ವಿವಶ.....

(ಇಲ್ಲಿಯವರೆಗೆ......)

---------------------------------------------------------------

ಶಂಭುಶೆಟ್ಟಿ ಧಿಗ್ಗನೆದ್ದು ತರಗೆಲೆ ರಾಶಿಯೊಳಗಿದ್ದ ತಲವಾರನ್ನೆಳೆದುಕೊಂಡು ತಮ್ಮನ ಮೇಲೆ ನುಗ್ಗಿಬಿಟ್ಟ. ಅಷ್ಟರಲ್ಲಿ ಅಲ್ಲಿ ನೆರೆದಿದ್ದ, ಉಳಿದ ರಕ್ತ ಸಂಬoಧಿ ಮತ್ತವರ ಬೆಂಬಲಿಗರೊಳಗೂ ಬಿಸಿಯುಸಿರು ದಬ್ಬುತ್ತ ಕುಳಿತಿದ್ದ ದ್ವೇಷದ ಭಾವಗಳು ರಪ್ಪನೆ ತಂತಮ್ಮ ಮುಸುಕನ್ನು ಕಿತ್ತೆಸೆಯುತ್ತ, ಅವುಗಳ ಕೈಗಳಿಗೂ ವಿವಿಧ ಹತ್ಯಾರುಗಳು ರಪರಪನೇ ಸೇರಿಕೊಂಡು ಅಲ್ಲಲ್ಲೇ ಹೊರಳಾಡತೊಡಗಿದವು. ಇನ್ನೇನು ಎರಡೂ ತಂಡಗಳ ನಡುವೆ ಹೊಯಿಕೈ ನಡೆದೇ ಬಿಡುತ್ತದೆ ಹಾಗೂ ಶಂಭು ಶೆಟ್ಟಿ ತಮ್ಮನನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಿವನೂ ಎಚ್ಚೆತ್ತವನು ಬಿರುಸಾಗಿ ಬೀಸಿದ ಹಸಿ ಬಡಿಗೆಯೊಂದು ಬಂದು ಶಂಭುವಿನ ನೆತ್ತಿಗೆ ಅಪ್ಪಳಿಸಿಬಿಟ್ಟಿತು. ‘ಅಯ್ಯಯ್ಯಮ್ಮಾ... ಸತ್ತೆನಪ್ಪಾ...!’ ಎಂದು ಚೀರಿದ ಶಂಭು ನೆಲಕ್ಕುರುಳಿ ಬಿದ್ದು ರಕ್ತದ ಮಡುವಿನಲ್ಲಿ ಹೊರಳಾಡತೊಡಗಿದ. ಆ ದೃಶ್ಯವನ್ನು ಕಂಡ ಅವನ ಆಳುಗಳ ಆವೇಶವೂ ತಣ್ಣಗಾಗಿಬಿಟ್ಟಿತು. ಉಳಿದವರೆಲ್ಲ ಕಂಗಾಲಾದರು. 

