ಸೋಜಾ ಮತ್ತು ದಿನೇಶ್ ಸುವರ್ಣ ಹಾಗೂ ನಿವೃತ್ತ ಸಿಇಒ ವಿಜಯ ಸೂರಿಗ ಅವರನ್ನು ಸಮ್ಮಾನಿಸಲಾಯಿತು. ಸಿಇಒ ರವೀಂದ್ರ ಆಚಾರ್ಯ ಸಮ್ಮಾನಪತ್ರ ವಾಚಿಸಿದರು. ಕಟ್ಟಡ ಕಾಮಗಾರಿ ನಿರ್ವಹಿಸಿದ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಗೌರವಿಸಲಾಯಿತು.
ಡಾ|ಎಂ.ಎನ್. ರಾಜೇಂದ್ರ ಕುಮಾರ್ ಪುಸ್ತಕ ಹಸ್ತಾಂತರಿಸುವ ಮೂಲಕ ಹೊಸ ನವೋದಯ ಸ್ವಸಹಾಯ ಸಂಘ ಉದ್ಘಾಟಿಸಿದರು. ಮಂಗಳಾ ನವೋದಯ ಸ್ವಸಹಾಯ ಸಂಘದ ಆಶಾ ಅವರಿಗೆ ಚೈತನ್ಯ ವಿಮಾ ಚೆಕ್ ಹಸ್ತಾಂತರಿಸಿದರು.
ಉಡುಪಿ ಜಿಲ್ಲೆ ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಶಿರ್ವ ಗ್ರಾ. ಪಂ. ಅಧ್ಯಕ್ಷೆ ಸವಿತಾ ರಾಜೇಶ್, ನಬಾರ್ಡ್‌ನ ಪ್ರಬಂಧಕಿ ಸಂಗೀತ ಎಸ್. ಕರ್ತ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಮಾತನಾಡಿದರು. ಎಸ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷೆ ವಾರಿಜಾ ಪೂಜಾರ್ತಿ ಹಾಗೂ ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಒಗಳು ಉಪಸ್ಥಿತರಿದ್ದರು.
ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಿಇಒ ರವೀಂದ್ರ ಆಚಾರ್ಯ ವಂದಿಸಿದರು. ಚಿತ್ರಪಾಡಿ ಸತೀಶ್ಂದ್ರ ಶೆಟ್ಟಿ ನಿರ್ವಹಿಸಿದರು.
Box writing :
ಶಿರ್ವ ಸಂಘಕ್ಕೆ10 ಲ.ರೂ.
ಜನರ ಆರೋಗ್ಯದ ದೃಷ್ಟಿಯಿಂದ ಸಂಘದ ಗ್ರಾಹಕರು ಮತ್ತು ರೈತರಿಗಾಗಿ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸುವ ಸಂಕಲ್ಪ ಮಾಡಿರುವ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಗಾಣದ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಂಘದ ಸೇವೆ ಮತ್ತು ಸಾಧನೆ ಗುರುತಿಸಿ 10 ಲ.ರೂ ಗಳ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು.

Post a Comment