ಮುಂಬಯಿ ಮಹಾನಗರದಲ್ಲಿ ಗಣೇಶೋತ್ಸವ ಸಂಭ್ರಮ
--------
ಗಣೇಶ ಉತ್ಸವದ ಭವ್ಯಸಂಭ್ರಮವನ್ನು ನೋಡಲು ಯಾರಾದರೂ ಬಯಸಿದರೆ ಉತ್ತರ ಒಂದೇ- ಮುಂಬೈಗೆ ಭೇಟಿ ನೀಡಬೇಕು. ಇಲ್ಲಿ ನೂರಾರು ಸುಂದರವಾದ ಭವ್ಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿದ್ದು ನಿಮ್ಮನ್ನು ಆಕರ್ಷಿಸದೆ ಇರಲಾರದು.ಇಲ್ಲಿ ಗಣೇಶ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಗಿರ್ಗಾಂವ್ ನ 131 ವರ್ಷದ ಕೇಶವ್ ಜಿ ಚಾಳ್ ಗಣೇಶ ಮಂಡಳಿ ಮುಂಬಯಿಯ ಅತಿ ಹಿರಿಯ ಗಣೇಶ ಮಂಡಳಿಯಾಗಿದೆ.
ಪುಣೆಯಲ್ಲಿ ಗಣೇಶೋತ್ಸವ ಆರಂಭವಾದರೂ ವಿಶೇಷವಾಗಿ ಮುಂಬೈನಲ್ಲಿ ಗಣೇಶ ಉತ್ಸವವು ವಿಭಿನ್ನ ದೃಶ್ಯವನ್ನು ಹೊಂದಿದೆ. ಇಲ್ಲಿ ಡಜನ್ನಿಗೂ ಹೆಚ್ಚಿನ ಪ್ರಖ್ಯಾತ ಸಮುದ್ರ ತೀರಗಳಿವೆ. ಮುಂಬೈನ ಸೌಂದರ್ಯವು ಗಣೇಶ ಉತ್ಸವದ ಸಮಯದಲ್ಲಿ ವೀಕ್ಷಿಸಲು ಇತರ ಸಮಯಕ್ಕಿಂತ ಯೋಗ್ಯವಾಗಿದೆ. ಇಲ್ಲಿ ವಿವಿಧ ಸ್ಥಳಗಳಲ್ಲಿ ಸುಂದರವಾದ ಪೆಂಡಾಲ್ ಗಳನ್ನು ನಿರ್ಮಿಸುತ್ತಾರೆ. ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿ ತನಕ ಆವಾಗ ಇಡೀ ಮುಂಬೈ ವಧುವಿನಂತೆ ಶೃಂಗಾರಗೊಳ್ಳುತ್ತದೆ. ಈ ದಿನಗಳಲ್ಲಿ ಮುಂಬಯಿ ನಗರವು ಭಕ್ತಿಯ ಬಣ್ಣಗಳಿಂದ ಸಂಭ್ರಮ ಕಾಣಿಸುತ್ತದೆ.