---------------------------------------------------------------

ಧಾರವಾಹಿ - 3

ಡಿಗರ ಜಾಗ ಖರೀದಿಸಿದ ನಂತರ ಶ್ರೀಧರ ಶೆಟ್ಟರು ತಡಮಾಡಲಿಲ್ಲ. ಆವತ್ತೊಂದು ಶುಭದಿನವನ್ನು ಗೊತ್ತುಪಡಿಸಿ, ಕಾರ್ಕಳದಿಂದ ಕೆಲವು ಲೋಡು ಕಲ್ಲುಕಂಬಗಳನ್ನು ತರಿಸಿ ಜಮೀನಿನ ಸುತ್ತಲೂ ಊರಿಸಿ, ಮುಳ್ಳಿನ ಸರಿಗೆಯನ್ನು ಬಿಗಿಸಿ ಭದ್ರ ಬೇಲಿಯನ್ನು ನಿರ್ಮಿಸಿದರು. ಅಡಿಗರ ನೂರಾರು ವರ್ಷ ಪುರಾತನವಾದ ಚೌಕಿಯ ಮನೆಯನ್ನು ಕೆಡಹಿ, ಉದ್ದಕ್ಕುದ್ದದ ಹೊಲಗದ್ದೆಗಳನ್ನು ಶೀಘ್ರವಾಗಿ ಸಮತಟ್ಟುಗೊಳಿಸಿ ಸುಂದರವಾದ ತೋಟವನ್ನಾಗಿ ಪರಿವರ್ತಿಸಿದರು. ತಮ್ಮ ಜಮೀನಿನ ಸಮೀಪದಲ್ಲಿಯೇ ವರ್ಷವಿಡೀ ಹರಿಯುವ ಮಧುವರ್ಧಿನಿ ಹೊಳೆಯನ್ನು ಅನುಕೂಲಕ್ಕೆ ತಕ್ಕಂತೆ ಎಳೆದು ತಿರುಗಿಸಿ ತಮ್ಮ ಜಮೀನಿಗೆ ಹರಿಸುತ್ತ ಐದು ವರ್ಷದೊಳಗೆ ಅಡಿಗರ ಭೂಮಿಯನ್ನು ಹಸುರು ಹೊನ್ನು ಬೆಳೆಯುವಂಥ ಕೃಷಿಪ್ರದೇಶವನ್ನಾಗಿ ಮಾರ್ಪಡಿಸಿಬಿಟ್ಟರು. 

 ಇದೇ ಕಾಲಘಟ್ಟದಲ್ಲಿ ಶೆಟ್ಟರ ಜೀವನದಲ್ಲಿ ಮರೆಯಲಾಗದ ದುರ್ಘಟನೆಯೊಂದು ನಡೆದು ಹೋಯಿತು. ಮನೆಮಂದಿಯ ಮುದ್ದಿನ ಕಣ್ಮಣಿಯಾಗಿದ್ದ ಆರು ವರ್ಷದ ಅವರ ಹಿರಿಯ ಮಗ ಆನಂದ ಅಂದೊಮ್ಮೆ ಆಕಸ್ಮತ್ತಾಗಿ ಬಾವಿಗೆ ಬಿದ್ದು ಇಹಲೋಕ ತ್ಯಜಿಸಿದ. ಆದರೆ ಅಂಥ ನೋವಿನ ನಡುವೆಯೂ ಶೆಟ್ಟರು ಗಂಗರಬೀಡಿನ ಕೃಷಿಭೂಮಿಯ ಚಟುವಟಿಕೆಯನ್ನು ನಿಲ್ಲಿಸಲಿಲ್ಲ ಮಾತ್ರವಲ್ಲದೇ ಮಗನ ನೆನಪನ್ನೂ ಚಿರಸ್ಥಾಯಿಗೊಳಿಸಲಿಚ್ಛಿಸಿ ತಮ್ಮ ಗಂಗರಬೀಡಿನ ಜಮೀನಿಗೆ, ‘ಆನಂದ ಎಸ್ಟೇಟು’ ಎಂದು ನಾಮಕರಣ ಮಾಡಿದರು. ಮುಂದೆ ಈ ತೋಟದಿಂದ ಬರತೊಡಗಿದ ನಿವ್ವಳ ಲಾಭವು ಬೇರೆ ಬೇರೆ ಕಡೆಗಳಲ್ಲಿ ಮತ್ತಷ್ಟು ಹೊಲಗದ್ದೆ, ತೋಟ ಮತ್ತು ಖಾಲಿ ಸೈಟುಗಳನ್ನು ಕೊಂಡುಕೊಳ್ಳುತ್ತ ಶೆಟ್ಟರು ಶ್ರೀಮಂತಿಕೆಯ ತುತ್ತತುದಿಗೇರಲು ನಾಂದಿಯಾಯಿತು. ಆದರೂ ಶೆಟ್ಟರೊಳಗಿನ ಮಹತ್ವಾಕಾಂಕ್ಷೆಯೊoದು ಅವರನ್ನು ಅಷ್ಟಕ್ಕೇ ತೃಪ್ತರಾಗಲು ಬಿಡದೆ ಇನ್ನಷ್ಟು ದೊಡ್ಡ ಜಮೀನುದಾರನಾಗಬೇಕೆಂಬ ಹೆಬ್ಬಯಕೆಯನ್ನು ಪೋಷಿಸುತ್ತಿತ್ತು. ಆದ್ದರಿಂದ ಒಮ್ಮೆ ಘಟ್ಟದ ಮೇಲೂ ಪಾದ ಬೆಳೆಸಿದರು. ಚಿಕ್ಕಮಗಳೂರು ಮತ್ತು ಕೊಪ್ಪಾದಲ್ಲಿ ಕಾಫಿ ಎಸ್ಟೇಟುಗಳನ್ನು ಕೊಂಡರು. ಆರಂಭದ ದಿನಗಳಲ್ಲಿ ಹದಿನೈದು ದಿನ ತಮ್ಮೂರು ಮತ್ತುಳಿದ ದಿನ ಪರವೂರು ಎಂಬoತೆ ಅವಿರತವಾಗಿ ದುಡಿಯುತ್ತ ವ್ಯಾಪಾರ ವಹಿವಾಟುಗಳಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದರು. ಹಾಗಾಗಿ ಈಗ ಶಿವಕಂಡಿಕೆ ಪಟ್ಟಣದ ಎರಡು ಕಡೆ ಲಕ್ಷ ಲಕ್ಷ ಬೆಲೆಬಾಳುವ ಕುರುಚಲು ಹಾಡಿಗಳಿಂದ ಕೂಡಿದ ಸೈಟುಗಳು, ಪೇಟೆಯ ಹೃದಯಭಾಗದಲ್ಲಿ ಎರಡು ಬ್ರಾಂಡೆಡ್ ಸೀರೆ ಮಳಿಗೆಗಳು ಮತ್ತು ಮಲೆನಾಡಿನಲ್ಲಿ ಎರಡು ಕಾಫಿ ಎಸ್ಟೇಟುಗಳನ್ನು ಹೊಂದಿರುವ ಶೆಟ್ಟರನ್ನು ಭಾರೀ ಕುಳವೆಂದು ಹೇಳಲಾಗದಿದ್ದರೂ ಸರಿಸುಮಾರಾದ ಜಮೀನುದಾರರು ಎನ್ನಲು ಅಡ್ಡಿಯಿಲ್ಲದಂತೆ ಬೆಳೆದುಬಿಟ್ಟರು.

