ಹದಿಮೂರು ಆಪರೇಶನ್
ಗುರುರಾಜ್ ಸನಿಲ್, ಉಡುಪಿ
ಈಗೀಗ ನದಿ, ಹೊಳೆಗಳ ಆಸುಪಾಸಿನಲ್ಲೂ ಸೊಗಸಾದ ಕಥೆಗಳು ಹರಿಯುತ್ತವೆ. ಘನ ಸರಕಾರವು ಊರೂರು, ಗ್ರಾಮ, ಗ್ರಾಮಗಳ ಓಣಿ, ಬೀದಿಗಳನ್ನೆಲ್ಲ ಹುಡುಕ್ಹುಡುಕಿ ಡಾಂಬಾರು, ಕಾಂಕ್ರೀಟೀಕರಣಗೊಳಿಸುತ್ತಿದೆ. ಸುಗಮ ರಸ್ತೆಗಳು ಜನಜೀವನವನ್ನು ಸಮೀಕರಿಸುತ್ತ, ವಿವಿಧ ಆವಶ್ಯಕತೆಗಳಿಗೆ ಸಹಾಯಸೇತುವಾಗಬಹುದು. ಅಂಥ ದೃಷ್ಟಿಯಿಂದ ಅದು ಒಳ್ಳೆಯ ವಿಚಾರವಿರಬಹುದು. ಆದರೆ ಹಸಿರು ಪರಿಸರವನ್ನು ನಗರೀಕರಣಿಸುವಾಗ ಆಗುವ ಅಡ್ಡ ಪರಿಣಾಮದ ಬಗೆಗೆ ವಿವರಿಸುವಂತಿಲ್ಲ. ಹಾಗಾಗಿ ಅಂಥ ಚರ್ಚೆ ಇಲ್ಲಿ ಅಪ್ರಸ್ತುತ. ಈಗ ಇಲ್ಲೊಂದು ವಿಶಾಲ ನದಿ ಹರಿಯುತ್ತಿದೆ. ಆಗಾಗ ಈ ಹೊಳೆಯ ದಂಡೆಗೆ ಬಂದು ಸುತ್ತಾಡುತ್ತೇನೆ. ತುಸು ದೂರದಲ್ಲೊಂದು ಸಣ್ಣ ತೋಪಿದೆ. ಅದರ ಹಿಂದೆ ಕೆಲವು ಮನೆಗಳು. ಆ ಹಾಡಿಯೊಳಗೆ ನದಿಗೆ ಅಭಿಮುಖವಾಗಿ ಬೆಳ್ಳಗಿನ ಪ್ಲಾಸ್ಟಿಕ್ ಕುರ್ಚಿಯೊಂದು ಯಾವಾಗಲು ಇರುತ್ತದೆ. ಸಂಜೆಯ ಹೊತ್ತು ಅದರಲ್ಲೊಬ್ಬ ಹಿರಿಯ ಕುಕ್ಕರಗಾಲಿನಲ್ಲಿ ಕುಳಿತಿರುತ್ತಾರೆ. ಅದು ಬಹಳ ಪ್ರಶಾಂತವಾದ ನಿರ್ಜನ ಪ್ರದೇಶ. ಜೀವನ ಜಂಜಾಟದಲ್ಲಿ ಗೆದ್ದು, ಸೋತು, ಬಳಲಿ ಅಥವಾ ಸುಮ್ಮನೆ ಬರುವವರಿಗೂ ಇದೊಂದು ವಿಶೇಷ ಶಾಂತಿ, ಸಾಂತ್ವನ ಕರುಣಿಸುವ ಪರಿಸರ. ಬಿಳಿ ಕುರ್ಚಿಯ ಹಿರಿಯರಿಗೂ ಅದರ ಆವಶ್ಯಕತೆ ಇದ್ದಿರಬಹುದು.