ಗಣೇಶೋತ್ಸವವು ದೇಶಾದ್ಯಂತ ಪ್ರಸಿದ್ಧಿ ಪಡೆದರೂ ಮಹಾರಾಷ್ಟ್ರದಲ್ಲಿ ಪ್ರಮುಖ ಹಬ್ಬವಾಗಿದೆ. ಧಾರ್ಮಿಕ ಹಬ್ಬವಾಗಿದ್ದರೂ ಪೌರಾಣಿಕಕ್ಕಿಂತ ಐತಿಹಾಸಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಹಬ್ಬ. ಆದರೆ ಈ ಹಬ್ಬದ ಬೇರುಗಳು ಭಾರತದ ಇತಿಹಾಸಕ್ಕೆ ಸಂಬಂಧಿಸಿವೆ.ಶಿವಾಜಿಯು ಪುಣೆಯಲ್ಲಿ 1630-1680 ರಲ್ಲಿ ಈ ಹಬ್ಬವನ್ನು ಮೊದಲು ಆಚರಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. 18 ನೇ ಶತಮಾನದಲ್ಲಿ, ಪೇಶ್ವೆಯವರು ಕೂಡ ಗಣೇಶನ ಭಕ್ತರಾಗಿದ್ದರು, ಅವರು ಭಾದ್ರಪದ ಮಾಸದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲು ಪ್ರಾರಂಭಿಸಿದ್ದರು. ಆದರೆ ಬ್ರಿಟೀಷ್ ಆಡಳಿತ ಬಂದಾಗ ಗಣೇಶೋತ್ಸವ ಕೆಲಕಾಲ ಸ್ಥಗಿತಗೊಳಿಸಬೇಕಾಯಿತು.ಇದರ ನಂತರ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಈ ಉತ್ಸವವನ್ನು ಪುನರಾರಂಭಿಸಲು ನಿರ್ಧರಿಸಿದರು.1892 ರಲ್ಲಿ ಒಂದು ನಿಯಮದಂತೆ ಬ್ರಿಟಿಷರು ಭಾರತೀಯರನ್ನು ಒಂದೇ ಸ್ಥಳದಲ್ಲಿ ಸೇರಲು ಅನುಮತಿ ನೀಡಿರಲಿಲ್ಲ. ಈ ಉತ್ಸವದ ಮೂಲಕ ಭಾರತೀಯರನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಬಹುದು ಮತ್ತು ಈ ಮೂಲಕ ಸಂಸ್ಕೃತಿಯ ಗೌರವ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಅವರಲ್ಲಿ ತುಂಬಬಹುದು ಎಂದು ತಿಲಕರು ಭಾವಿಸಿದ್ದರು.1893 ರಲ್ಲಿ ಅದನ್ನು ಸಾಕಾರಗೊಳಿಸಿದರು.
ಸ್ಟಡಿ ಆಫ್ ಎನ್ ಏಷ್ಯನ್ ಗಾಡ್‌ನ ಲೇಖಕ ರಾಬರ್ಟ್ ಬ್ರೌನ್, ಬಾಲಗಂಗಾಧರ ತಿಲಕ್ ಅವರು ನಂತರ ತಮ್ಮ ಪತ್ರಿಕೆ ಕೇಸರಿಯಲ್ಲಿ 'ಗಣೇಶ ದೇವರು ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ಹೋಗಲಾಡಿಸುವ ಸೇತುವೆ ಎಂದು ಬಣ್ಣಿಸಿದ್ದಾರೆ' ಎಂದು ಬರೆದಿದ್ದಾರೆ. ತಿಲಕರ ಈ ಚಿಂತನೆಯ ಹಿಂದೆ ಬ್ರಿಟಿಷರ ವಿರುದ್ಧ ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ನೀತಿ ಇತ್ತು.
ಪುಣೆಯಲ್ಲಿ ದೊಡ್ಡ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್ ರು ಆರಂಭಿಸಿದ್ದರು. ಇದು ರಾಷ್ಟ್ರೀಯ ಸ್ವಾತಂತ್ರ್ಯ ಆಂದೋಲನಕ್ಕೆ ಬಲವನ್ನು ನೀಡಿತ್ತು. ಸಾಹಿತ್ಯ, ಕಲೆಗಳಿಗೆ ಅಲ್ಲಿ ಪ್ರೋತ್ಸಾಹ ನೀಡಲಾಯಿತು. ಅಲ್ಲಿ ತಿಲಕರು ನಾಲ್ಕು ಸೂತ್ರಗಳನ್ನು ಅಳವಡಿಸಿದ್ದರು. ಚಿಕ್ಕ ದೊಡ್ಡ ಸ್ವದೇಶಿ ಮಾಲುಗಳ ಪ್ರಚಾರ, ವಿದೇಶಿ ವಸ್ತುಗಳಿಗೆ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣಕ್ಕೆ ಒತ್ತು ಮತ್ತು ಮದ್ಯಪಾನ ನಿಷೇಧ. ಈ ಸಂದೇಶಗಳನ್ನು ಸಾರ್ವಜನಿಕ ಗಣೇಶೋತ್ಸವದ ಮೂಲಕ ಎಲ್ಲರನ್ನೂ ತಲುಪುವಂತೆ ಮಾಡಲಾಗುತ್ತಿತ್ತು.