 ಶೆಟ್ಟರ ಎರಡನೆಯ ಮಗ ಜಯಂತ. ಹಿರಿಯ ಮಗನನ್ನು ಕಳೆದುಕೊಂಡ ನೋವಿನಿಂದ ಹುಟ್ಟಿದ ಹತಾಶೆ, ಭಯಯಿಂದ ಶೆಟ್ಟರು ಎರಡನೆಯ ಮಗನನ್ನು ಅತಿಯಾದ ಮುದ್ದು ಮತ್ತು ಸ್ವೇಚ್ಛೆಯಾಗಿ ಬೆಳೆಯಲುಬಿಟ್ಟರು. ಹಾಗಾಗಿ ಅವನು ಸಿರಿವಂತರ ಹಾಸ್ಟೇಲುಗಳಲ್ಲಿದ್ದುಕೊಂಡು ಓದಿ ಉನ್ನತ ವ್ಯಾಸಾಂಗವನ್ನೇನೋ ಗಳಿಸಿದ. ಅದರ ಜತೆಗೆ ‘ಬಡೇ ಬಾಪ್ಕಿ ಬಿಗ್ಡಿ ಹುಯಿ ಔಲಾದ್’ ಗಳು ಆಡುವಂಥ ಆಟಗಳನ್ನೂ ಬೇಕಾಬಿಟ್ಟಿ ಆಡಿಕೊಂಡು ಬೆಳೆದವನು ಈಗಲೂ ಹಾಗೆಯೇ ಇದ್ದಾನೆ. ಕುಡಿತ ಮತ್ತು ಹೆಣ್ಣಿನ ಚಟವು ಅವನಿಗೆ ಯೌವನ ಚಿಗುರುವಲ್ಲಿಂದಲೇ ಅಂಟಿಕೊoಡು ಬಂದಿದೆ. ಆದರೆ ವ್ಯವಹಾರಿಕತೆಯಲ್ಲಿ ಮಾತ್ರ ಅಪ್ಪನಂತೆ ಮಹಾ ಚತುರ. ವ್ಯಾಪಾರ, ವಹಿವಾಟುಗಳಲ್ಲಿ ಮಗನಿಗಿರುವ ಆಸಕ್ತಿಯನ್ನೂ ಅದಕ್ಕೆ ತಕ್ಕಂಥ ಬುದ್ಧಿವಂತಿಕೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತ ಬರುತ್ತಿದ್ದ ಶೆಟ್ಟರು ಮುಂದೆ ತಮ್ಮ ಜವಾಬ್ದಾರಿಯನ್ನೆಲ್ಲ ಮಗನಿಗೆ ವಹಿಸಿಕೊಟ್ಟರು. ಆದರೆ ತಮ್ಮ ಏಳಿಗೆಗೆ ಕಾರಣವಾದ ಗಂಗರಬೀಡಿನ ತೋಟವನ್ನು ಮಾತ್ರ ತಮ್ಮ ಸುರ್ಪದಿಯಲ್ಲೇ ಉಳಿಸಿಕೊಂಡರು. ಮಗನ ಇಚ್ಛೆಯಂತೆ ಈಚೆಗೆ ಆ ತೋಟದ ನಡುವೆ ಈಜು ಕೊಳದ ಸಮೇತದ ಭವ್ಯ ಬಂಗಲೆಯೊoದನ್ನು ಕಟ್ಟಿಕೊಂಡು ಪತ್ನಿ ಕಾವೇರಮ್ಮನೊಂದಿಗೆ ಪ್ರಸ್ತುತ ಸುಖವಾಗಿದ್ದಾರೆ.