ಅವರ ಶಾಂತಿಗೆ ಭಂಗತರದೆ ದೂರದಿಂದಲೇ ಸಂಚರಿಸುತ್ತಿದ್ದೆ. ಬಹುಶಃ ಅವರೂ ತೋಪಿನ ಹಿಂಬದಿಯ ತಮ್ಮ ಮನೆಯೊಳಗೆ ಕುಳಿತು ಆಗಾಗ ನನ್ನನ್ನು ಗಮನಿಸುತ್ತಿದ್ದಿರಬಹುದು. ಮುಂಜಾನೆ, ಮಟಮಟ ಮಧ್ಯಾಹ್ನ, ಅಪರಾಹ್ನ ಅಥವಾ ಮಬ್ಬು ಸಂಜೆಯ ಹೊತ್ತಲ್ಲೂ ಅಲ್ಲಿಗೆ ಹೋಗುತ್ತಿದ್ದೆ. ‘ಯಾರಿವನು? ಹೊತ್ತಲ್ಲದ ಹೊತ್ತಲಿ ಇವನದೆಂಥದು ವಾಕಿಂಗ್? ಅಷ್ಟಕ್ಕೂ ಇವನು ಇಲ್ಲಿನವನಲ್ಲವಲ್ಲ! ಯಾರಿರಬಹುದು, ಕೆಲಸವಿಲ್ಲದ ಸೋಮಾರಿಯೇ, ಪತ್ತೆದಾರಿಯೇ ಅಥವಾ ಗೊತ್ತುಗುರಿಯಿಲ್ಲದ ಅಬ್ಬೇಪಾರಿಯೇ? ಎಂದೆಲ್ಲ ಸ್ಥಳೀಯರು ಯೋಚಿಸುವಂತೆ ನನ್ನ ಓಡಾಟವಿರಬಹುದು. ಅಂಥ ಅಪರಿಚಿತ ಪ್ರದೇಶಗಳಿಗೆ ಹೋಗಿ ಸ್ವಚ್ಛಂದವಾಗಿ ಓಡಾಡುವುದರಿಂದ ಅಲ್ಲಿನವರಿಗೆ ಕಿರಿಕಿರಿಯಾಗಬಹುದೇನೋ ಎಂಬ ಚಿಂತೆ ಕಾಡುತ್ತದೆ. ಆದರೆ ಪ್ರಕೃತಿ ರಮ್ಯತೆ ಮನಸ್ಸನ್ನು ಕಟ್ಟಿಹಾಕುತ್ತದೆ. ಈ ಹಿರಿಯರಿಗೂ ನನ್ನ ಬಗ್ಗೆ ಹಾಗೆಯೇ ಅನ್ನಿಸಿರಬಹುದು.
ಹಾಗಾಗಿ ಇಂದು ನಾನು ವಾಹನದಿಂದಿಳಿದು ನಡಿಗೆಯಾರಂಭಿಸುತ್ತಲೇ ಎದ್ದು ಬಂದರು. ನನಗೂ ಅವರ ಬಗ್ಗೆ ಕುತೂಹಲವಿತ್ತು. ಅವರು ಚೌಕಳಿ ಲುಂಗಿಯನ್ನು ಅರ್ಧ ಮಡಚಿ ಸೊಂಟಕ್ಕೆ ಸುತ್ತಿಕೊಂಡಿದ್ದರು. ಎಣ್ಣೆಕಂದಿನ ಬೋಳು ಮೈಯ ನೀಳ ಕೊರಳಲ್ಲಿ ತಿಳಿನೀಲಿ ಮಣಿಗಳ ಉದ್ದನೆಯ ಸರವಿತ್ತು. ಅದರ ತುದಿಯಲ್ಲಿ ಏಸುವಿನ ಶಿಲುಬೆ ನೇತಾಡುತ್ತಿತ್ತು. ದೇಹದ ಚರ್ಮ ವಯಸ್ಸಿಗೆ ತಕ್ಕಂತೆ ಸುಕ್ಕುಗಟ್ಟಿತ್ತು. ಮುಖದಲ್ಲಿ ಚೈತನ್ಯದ ಕಳೆ, ಸಹಜ ನಗುವಿತ್ತು. ಜೀವನವಿಡೀ ಮಣ್ಣಿನೊಡನೆ ಒಡನಾಡಿದ ಕುರುಹು ದೇಹದಲ್ಲೆದ್ದು ಕಾಣುತ್ತಿತ್ತು. ಅವರ ನಗುವಿಗೆ ಮುಗುಳು ನಕ್ಕೆ. ‘ಯಾರು ನೀವು? ಎಲ್ಲಿಯವರು?’ ಎಂದರು.