ಮುಂಬಯಿ ಸಮೀಪದ ಪೇಣ್ ಎಂಬ ಊರಿನ ಗಣಪತಿ ಪ್ರತಿಮೆಗಳನ್ನು ಮುಂಬಯಿಗೆ ತಂದು ಮಾರಾಟ ಮಾಡುವ ಅಂಗಡಿಗಳಲ್ಲಿ ಕಿಕ್ಕಿರಿದ ಭಕ್ತರು. ಕುಟುಂಬ ಸಹಿತ ಅಂಗಡಿಗೆ ಬಂದು ತಮಗೆ ಬೇಕಾದ ಗಣೇಶ ಪ್ರತಿಮೆಗಳನ್ನು ಈಗಾಗಲೇ ಬುಕ್ ಮಾಡಿಡುತ್ತಿದ್ದಾರೆ ಭಕ್ತರು.
ಎಂಭತ್ತರ ದಶಕದ ಆರಂಭದಲ್ಲಿ ನಾನು ಊರಿನಿಂದ ಮುಂಬಯಿಗೆ ಬಂದ ದಿನಗಳಲ್ಲಿ ಮುಂಬಯಿಯ ಗಣೇಶೋತ್ಸವ ನಮಗೊಂದು ವಿಸ್ಮಯವೇ ಆಗಿತ್ತು. ನಾವು ಕೆಲವು ಹುಡುಗರು ಗಣೇಶೋತ್ಸವದ ಆ ಹತ್ತು ದಿನಗಳಲ್ಲಿ ಪ್ರತೀ ವರ್ಷ ಒಂದು ರಾತ್ರಿಯನ್ನು ದಾದರ್,ಲಾಲ್ ಬಾಗ್, ಪರೇಲ್ ಕ್ಷೇತ್ರಗಳ ಗಣಪತಿ ಮಂಡಲಗಳ ಗಣೇಶ ಪ್ರತಿಮೆಗಳ ವೀಕ್ಷಣೆಗೆಂದೇ ಮೀಸಲಿಡುತ್ತಿದ್ದೆವು. ರಾತ್ರಿ ನಮ್ಮ ರೂಮಿನಿಂದ ಹೊರಟರೆ ವಿವಿಧ ಮಂಡಲಗಳ ಗಣಪತಿ ಪ್ರತಿಮೆಗಳನ್ನು ವೀಕ್ಷಿಸಿ ಮರುದಿನ ಬೆಳಗ್ಗಿನ ಲೋಕಲ್ ರೈಲು ಆರಂಭವಾಗುವ ಹೊತ್ತಿಗೆ ವಾಪಸ್ ಹೊರಡುತ್ತಿದ್ದೆವು.