ಶ್ರೀಧರ ಶೆಟ್ಟರ ಪತ್ನಿ ಕಾವೇರಮ್ಮ ಕಡು ಬಡತನದಿಂದ ಬಂದ ಶುದ್ಧ ಅಂತಃಕರಣದ ಹೆಂಗಸು. ಆದರೆ ಆಕೆಯ ದುರಾದೃಷ್ಟಕ್ಕೆ ತಾನು ಹುಟ್ಟಿ ಬೆಳೆದ ಮನೆಯ ದಟ್ಟ ದಾರಿದ್ರ್ಯದ  ಬದುಕು ಮತ್ತು ಅರೆಹೊಟ್ಟೆಯ ದೆಸೆಯಿಂದಾಗಿಯೋ ಏನೋ ಎರಡನೆಯ ಹೆರಿಗೆಯ ನಂತರ ಅವರ ಬಡಕಲು ದೇಹ ಒಂದೊoದೇ ಕಾಯಿಲೆಗಳ ಗೂಡಾಗತೊಡಗಿತ್ತು. ಆದರೂ ಅವು ಯಾವುದನ್ನೂ ಗಂಡನೊoದಿಗೆ ತೋರಿಸಿಕೊಳ್ಳದೆ ಸಾಧ್ಯವಾದಷ್ಟು ಚೈತನ್ಯದಿಂದಲೇ ಓಡಾಡಿಕೊಂಡಿದ್ದರು. ಆದರೆ ಅಂದೊಮ್ಮೆ ಎಂದೂ ವಾಸಿಯಾಗದ ತಲೆನೋವೊಂದು ಅವರನ್ನು ಹಿಡಿದುಕೊಂಡಿತೋ ಅಂದಿನಿoದ ಅವರಲ್ಲಿದ್ದ ಜೀವನೋತ್ಸಾಹವೆಲ್ಲ ಬತ್ತಿ ಹೋಯಿತು. ತಲೆನೋವಿನ ದಾಳಿಯಿಂದ ದಿನೇದಿನೇ ಕುಗ್ಗುತ್ತ ಹೋದವರು ಈಗೀಗ ಹೆಚ್ಚಿನ ಸಮಯವನ್ನು ಮಲಗಿಕೊಂಡೇ ಕಳೆಯುತ್ತಿದ್ದಾರೆ. ಶೆಟ್ಟರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ. ಆದರೂ ಅವಳ ಮುಗ್ಧತನ ಮತ್ತು ಪೆದ್ದು ಪೆದ್ದಾದ ಪ್ರೀತಿಯು ಕೆಲವೊಮ್ಮೆ ಅವರಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದ್ದುದು ಹೌದಾದರೂ ಅವಳ ಹಾಲಿನಂಥ ಮನಸ್ಥಿತಿಯ ಬಗ್ಗೆ ಅವರಲ್ಲಿ ವಿಶೇಷ ಗೌರವವಿದೆ. ತಮ್ಮ ಅಂದಿನ ಕಷ್ಟಕಾಲದಲ್ಲಿ ಜೊತೆಗಿದ್ದು ಅನೇಕ ಏಳುಬೀಳುಗಳನ್ನು ಮೌನವಾಗಿ ಎದುರಿಸುತ್ತ, ಆತ್ಮಸ್ಥೈರ್ಯವನ್ನು ತುಂಬುತ್ತಿದ್ದ ಏಕೈಕ ಜೀವವೆಂದರೆ ಅದು ತಮ್ಮ ಪತ್ನಿ! ಎಂಬ ಅಭಿಮಾನ ಶೆಟ್ಟರೊಳಗೆ ಸದಾ ಜಾಗ್ರತವಾಗಿದೆ. ಹಾಗಾಗಿಯೇ ಅವರು ಹೆಂಡತಿಯ ಶುಶ್ರೂಷೆಗಾಗಿ ಕೈಗೊಂದು ಕಾಲಿಗೊಂದು ಆಳುಕಾಳುಗಳನ್ನು ನೇಮಿಸಿದ್ದರೊಂದಿಗೆ ಅವಳಿಗಾಗಿ ಏನೆಲ್ಲ ಮಾಡಬೇಕೋ ಅವೆಲ್ಲವನ್ನೂ ಚಾಚೂತಪ್ಪದೆ ನೆರವೇರಿಸುತ್ತಿದ್ದಾರೆ. 

