ಗಣಪತಿ ಬಪ್ಪ ಮೋರಿಯಾ ಪುಡ್ಚ್ಯಾ ವರ್ಷ್ಯಿ ಲೌಕರ್ ಯಾ
✍✍ಅನಿತಾ ಪಿ ತಾಕೊಡೆ
ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಯ ಗೆಜ್ಜೆ ನಾದದಿ ಮುನ್ನುಡಿ ಬರೆಸಿಕೊಂಡ ಹಬ್ಬಗಳ ಸಂಭ್ರಮವು ಈಗ ಗಣೇಶನಿರುವಿನಲ್ಲಿ ಮೇಳೈಸುತ್ತಲಿದೆ. ನಮ್ಮೂರಿನಲ್ಲಿ ಚೌತಿಯ ಹಬ್ಬ ಮೂರು ದಿನ, ಹೆಚ್ಚೆಂದರೆ ಐದು ದಿನಗಳ ಆಚರಣೆಯಿರುತ್ತದೆ. ಆದರೆ ಮುಂಬಯಿಯಲ್ಲಿ ಹನ್ನೊಂದು ದಿನಗಳ ಸಂಭ್ರಮ. ಹಬ್ಬ ಆರಂಭವಾಗುವ ಒಂದು ವಾರದ ಮೊದಲೇ ರಸ್ತೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ಕಾಣುವಾಗ ಹೊರಗಡೆ ಸುತ್ತಾಡುವುದಕ್ಕಿಂತ ಮನೆಯಲ್ಲಿಯೇ ಇರೋಣವೆಂದೆನಿಸುತ್ತದೆ. ಆದರೆ ಮುಂಬಯಿ ನಗರದ ಗಲ್ಲಿ ಗಲ್ಲಿಗಳಲ್ಲಿ, ಮನೆ ಮಂದಿರಗಳಲ್ಲಿ ಲಕ್ಷಕ್ಕೂ ಮೀರಿದ ನಾನಾ ಅವತಾರದಲ್ಲಿರುವ, ವೈವಿಧ್ಯಮಯ ರೂಪಿನಲ್ಲಿ ಕಂಗೊಳಿಸುವ ಗಣಪತಿಯ ದರ್ಶನವನ್ನು ಮಾಡದಿರಲು ಮನಸ್ಸು ಒಪ್ಪದು. ಕೆಲವೊಂದು ಕಡೆ ತಾಸುಗಟ್ಟಲೆ ಹೊತ್ತು ಕ್ಯೂ ನಿಂತಾದರೂ ವಿಘ್ನನಿವಾರಕನ ದರುಶನವನ್ನು ಮಾಡದೆ ಭಕ್ತಾದಿಗಳು ಮನೆಗೆ ಮರಳುವುದಿಲ್ಲ.
ದಾದರ್‌ನ ಸಮೀಪದ ಲಾಲ್‌ಬಾಗ್‌ನಲ್ಲಿ ಇಡಲಾಗುವಂತಹ ಗಣಪತಿ ಮುಂಬಯಿಯಲ್ಲಿ ಪ್ರಮುಖವಾದುದು. ದೂರದೂರಿನಿಂದ ಲಕ್ಷಾನುಗಟ್ಟಲೆ ಜನರು ಅಲ್ಲಿಗೆ ಆಗಮಿಸುತ್ತಾರೆ. ಹರಕೆ ಹೇಳಿದವರು ಎರಡು ಮೂರು ದಿನಗಳ ಕಾಲ ಸಾಲಿನಲ್ಲಿ ನಿಂತಾದರೂ ಸರಿ, ಲಾಲ್‌ಬಾಗ್ ರಾಜನ ಪಾದ ಸ್ಪರ್ಶ ಮಾಡದೆ ಮರಳುವುದಿಲ್ಲ. ದೂರದಿಂದ ಗಣಪನನ್ನು ನೋಡುವುದಾದರೆ ಒಂದೇ ದಿನದಲ್ಲಿ ದರ್ಶನ ಭಾಗ್ಯ ಸಿಗುವುದು. ಪ್ರತಿಷ್ಠಿತ ವ್ಯಕ್ತಿಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ. ವಿಸರ್ಜನೆಯ ಸಂದರ್ಭದಲ್ಲಿ ಪ್ರತಿಯೊಂದು ಕಡೆ ಕೇಳಿ ಬರುವಂತಹ ಕೂಗು “ ಗಣಪತಿ ಬಪ್ಪ ಮೋರಿಯಾ ಪುಡ್ಚ್ಯಾ ವರ್ಷ್ಯಿ ಲೌಕರ್‌ಯಾ” ಭಕ್ತಿ ಭಾವದಿಂದ ಬಗೆ ಬಗೆಯ ಸಿಹಿ ತಿನಿಸು ಫಲ ಪುಷ್ಪ ಅಲಂಕಾರಗಳಿಂದ ಅರ್ಚಿಸಿ ಗಣಪನನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ವಡಾಲ, ಜಿ ಎಸ್ ಬಿ, ಲಾಲ್‌ಬಾಗ್ ಮುಂತಾದೆಡೆ ಇಡಲಾಗುವಂತಹ ಗಣಪತಿಯನ್ನು ಮೆರವಣಿಗೆಯಲ್ಲಿ ವಿಸರ್ಜಿಸುವಂತಹ ಸಂಭ್ರಮದ ಕ್ಷಣಗಳನ್ನು ಸಮೂಹ ಮಾಧ್ಯಮದಲ್ಲಿ ನೋಡಬಹುದು.
ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳಿಂದಲೋ ಅಥವಾ ತಯಾರಿಸುವಂತಹ ವಿನಾಯಕನ ಮೂರ್ತಿ ಹೆಚ್ಚು ಸುಂದರವಾಗಿರಬೇಕೆಂಬ ಹಂಬಲದಿಂದಲೋ, ಕೊಂಡುಕೊಳ್ಳಲೆಂದು ಬರುವ ಜನರನ್ನು ಆಕರ್ಷಿಸುವ ಸಲುವಾಗಿಯೋ ಆವೆ ಮಣ್ಣಿನಲ್ಲಿ ಗಣಪನ ಮೂರ್ತಿಯನ್ನು ತಯರಿಸುವವರ ಸಂಖ್ಯೆ ವಿರಳವಾಗಿದೆ. ಆವೆ ಮಣ್ಣಿನ ಗಣಪತಿ ನೀರಿನಲ್ಲಿ ಸುಲಭವಾಗಿ ಕರಗುವುದು. ಆದರೆ ಈವಾಗ ತಯಾರಿಸಲಾಗುವಂತಹ ಗಣಪತಿ ನೀರಿನಲ್ಲಿ ಕರಗುವ ಬದಲಾಗಿ ತೇಲುತ್ತದೆ. ಕಡಲ ನೀರಿನ ಅಲೆಗಳ ತೆಕ್ಕೆಗೆ ಸಿಲುಕಿ ತುಂಡು ತುಂಡಾದ ಅವಶೇಷಗಳಾಗಿ ತೀರ ಸೇರುತ್ತವೆ. ಇವುಗಳಲ್ಲಿ ಒಂದಿಷ್ಟೂ ನುಜ್ಜು ಗುಜ್ಜಾಗದ ಗಣಪತಿಯ ಮೂರ್ತಿಯನ್ನು, ಬೀದಿಯಲ್ಲಿ ಕಸ ಹೆಕ್ಕುವ ಕೆಲಸ ಮಾಡುವ ಮಕ್ಕಳು ತಮ್ಮ ಗುಡಿಸಲಿಗೆ ತಂದು ಜೋಪಾನವಾಗಿ ಇರಿಸಿಕೊಂಡು ಪೂಜಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಲು ಸಿಗುತ್ತವೆ. ಪತ್ರಿಕೆಗಳಲ್ಲಿಯೂ ಪ್ರಕಟವಾಗುತ್ತವೆ. ಈಗೀಗ ಪರಿಸರ ಕಾಳಜಿಯ ದೃಷ್ಟಿಯಿಂದ ಆವೆ ಮಣ್ಣಿನ ಗಣಪತಿಯನ್ನು ತಯಾರಿಸುವ ನಿಟ್ಟಿನಲ್ಲಿ ಒಲವು ತೋರಿಸುತ್ತಿದ್ದಾರೆ.
ಮಹಾರಾಷ್ಟ್ರೀಯನ್ನರಲ್ಲಿ ಹೆಚ್ಚು ಮಂದಿ ಶ್ರಾವಣ ತಿಂಗಳಿನಲ್ಲಿ ಶುದ್ಧ ಸಸ್ಯಹಾರಿಗಳಾಗಿರುತ್ತಾರೆ. ಪ್ರತಿವರ್ಷ ಒಂದೇ ತಿಂಗಳು ಈ ನಿಯಮವಿದ್ದರೆ ಈ ಬಾರಿ ಎರಡು ತಿಂಗಳುಗಳ ಕಾಲ ಮುಂದುವರಿದಿದೆ. ಈ ಬಾರಿ ಗಣಪತಿ ವಿಸರ್ಜನೆಯ ಕೊನೆಯ ದಿನ ಸೆಪ್ಟೆಂಬರ್ 28ವರೆಗೆ ಈ ಶುದ್ಧಾಚಾರವನ್ನು ಹೆಚ್ಚಿನವರು ಪಾಲಿಸುತ್ತಾರೆ. ದೇವರ ಮೇಲಿರುವ ಭಕ್ತಿ, ಪೂಜೆ ಉಪವಾಸ ಮುಂಬಯಿಯಲ್ಲಿ ಎದ್ದು ಕಾಣುವ ಅಂಶವಾಗಿದೆ. ನಗರ ವಾಸಿಗಳು ಕಾಯಕದಂತೆ ಧಾರ್ಮಿಕ ಶ್ರದ್ಧೆಯನ್ನೂ ಜೊತೆಯಲ್ಲಿ ಕಾಪಿಟ್ಟುಕೊಂಡಿದ್ದಾರೆ. ಮುಂಬಯಿಯಲ್ಲಿ ಕೊರೋನ ಕಾಲದಿಂದ ತಣ್ಣಗಾಗಿದ್ದ ಹಬ್ಬ ಸಡಗರಗಳು ಈಗ ಮತ್ತೆ ಮೊದಲಿನಂತೆ ಮರುಜೀವ ಪಡೆದಿವೆ. ನಗರ ವಾಸಿಗಳ ಸಂಖ್ಯೆಯೂ ಏರುತ್ತಲೆ ಇವೆ.

Post a Comment