ಇಂದು ಲಾಲ್ ಬಾಗ್ ರಾಜಾನನ್ನು ವೀಕ್ಷಿಸಲು ಆರೇಳು ಗಂಟೆ ಕಾಲವೂ ಭಕ್ತರು ಸರತಿಸಾಲಲ್ಲಿ ನಿಲ್ಲಬೇಕು. ಅದರೆ ಎಂಭತ್ತರ ದಶಕದಲ್ಲಿ ನಾವು ಲಾಲ್ ಬಾಗ್ ರಾಜಾನ ವೀಕ್ಷಣೆಗೆ ವಿಶೇಷ ಲೈನ್ ನಲ್ಲಿ ಬರೇ ಎರಡು ರೂಪಾಯಿ ನೀಡಿ ಹದಿನೈದು ನಿಮಿಷದಲ್ಲೇ ಗಣಪತಿ ದರ್ಶನ ಮಾಡಿ ಬರುತ್ತಿದ್ದುದು ಇಂದಿಗೂ ನೆನಪಾಗುತ್ತದೆ. ಆದರೆ ಇಂದು ಈ ಪರಿಸರದಲ್ಲಿ ಗಣೇಶೋತ್ಸವದ ಸಮಯ ಓಡಾಡಲೂ ಅಸಾಧ್ಯ ಎನ್ನುವಷ್ಟು ಭಕ್ತರ ನೂಕುನುಗ್ಗಲು. ಪೂರಾ ಮುಂಬಯಿ ಇಲ್ಲೇ ಇದೆಯೇನೋ ಎಂಬಂತೆ ಜನರ ಓಡಾಟ. ಅನೇಕರಿಗೆ ಲಾಲ್ ಬಾಗ್ ರಾಜಾ ಗಣಪತಿ ಮೂರ್ತಿಯ ಪಾದಸ್ಪರ್ಶ ಮಾಡುವುದೇ ಪ್ರಮುಖ ಉದ್ದೇಶ. (ಭಕ್ತರು ಪಾದ ಮುಟ್ಟಿ ಮುಟ್ಟಿ ಪಾದ ಸವೆದು ಹೋಗುವ ದೃಶ್ಯಗಳ ನಂತರ ಬೆಳ್ಳಿಯ ಕಾಲು ಇರಿಸಲು ಶುರುಮಾಡಿದರು.)ಇತ್ತೀಚಿನ ಏಳೆಂಟು ವರ್ಷಗಳಲ್ಲಂತೂ( ಕೊರೊನಾ ಕಾಲ ಹೊರತು ಪಡಿಸಿ ) ಲಾಲ್ಬಾಗ್ ಕಾ ರಾಜಾ ಗಣಪತಿಯ ವೀಕ್ಷಣೆ ಮಾಡುವುದೇ ದೊಡ್ಡ ಸವಾಲಾಗುತ್ತಿದೆ ಭಕ್ತರಿಗೆ. ಏಳೆಂಟು ಗಂಟೆ ಸರತಿ ಸಾಲಲ್ಲಿ ನಿಲ್ಲಬೇಕಾದ ಸ್ಥಿತಿಯೂ ಇದೆ.
ಹಾಗೆ ನೋಡಿದರೆ ಮುಂಬಯಿಯಲ್ಲಿ ಭವ್ಯ ಗಣೇಶ ಮಂಡಳಿಗಳು ಅನೇಕ ಇವೆ.ಇವೆಲ್ಲವೂ ಲಾಲ್ ಬಾಗ್ ರಾಜಾನಿಗಿಂತಲೂ ಅಲಂಕಾರಗಳಲ್ಲಿ ಒಂದು ಕೈ ಜಾಸ್ತಿಯೇ ಇರುತ್ತದೆ.