ತಾವು ಇಷ್ಟುಪಟ್ಟು ಖರೀದಿಸಿ ಕಷ್ಟಪಟ್ಟು ವೃದ್ಧಿಸಿದ ಗಂಗರಬೀಡಿನ ತೋಟವು ಶೆಟ್ಟರ ಪಾಲಿಗೆ ಅಮೂಲ್ಯ ರತ್ನವೆಂಬಷ್ಟು ಮಹತ್ವದ್ದು! ಹಾಗಾಗಿ ವರ್ಷದ ಸರ್ವ ಋತುವಿನಲ್ಲೂ ಅದು ಸಮೃದ್ಧಿಯಿಂದ ನಳನಳಿಸುತ್ತದೆ. ಈ ತೋಟದ ಮುಖ್ಯ ಬೆಳೆ ತೆಂಗು ಮತ್ತು ಕಂಗು. ಉಳಿದಂತೆ ಜಾಯಿಕಾಯಿ, ಲವಂಗ, ಕೊಕಾ, ಕಾಳುಮೆಣಸು, ಬಾಳೆ, ಹಲಸು, ಮಾವು ಮತ್ತು ಪುನರ್‌ಪುಳಿಯ ಮರಗಳು ಯಥೇಚ್ಛ ಇಳುವರಿ ನೀಡುತ್ತಿದ್ದವು. ಆ ತೋಟದ ಕೆಲಸಕ್ಕಾಗಿ ಶೆಟ್ಟರು ಕಾಯಂ ಕೆಲಸಗಾರರಿಗೆ ತಮ್ಮ ತೋಟದ ಈ ಕೊನೆಯಲ್ಲೆರಡು ಮತ್ತು ಆ ಕೊನೆಯಲ್ಲೆರಡು ಮನೆ ಎಂದು ಕರೆಯಲಾಗುವ ‘ಶೆಡ್ಡು’ ಗಳನ್ನು ಕಟ್ಟಿಸಿ ಉಚಿತವಾಗಿ ನೀಡಿದ್ದಾರೆ. ಆ ಮೂಲಕ ಶೆಡ್ಡುವಾಸಿಗಳಾಗಿ ಬರುವ ಕುಟುಂಬಗಳ ಗಂಡ, ಹೆಂಡತಿ ಮತ್ತವರ ಮಕ್ಕಳನ್ನು ಒಂದಿಲ್ಲೊoದು ರೀತಿಯಲ್ಲಿ ದುಡಿಸಿಕೊಳ್ಳುತ್ತ, ‘ಸರ್ವರಿಗೂ ಕಾಯಕವೇ ಕೈಲಾಸ!’ ಎಂಬ ನಾಣ್ಣುಡಿಗೆ ಸದಾ ಅರ್ಥ ನೀಡಲು ಶ್ರಮಿಸುತ್ತಾರೆ. ಜೀತದಾಳುಗಳಿಗೆ ಸಂಬಳವೆoದು ತಾವೇ ನಿರ್ಧರಿಸಿದ ಒಂದಿಷ್ಟು ರೂಪಾಯಿಗಳನ್ನು ಕೊಡುತ್ತ ಒಂದು ಮಟ್ಟಕ್ಕೆ ಅವರನ್ನೆಲ್ಲ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ ಎಂಬ ಸಂತೃಪ್ತಿಯೂ ಅವರಿಗಿದೆ. ಈ ಶೆಡ್ಡು ಎನ್ನುವುದು ಹೇಗಿರುತ್ತದೆ ಎಂಬುದರ ಬಗ್ಗೆ ಒಂದಿಷ್ಟು ವಿವರಿಸಬೇಕು. 