ಹೆಸರು, ಊರು ತಿಳಿಸಿದೆ. ‘ನೀವಿಲ್ಲಿ ಯಾವಾಗಲೂ ಓಡಾಡುವುದನ್ನು ನೋಡುತ್ತೇನೆ.’ ಎಂದರು. ಹೌದಾ ಎಲ್ಲಿಂದ ನೋಡುತ್ತೀರಿ? ‘ಓ ಅಲ್ಲಿ ಕಾಣುತ್ತಿದೆಯಲ್ಲ, ನನ್ನ ಮನೆ. ಅಲ್ಲಿಂದ’ ಎಂದರು. ನನ್ನೆಣಿಕೆ ಸರಿಯಾಗಿತ್ತು. ‘ಏನು ಉದ್ಯೋಗ ನಿಮ್ಮದು?’ ಎಂದರು ಕುತೂಹಲದಿಂದ. ಹೇಳಿಕೊಳ್ಳುವಂಥ ಉದ್ಯೋಗವಿಲ್ಲ ಹಿರಿಯರೇ. ನಾನೊಂಥರ ಸ್ವತಂತ್ರಜೀವಿ. ‘ಹಾಗಾದರೆ ಆಸ್ತಿಪಾಸ್ತಿ ಇರಬೇಕಲ್ಲ?’ ಅಂದರು. ಹ್ಞೂಂ ಇದೆ. ಸಾವಿರ ಸ್ಕ್ವೇರ್ ಫೀಟ್‌ನ ಸಣ್ಣದೊಂದು ಮನೆ. ಪ್ರೀತಿ, ಮುನಿಸು ಮಿಶ್ರಿತ ಸಂಸಾರ. ಹದ್ದು ಮೀರದನೆ ಸರಳವಾಗಿ ಸಾಗಬಹುದಾದ ಜೀವನಕ್ಕೆ ಸಣ್ಣ ಸಂಪಾದನೆ. ಎಲ್ಲಕ್ಕಿಂತ ಮಿಗಿಲಾಗಿ ನಾನು ಇಷ್ಟಪಟ್ಟು ಪ್ರೀತಿಸುವ ದೇವರೆಂಬ ದೊಡ್ಡ ಆಸ್ತಿಯಿದೆ! ಎಂದೆ. ‘ಹೌದಾ ಯಾವ ದೇವರು ನಿಮ್ಮದು?’ ಎಂದರು ಅಚ್ಚರಿಯಿಂದ. ಸರ್ವಾಂತರ್ಯಾಮಿ ಎಂದೆ. ‘ಓಹೋ ಹೌದಾ... ಅದೆಂಥ ದೇವರು?’ ನಿಮ್ಮ ಪರಮಪ್ರಭು ಏಸುವಿನ ಹಾಗೆಯೇ! ಎಂದೆ. ‘ಓಹೋ ಒಳ್ಳೆಯದು. ಆದರೂ ಆಸ್ತಿಪಾಸ್ತಿ ಇಲ್ಲದ ಮೇಲೆ ಯಾವ ಧೈರ್ಯದಿಂದ ಹೀಗೆಲ್ಲ ಸುತ್ತಾಡುತ್ತೀರಿ?’ ಎಂದರು ನಗುತ್ತ.
