ಅರಿವು
ಅರಿವು
ಗುರುರಾಜ್ ಸನಿಲ್. ಉಡುಪಿ
ಅರ್ಥಕೆ ನಿಲುಕದ ವಿಸ್ಮಯ ಜಗತಿದು, ಮನ ಮಾಗುತಿದೆ
ಸತ್ಯ ಎಟುಕುತಿದೆ ಎಂಬಲ್ಲಿ ತಣ್ಣನೆ ಮರೆಯಾಗುವ ಅರಿವು!
ಮತ್ತೆ ಪಳೆಯುಳಿಕೆ ಕೆದಕಲು ಹೊರಟ ಜೀವನ ಚಾಳಿ
ಮರಳಿ ಎಲ್ಲವೂ ಗೋಜಲು, ಅಯೋಮಯ ಬದುಕು
ಮಾಯಾ ಪ್ರೇರಣೆಗೆ ತವಕಿಸಿ ಸ್ಖಲಿಸುವ ಪುರುಷ
ಒಡನೇ ತನ್ನತನ ಗೆಲಿಸಲು ತುಡಿವ ನಿಸರ್ಗ ಪ್ರಸವ
ನವ ಮಾಸದಿ ಜನನವಾಗುವ ಹೊಸ ಚೈತನ್ಯ
ದೃಷ್ಟಿ ದೃಷ್ಟಿಗೊಂದೊoದು ರೂಪ, ಜೀವ ಪ್ರಪಂಚ
ಮೂಳೆ ಮಾಂಸಲ ಹಂದರದಲಿ ಏಕಾಂಗಿ ಪಯಣ
ಬಗೆಬಗೆ ಬಯಕೆಗಳ ಬೆನ್ನೇರಿ ಏದುಸಿರ ಓಟ
ದಕ್ಕಿತೆಂಬಲಿ ಮರೀಚಿಕೆಯ ಹತಾಶಭಾವ
ಭ್ರಮೆಯೇ, ನಿಚ್ಚಳವೇ ಅರಿವಾಗದಷ್ಟು ಅವಿದ್ಯೆಯಲಿ
ನಾನು ನನದೆನುವುದರ ನಡುವೆಯೂ ಅಪರಿಚಿತ
ಬದುಕದರ ಲಾಭಕೆ ನಲಿಸಿತು ನುಲಿಸಿತು ಮೃದುವಾಗಿಸಿತು
ಸಾವದರ ಪರಿಧಿಯಲಿ ಮೆಲುನಕ್ಕು ಅಪ್ಪುವ ಮುನ್ನ
ನಶ್ವರದೊಳಗಿನ ಈಶ್ವರತತ್ವ ಹೃದಯ ಬೆಳಗೀತೇ?
ಗುರುರಾಜ್ ಸನಿಲ್. ಉಡುಪಿ
05-10-2023
Post a Comment