 ಅಡಿಗರ ಮನೆಯನ್ನು ಒಡೆದು ದೊರೆತ ಹಳೆಯ ಬಾಂಡುಗಲ್ಲುಗಳನ್ನು ಬಳಸಿ ಶೆಡ್ಡುಗಳನ್ನು ನಿರ್ಮಿಸಿದ್ದಾರೆ. ಸುಮಾರು ಎಂಟು ಅಡಿ ಅಗಲ ಮತ್ತು ಹನ್ನೆರಡು ಅಡಿ ಉದ್ದದ ಚಚ್ಚೌಕಾಕಾರದಲ್ಲಿ ಕಟ್ಟಿಸಿದ ತಾಂಟು ಮೋಂಟು (ಓರೆಕೋರೆ) ಗೋಡೆಗಳ ಈ ಮನೆಗಳನ್ನು ಬಿಸಿಲು ಮಳೆ ಗಾಳಿಯಿಂದ ರಕ್ಷಿಸಲು ಅವುಗಳ ನೆತ್ತಿಗೆ ಸಿಮೆಂಟು ಶೀಟಗಳನ್ನು ಹೊದಿಸಲಾಗಿದೆ. ಆ ಶೀಟುಗಳು ಕೂಡಾ ಹಿಂದೆ ಶೆಟ್ಟರ ಮೋರಿಸ್ ಕಾರು ನಿಲುಗಡೆಯ ಸೂರಿಗೆ ಬಳಸಿ ಹಳೆಯದಾದವುಗಳು. ಪ್ರತಿ ಶೆಡ್ಡಿನ ಒಳಗೊಂದು ಅಡ್ಡಗೋಡೆಯಿದೆ. ಅದರ ಒಂದು ಪಾರ್ಶ್ವವನ್ನು ವರಾಂಡವೆನ್ನಬಹುದು ಅಥವಾ ಮಲಗುವ ಕೋಣೆ ಅಂತಲೂ ಕರೆಯಬಹುದು. ಇನ್ನೊಂದು ಪಾರ್ಶ್ವದ ಒಳಕೋಣೆಯ ಒಂದು ಭಾಗವನ್ನು ಸಣ್ಣದಾದ ಅಡುಗೆ ಕೋಣೆ ಎಂದು ಭಾವಿಸುವುದು ಅನಿವಾರ್ಯವಾದರೆ ಅದರ ಇನ್ನೊಂದು ಭಾಗವು ನೆಲದಿಂದ ಸುಮಾರು ಒಂದು ಅಡಿ ಎತ್ತರವಿದ್ದು ಅದೇ ಸಂಡಾಸು ಅಥವಾ ಬಚ್ಚಲುಕೋಣೆಯಾಗಿದೆ. ಅಡುಗೆ ಕೋಣೆಗೂ, ಬಚ್ಚಲಿಗೂ ನಡುವೆ ಬಾಡಿಗೆದಾರರಿಗೆ ಬೇಕೆನಿಸಿದರೆ ಅಡ್ಡ ದಾರವನ್ನು ಕಟ್ಟಿ ಹಳೆಯ ಸೀರೆಯನ್ನೋ ಅಥವಾ ಗೋಣಿಚೀಲವನ್ನೋ ನೇತುಬಿಟ್ಟು ತಮ್ಮ ನಿತ್ಯಕರ್ಮಗಳನ್ನು ಮರೆಮಾಚಿ ಪೂರೈಸಬಹುದು. ‘ಅಯ್ಯೋ, ಅದೆಲ್ಲ ಯಾಕೆ ಸುಮ್ಮನೆ! ನಾವೇ ಇರುವುದಲ್ಲವಾ, ಯಾರು ನೋಡುತ್ತಾರೆ?’ ಎಂದು ಯೋಚಿಸುವವರು ಇತ್ತ ಅಡುಗೆ ಮಾಡುತ್ತಿದ್ದಂತೆ ಅತ್ತ ಮನೆಮಂದಿ ಯಾರಾದರೂ ಶೌಚ ಮಾಡಲೂ ಅಡ್ಡಿಯಿಲ್ಲ. 