ದೇವರಿಗೆ ಶರಣಾದರೆ ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಾನೆ ಹಿರಿಯರೇ ಎಂದೆ. ‘ಯಾವ ದೇವರಿಗೆ ಶರಣಾದರೂ ಕೆಲಸ ಮಾಡದಿದ್ದರೆ ಜೀವನ ಸಾಗುತ್ತದೆಯೇ?’ ಎಂದರು. ಶರಣಾಗತಿ ಅಂದರೆ ಕರ್ತವ್ಯದಿಂದ ಪಲಾಯನ ಅಲ್ಲ. ನಿಜವಾಗಿ ಶರಣಾದರೆ ನಮ್ಮೆಲ್ಲ ಕೆಲಸಕಾರ್ಯಗಳೂ, ಇಡೀ ಜಗತ್ತೂ ತಮ್ಮಷ್ಟಕ್ಕೆ ತಾವೇ ವ್ಯವಸ್ಥಿತವಾಗಿ ನಡೆಯುವುದನ್ನು ತಿಳಿಯಬಹುದು ಎಂದೆ. ‘ಅದು ಹೇಗೆ?’ ಎಂದರು ಒರಟಾಗಿ. ನೀವು ನಡೆಯುವಾಗ ಹೆಜ್ಜೆಗಳು ನಿಮ್ಮ ಸಹಾಯವಿಲ್ಲದೆ ಎಷ್ಟು ನಿರಾಯಾಸವಾಗಿ ಸಾಗುತ್ತವೆಯೋ ಹಾಗೆ. ನಾನು ನನ್ನದು ಎಂದರೆ ಬರುವ ಸುಖದುಃಖಗಳ ಭೋಗಿಗಳು ನಾವೇ. ನೀನು ನಿನ್ನದು! ಎಂದರೆ ಎಲ್ಲವೂ ಅವನದೇ. ಆ ಶಕ್ತಿಯ ಅನುಗ್ರಹದಿಂದಲೇ ನಿರ್ಭೀತಿ ಇರುವುದು ಎಂದೆ. ನನ್ನನ್ನು ಮಿಕಮಿಕಾ ನೋಡಿದರು. ನಗು ಬಂತು. ಸ್ವಚ್ಛಂದವಾಗಿ, ನಿಶ್ಚಿಂತೆಯಿoದಿರಲು ಆಸ್ತಿ ಅಂತಸ್ತಿನ ಅಗತ್ಯವಿಲ್ಲ ಹಿರಿಯರೇ. ನೈಜ ಶಾಂತಿ ಇರುವುದು ಯೋಚನೆಗಳೂ, ಜವಾಬ್ದಾರಿಗಳೂ ಇಲ್ಲವಾದಾಗ ಅಥವಾ ಇರುವುದೆಲ್ಲದರ ಸಂಬoಧವನ್ನು ಒಳಗಿನಿಂದ ಕಳಚಿಕೊಂಡಾಗ ಎಂದೆ.