 ಯಾವುದೋ ಕಾಲದಲ್ಲಿ ಶಿವಕಂಡಿಕೆಗೆ ವಲಸೆ ಬಂದಿದ್ದ ತಮಿಳು ತಂಬಿಗಳು ಸಿಮೆಂಟ್ ಮತ್ತು ಜಲ್ಲಿಯ ಪುಡಿ ಬಳಸಿ ತಯಾರಿಸುತ್ತಿದ್ದ ರೆಡಿಮೇಡ್ ದಾರಂದಗಳು ಹಾಗೂ ಸಂಸ್ಕ್ರುತ ಅಕ್ಷರದ ‘ಓಂ’ ಅನ್ನು ತಿರುಗುಮುರುಗು ಮಾಡಿ ಅಚ್ಚು ಹೊಯ್ದ ದುಂಡಗಿನ ಕಿಂಡಿಗಳನ್ನು ಈ ಶೆಡ್ಡುಗಳ ಅಡುಗೆ ಕೋಣೆಗೊಂದು ವರಾಂಡಕ್ಕೊoದು ಅಳವಡಿಸಲಾಗಿದ್ದು, ಅವು ದಶಕಗಳಿಂದಲೂ ಶೆಡ್ಡಿನ ಹಿಂಬದಿಯ ತೋಟದ ತಂಪುಗಾಳಿಯನ್ನೂ ಎದುರಿನ ಗುಡ್ಡೆಯ ಬಿಸಿಗಾಳಿಯನ್ನೂ ತಮಗೆ ಸಾಮರ್ಥ್ಯವಿದ್ದಷ್ಟನ್ನು ಎಲ್ಲಾ ಶೆಡ್ಡುಗಳಿಗೂ ಪ್ರಾಮಾಣಿಕವಾಗಿ ಸರಬರಾಜು ಮಾಡುತ್ತ ಅಲ್ಲಿ ವಾಸವಿರುವ ಕುಟುಂಬಗಳ ಆರೋಗ್ಯ ಕಾಪಾಡಿಕೊಳ್ಳುತ್ತ ಬಂದಿವೆ. ಶೆಟ್ಟರ ಬಂಗಲೆ ಕಟ್ಟುವ ಸಂದರ್ಭದಲ್ಲೇ ಈ ಶೆಡ್ಡುಗಳೂ ನಿರ್ಮಾಣಗೊಂಡoಥವು. ಆದ್ದರಿಂದ ಆ ಕಟ್ಟಡದಿಂದ ಅಳಿದುಳಿದ ಒಂದಿಷ್ಟು ಸುಣ್ಣಬಣ್ಣವನ್ನೂ ಈ ಶೆಡ್ಡುಗಳಿಗೆ ಬಳಿದಿದ್ದುದನ್ನು ಬಿಟ್ಟರೆ ಆ ಬಳಿಕ ಬಾಡಿಗೆದಾರರಾಗಲೀ ಅಥವಾ ಶೆಟ್ಟರೇ ಆಗಲಿ ಆ ಕುರಿತು ತಲೆಕೆಡಿಸಿಕೊಂಡದ್ದಿಲ್ಲ.

 ಇಂಥ ಶೆಡ್ಡುಗಳಿಗೆ ಬಾಗಿಲು ಹೇಗಪ್ಪಾ ಅಂದರೆ ಡಾಂಬರು ಡಬ್ಬಗಳನ್ನು ಸೀಳಿ ಚೌಕಾಕಾರದಲ್ಲಿ ಕತ್ತರಿಸಿದ ತುಂಡನ್ನು ಶೆಡ್ಡಿನ ದಾರಂದದ ಒಂದು ಕಂಬಕ್ಕೆ ಕಬ್ಬಿಣದ ಸರಿಗೆಯಿಂದ ಬಿಗಿಯಲಾಗಿದ್ದರೆ ಅದರ ಇನ್ನೊಂದು ಕಂಬಕ್ಕೆ ಆ ಬಾಗಿಲನ್ನು ಹಗ್ಗದಿಂದಲೋ ಅಥವಾ ದಪ್ಪ ಸರಿಗೆಯಿಂದಲೋ ಕಟ್ಟಿ ಬಿಗಿದರೆ ಮುಗಿಯಿತು. ದನ, ನಾಯಿ ಮತ್ತು ಕೋಳಿಗಳಿಗೆ ಒಳಗೆ ನುಗ್ಗಲು ಹರಸಾಹಸ ಪಡಬೇಕೆಂಬಷ್ಟು ಭದ್ರವಾದ ಬಾಗಿಲುಗಳವು. ಈ ನಾಲ್ಕು ಬಾಡಿಗೆ ಕೋಣೆಗಳು ಶೆಟ್ಟರಿಗೆ ಎರಡು ರೀತಿಯಿಂದ ಲಾಭ ತರುತ್ತವೆ. ಒಂದು, ತೋಟದ ನಾಲ್ಕು ಸುತ್ತಲೂ ನಿರ್ಜನ ಪ್ರದೇಶವಾಗಿರುವುದರಿಂದ ಶೆಟ್ಟರ ಕೋಟೆ ಕಾಯುವ ಕಾವಲುಗಾರರ ಚೌಕಿಗಳಂತೆ ಈ ಶೆಡ್ಡುಗಳು ಕೆಲಸ ಮಾಡುತ್ತವೆ. ಇನ್ನೊಂದೆಡೆ ತೋಟಕ್ಕೆ ಬೇಕಾದ ಆಳುಗಳನ್ನೂ ಶಾಶ್ವತವಾಗಿ ಉಳಿಸಿಕೊಂಡoತಾಗುತ್ತದೆ ಮತ್ತು ಪದೇಪದೇ ಕೆಲಸಗಾರರನ್ನು ಹುಡುಕಿ ತರುವ ತಾಪತ್ರಯವೂ ತಪ್ಪುತ್ತದೆ ಎಂಬುದು ಶೆಟ್ಟರ ದೂರಾಲೋಚನೆ. ಆದ್ದರಿಂದ ಈ ಶೆಡ್ಡುಗಳಲ್ಲಿ ಈಗ ಪ್ರಸ್ತುತ ಮೂರು ಕುಟುಂಬಗಳು ವಾಸಕ್ಕಿವೆ.

(ಮುಂದುವರೆಯುವುದು)

No comments

Powered by Blogger.