ಅವರಿಗದು ಅರ್ಥವಾಗಲಿಲ್ಲ. ‘ಏನೋಪ್ಪಾ!’ ಎನ್ನುತ್ತ ಜೊತೆಗೆ ಹೆಜ್ಜೆ ಹಾಕಿದರು. ನಿಮ್ಮ ವಯಸೆಷ್ಟು? ಎಂದೆ. ‘ಎಂಬತ್ತನಾಲ್ಕು’ ಎಂದರು. ಚಕಿತನಾದೆ. ಎಪ್ಪತ್ತರಂತೆ ಕಾಣುತ್ತಿದ್ದರು. ಹಾಗಾದರೆ ನಿವೃತ್ತರು. ಹಿಂದೆ ಏನು ಉದ್ಯೋಗದಲ್ಲಿದ್ದಿರೀ? ಎಂದೆ. ‘ಹೌದು ಈಗ ನಿವೃತ್ತಿ. ದುಡಿಯಲು ಕೂಡುವುದಿಲ್ಲ. ಹದಿಮೂರು ಆಪರೇಶನ್ ಆಗಿದೆ. ಕೃಷಿ ಮಾಡುತ್ತಿದ್ದೆ. ಇಲ್ಲೆಲ್ಲ ಸುತ್ತಮುತ್ತ ತೋಟ, ಹೊಲಗದ್ದೆಗಳಿವೆಯಲ್ಲ ಅವೆಲ್ಲ ಕೆಲವು ವರ್ಷಗಳ ಹಿಂದೆ ನನ್ನವೇ! ಕಾಯಿಲೆ ಬೀಳತೊಡಗಿದ ನಂತರ ದುಡಿತ ಬಿಟ್ಟೆ. ಮಕ್ಕಳೆಲ್ಲ ಊರು, ಪಾರಿನ್‌ನಲ್ಲಿದ್ದಾರೆ. ಬೆಳೆವ ಭೂಮಿಯನ್ನು ಪಾಳು ಬಿಡಲಿಕ್ಕಾಗದೆ ಒಕ್ಕಲಿನವರಿಗೆ ಕೆಲವು ಗದ್ದೆಗಳನ್ನೂ ಅವರಿದ್ದ ಮನೆಯ ಜಾಗವನ್ನೂ ಬಿಟ್ಟುಕೊಟ್ಟೆ. ಓ ಅಲ್ಲಿ ಕಾಣುತ್ತಿದೆಯಲ್ಲ ದೊಡ್ಡ ನಾಗಬನ, ಅದರ ಜಾಗವೂ ನನ್ನದೇ. ಬಹಳ ಹಿಂದಿನಿoದಲೂ ಅದಿತ್ತು. ಎರಡು ವರ್ಷಗಳ ಹಿಂದೆ ಅದನ್ನು ಹುಡುಕಿಕೊಂಡು ಕೆಲವು ಕೊಂಕಟಿಗರು ಬಂದಿದ್ದರು. ಅವರ ಮೂಲ ನಾಗಬನವಂತೆ ಅದು. ಆ ಜಾಗವನ್ನೂ ಅವರಿಗೆ ಬಿಟ್ಟುಕೊಟ್ಟೆ ಎಂದರು. ನಿಸ್ವಾರ್ಥ ಜೀವಿ ಎಂದೆನ್ನಿಸಿತು.
ಹದಿಮೂರು ಆಪರೇಷನ್ ಏಕಾಯಿತು? ಎಂದೆ. ‘ಯಾಕೇಂತ ಹೇಳುವುದು? ಮೂರು ಬಾರಿ ಹಾರ್ಟ್ ಆಪರೇಶನ್ ಆಯಿತು. ಒಂದು ಬಾರಿ ಲಕ್ವಾ ಹೊಡೆಯಿತು. ಔಷಧಿ ಮತ್ತು ಸ್ವಪ್ರಯತ್ನದಿಂದ ಎದ್ದು ನಡೆದಾಡಿದೆ. ನಂತರ ಎರಡು ಬಾರಿ ಲಿವರ್ ಆಪರೇಶನ್ ಆಯಿತು. ಬಳಿಕ ಕಿಡ್ನಿ, ಕರುಳು, ಕಾಲಗಂಟು ಹೀಗೆ ಒಟ್ಟು ಅಷ್ಟಾಯಿತು!’ ಎಂದು ಹಲವು ಬಾರಿ ಕುಯ್ದ ದೇಹದ ಭಾಗಗಳನ್ನು ತೋರಿಸುತ್ತ ಯಾವುದೇ ವೇದನೆ, ಅಹಂ ಇಲ್ಲದೆ ಮುಗ್ಧವಾಗಿ ಹೇಳಿದರು. ಸಾರಾಯಿ ಕುಡಿಯುತ್ತೀರಿ ಅಂತ ಕಾಣುತ್ತೆ? ಎಂದೆ. ‘ಹೌದು. ಕುಡಿಯುತ್ತಿದ್ದೆ. ಈಗ ಎರಡು ವರ್ಷಗಳಿಂದ ಇಲ್ಲ. ಹಿಂದೆ ಬಾಲ್ಯದಿಂದಲೇ ಕುಡಿಯುತ್ತಿದ್ದೆ. ಅಪ್ಪ ಅಮ್ಮ ಶರಾಬು ಬೇಯಿಸುತ್ತಿದ್ದರು. ಬೆಳೆದ ಮೇಲೆ ಮನೆ ಖರ್ಚಿಗಾಗುವಷ್ಟನ್ನು ನಾನೇ ತಯಾರಿಸುತ್ತಿದ್ದೆ. ಅದು ಅಂತಿoಥ ಸಾರಾಯಿ ಅಲ್ಲ. ಉತ್ತಮ ಮಟ್ಟದ್ದು. ಹಾಗಾಗಿ ಬೇಗನೆ ಆರೋಗ್ಯ ಕೆಡಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಲಿವರ್, ಕರುಳು ತೂತು ಬಿದ್ದಿದೆ ಅಂತ ಡಾಕ್ಟರ್ ಹೇಳಿದರು. ಆಪರೇಶನ್ ಮಾಡಿಸಿಕೊಂಡೆ. ಈಗ ತುಂಬಾ ಔಷಧಿಯಿದೆ. ಡಾಕ್ಟರ್ ಕುಡಿಯಬಾರದು ಎಂದಿದ್ದಾರೆ. ಕುಡಿಯುತ್ತಿಲ್ಲ’
ಮಾಂಸ ತಿನ್ನುತ್ತೀರಾ? ‘ಹೌದು’ ಯಾವುದೆಲ್ಲ ತಿನ್ನುತ್ತೀರಿ? ‘ಮನುಷ್ಯರು ತಿನ್ನುವಂಥದ್ದನ್ನೆಲ್ಲ ತಿಂದಿದ್ದೇನೆ’ ಈಗಲೂ ತಿಂತೀರಾ? ‘ಹೌದು. ಆದರೆ ಸ್ವಲ್ಪ ಸ್ವಲ್ಪ!’ ಎಂದರು. ಮನೆಯಲ್ಲಿ ಕೂತು ಬೇಜಾರಾಗುವುದಿಲ್ಲವೇ? ‘ಇಲ್ಲಪ್ಪಾ ಹಾಗೇನು ಆಗುವುದಿಲ್ಲ. ಹಗಲಿಡೀ ಕೋಳಿ, ನಾಯಿ, ಬೆಕ್ಕು ಮತ್ತು ಮಗಳಿರುತ್ತಾಳೆ. ಸಂಜೆ ಹೊತ್ತು ಹೊಳೆಯ ದಂಡೆಯಲ್ಲಿ ಕಳೆಯುತ್ತೇನೆ?’ ಎಂದರು. ಈಗ ಆರೋಗ್ಯ ಹೇಗಿದೆ? ‘ಇದೆ ಸುಮಾರಾಗಿ. ಮಾತ್ರೆ ಉಂಟಲ್ಲವಾ, ತೊಂದರೆಯಿಲ್ಲ. ಇನ್ನೊಂದಷ್ಟು ವರ್ಷ ಬದುಕಬಹುದು. ಮತ್ತೆ ಹೋಗುತ್ತೇನಲ್ಲ. ಆಮೇಲೆ ಯಾವ ಚಿಂತೆ?’ ಎಂದರು ನಗುತ್ತ. ಇಲ್ಲ, ನೀವು ಶತಕ ಬಾರಿಸುತ್ತೀರಿ. ಏಕೆಂದರೆ ಅಷ್ಟೊಂದು ಆಪರೇಶನ್ ಆದರೂ ಆರೋಗ್ಯವಾಗಿದ್ದೀರಿ. ನಿಮ್ಮನ್ನು ನೋಡಿದರೆ ಅಷ್ಟೊಂದು ಸಮಸ್ಯೆಗಳಾಗಿವೆ ಅಂತ ಅನ್ನಿಸುವುದೇ ಇಲ್ಲ ಎಂದೆ. ‘ಹೌದು ಹೌದು. ಎಲ್ಲರೂ ಹಾಗೇ ಹೇಳುತ್ತಾರೆ!’ ಎಂದರು. ಅಷ್ಟೊಂದು ಆಪರೇಶನ್, ಅಪಾರ ದೈಹಿಕ ನೋವು, ಆಸ್ಪತ್ರೆ ವಾಸ, ವರ್ಷಾನುಗಟ್ಟಲೆ ಔಷಧಿ ಸೇವನೆ, ಇಷ್ಟವಾದ ಆಹಾರ, ಸಾರಾಯಿ ಎಲ್ಲದರ ತ್ಯಾಗ, ಪಥ್ಯ ಇವೆಲ್ಲ ಯಾವತ್ತಾದರೂ ಜೀವನದಲ್ಲಿ ಜಿಗುಪ್ಸೆ ಮೂಡಿಸಿದ್ದಿದೆಯೇ?
‘ಜಿಗುಪ್ಸೆಯೇನಿಲ್ಲಪ್ಪಾ. ನೋವು ತಿನ್ನುತ್ತಿದ್ದಾಗ ಬೇಸರವಾಗುತ್ತಿತ್ತು. ಆದರೆ ಜೀವದಲ್ಲಿ ಇರುವವರೆಗೆ ಇದೆಲ್ಲ ಸಾಮಾನ್ಯ ಅಲ್ಲವೇ? ಮನುಷ್ಯನೆಂದ ಮೇಲೆ ಕಾಯಿಲೆ, ಕಸಾಲೆಗಳು ಬರದಿರುತ್ತವೆಯೇ? ಹಿಂದೆ ನಾನು ತಿಂದು, ಕುಡಿಯುತ್ತಿದ್ದುದನ್ನು ನೋಡಿದವರೆಲ್ಲ ನಾನು ಇಷ್ಟು ವರ್ಷ ಬದುಕಿದ್ದೇ ಪವಾಡ ಅನ್ನುತ್ತಾರೆ. ಆದರೆ ಹಿಂದೆ ಎಷ್ಟು ಕುಡಿದು, ತಿನ್ನುತ್ತಿದ್ದೆನೋ ಅಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿದ್ದೆ. ಇಷ್ಟೆಲ್ಲ ಹೊಲಗದ್ದೆ, ತೋಟಗಳಲ್ಲಿ ನಾನೊಬ್ಬನೇ ದುಡಿದು ಬೆಳೆಯುತ್ತಿದ್ದ ಕಾಲವೊಂದಿತ್ತು. ಹಾಗಾಗಿ ಇನ್ನೂ ಗಟ್ಟಿಯಾಗಿದ್ದೇನೆ ನೋಡಿ!’ ಎಂದು ನಕ್ಕರು. ಅಕ್ಷರಶಃ ಸತ್ಯವೆನ್ನಿಸಿತು. ‘ನಿಮ್ಮ ವಯಸ್ಸೆಷ್ಟು?’ ಎಂದರು. ಎಷ್ಟಾಗಿರಬಹುದು ಊಹಿಸಿ? ಎಂದೆ. ‘ನನ್ನ ಸಣ್ಣ ಮಗನ ವಯಸ್ಸಿರಬಹುದು’ ಅವನಿಗೆಷ್ಟು? ‘ನಲವತ್ತೊಂಬತ್ತು’ ಎಂದರು. ಅವನಿಗಿಂತ ಸ್ವಲ್ಪ ಹಿರಿಯ ಎಂದೆ ನಗುತ್ತ. ನೀವು ಸುಮಾರು ವರ್ಷಗಳಿಂದ ಕುಡಿಯುತ್ತಿದ್ದವರು. ಒಮ್ಮೆಲೇ ನಿಲ್ಲಿಸಿದಾಗ ಸಮಸ್ಯೆಯಾಗಲಿಲ್ಲವೇ? ಎಂದೆ. ‘ತೊಂದರೆಯಾಗಿತ್ತು. ಡಾಕ್ಟರ್ ಮದ್ದುಕೊಟ್ಟರು. ಬಚಾವಾದೆ. ಆದರೂ ನನ್ನ ದುರಾದೃಷ್ಟ ನೋಡಿ, ನಾನು ಕುಡಿತ ಬಿಟ್ಟ ಮೇಲೆಯೇ ಇಲ್ಲೊಂದು ದೊಡ್ಡ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಆಗ್ತಿದೆಯಂತೆ!’ ಎಂದು ನಕ್ಕರು. ನನಗೆ ಅಚ್ಚರಿಯಾಯಿತು. ಎಲ್ಲಿ? ಎಂದೆ.
‘ಇಲ್ಲೇ, ಈ ಐದಾರು ಗದ್ದೆಗಳಿವೆಯಲ್ಲ ಇದನ್ನು ಉಡುಪಿಯ ಹೊಟೇಲ್ ಮಾಲಕರೊಬ್ಬರು ಕೊಂಡಿದ್ದಾರೆ. ಅವರು, ಹೊಳೆಯ ದಡದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದರೆ ಒಳ್ಳೆಯ ವ್ಯಾಪಾರವಾಗುತ್ತದೆ ಅಂತ ಎಣಿಸಿರಬೇಕು’ ಎಂದು ನಕ್ಕರು. ಮನಸ್ಸು ಮುದುಡಿತು. ಎಂತಹ ಹಚ್ಚಹಸುರಿನ ಆರೋಗ್ಯಪೂರ್ಣ ಪ್ರದೇಶವಿದು! ಇಂಥ ಪರಿಸರವನ್ನು ನಾವು ನಮ್ಮ ಕ್ಷಣಿಕ ಸುಖಭೋಗಗಳಿಗೆ, ಆರೋಗ್ಯ ಕೆಡಿಸಿಕೊಳ್ಳುವ ಮೋಜಿಗೆ ಬಲಿಕೊಡುತ್ತಿದ್ದೇವಲ್ಲ? ಇಪ್ಪತ್ತೊಂದನೇ ಶತಮಾನದ ಆಧುನಿಕರೆನಿಸಿರುವ ನಮ್ಮ ಪ್ರಯಾಣ ಎತ್ತ ಸಾಗುತ್ತಿದೆ, ಮಂದಿರಕ್ಕೋ ಮಸಣಕ್ಕೋ? ಎಂದೆನಿಸಿತು. ಅಷ್ಟರಲ್ಲಿ ಮಳೆ ಪ್ರಾರಂಭವಾಯಿತು. ಹಿರಿಯರಿಗೆ ನಮಸ್ಕರಿಸಿ ವಾಹನ ಹತ್ತಿದೆ.
ಗುರುರಾಜ್ ಸನಿಲ್, ಉಡುಪಿ
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
ನಮಸ್ಕಾರ ಸುನಿಲ್, ನಿಮ್ಮ ಬರಹ ಅದಿಮೂರು ಆಪರೇಷನ್ ಉತ್ತಮ ಲೇಖನವಾಗಿ ಮೂಡಿಬಂದಿದೆ. ಧನ್ಯವಾದಗಳು
ReplyDelete