ಮಹಾರಾಷ್ಟ್ರದ ಮಹಾಪರ್ವ ಅಂದರೆ ಹತ್ತು ದಿನಗಳ ಗಣೇಶೋತ್ಸವ. ಪುಣೆ ಮತ್ತು ಮುಂಬೈ ಗಣೇಶೋತ್ಸವಕ್ಕೆ ವಿಶೇಷ ಆಕರ್ಷಣೆ. ಪುಣೆಯಲ್ಲಿ ಪ್ರಥಮ ಸಾರ್ವಜನಿಕ ಗಣೇಶೋತ್ಸವ ದಗಡೂ ಶೇಟ್ ಹಲ್ವಾಯಿ ಗಣೇಶನಿಗೆ ವಿಶೇಷ ಸ್ಥಾನಮಾನ. ಆದರೆ ಡಜನ್‌ಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಿದ್ಧ ಸಮುದ್ರ ತೀರಗಳನ್ನು ಹೊಂದಿರುವ ಮುಂಬೈ ಮಹಾನಗರದಲ್ಲಿನ ಸಾರ್ವಜನಿಕ ಗಣೇಶೋತ್ಸವಕ್ಕೆ ತನ್ನದೇ ಆದ ವೈಭವಗಳಿವೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮುಂಬಯಿಯ ಸಾರ್ವಜನಿಕ ಗಣೇಶೋತ್ಸವದ ಥೀಮ್ ಕೂಡ ಬದಲಾಗಿದೆ. ( ಈ ಬಾರಿ ಚಂದ್ರಯಾನದ ದೃಶ್ಯಗಳು ರಾರಾಜಿಸಿವೆ)
ಮುಂಬೈಯಲ್ಲಿಸಾರ್ವಜನಿಕ ಗಣೇಶೋತ್ಸವಮಂಡಳಿಗಳು ಸುಮಾರು 14 ಸಾವಿರಕ್ಕೂ ಹೆಚ್ಚಿವೆ, ಕೆಲವು ಮಂಡಳಿಗಳು 20ರಿಂದ 25 ಅಡಿ ಎತ್ತರದ ತನಕವೂ ಗಣೇಶನ ಪ್ರತಿಮೆಗಳನ್ನು ಸ್ಥಾಪಿಸುತ್ತಾ ಬಂದಿವೆ.
ಮುಂಬೈಯಲ್ಲಿ ಲಾಲ್ಬಾಗ್ ಚಾ ರಾಜಾ, ಗಣೇಶ ಗಲ್ಲಿಯ ಮುಂಬೈ ಚಾ ರಾಜಾ..... ಗಣೇಶನಿಂದ ಮೊದಲ್ಗೊಂಡು ಚೆಂಬೂರ್‌ನ ಸಹ್ಯಾದ್ರಿ ಕ್ರೀಡಾಮಂಡಳಿ, ಚಿಂಚ್ ಪೋಕ್ಲಿಯ ಸಾರ್ವಜನಿಕ ಗಣಪತಿ, ಕಿಂಗ್ಸ್ ಸರ್ಕಲ್ ನ ಜಿ.ಎಸ್.ಬಿ. ಸೇವಾ ಮಂಡಲದ ಗಣಪತಿ( ಶ್ರೀಮಂತ ಗಣಪತಿ), ಅಂಧೇರಿ ಚಾ ರಾಜಾ, ಖೇತ್ ವಾಡಿಯ ಗಣಪತಿ,ಗಿರ್ಗಾಂವ್ ಗಣಪತಿ...... ಹೀಗೆ ನೂರಾರು ಪ್ರಮುಖ ಗಣೇಶೋತ್ಸವ ಮಂಡಳಿಗಳಿವೆ. ನೂರಾರು 'ರಾಜಾ' ಹೆಸರಿನ ಮಂಡಳಿಗಳ ಗಣಪತಿ ಪ್ರತಿಮೆಗಳು ಭಕ್ತರನ್ನು ಆಕರ್ಷಿಸುತ್ತಾ ಬಂದಿವೆ.ಮುಂಬಯಿಯ ಶ್ರೀಮಂತ ಗಣೇಶ ಎನ್ನಲಾಗುವ ಕಿಂಗ್ಸ್ ಸರ್ಕಲ್ ನ ಜಿ ಎಸ್ ಬಿ ಸೇವಾ ಮಂಡಲದ ಗಣೇಶನಿಗೆ ದಾಖಲೆ ಎನ್ನಲಾಗುವ 300 ಕೋಟಿ ರೂಪಾಯಿಗೂ ಮೀರಿದ ವಿಮೆ ಮಾಡಲಾಗುತ್ತದೆ.
ಲಾಲ್ ಬಾಗ್ ನ ಗಣಪತಿ ಪ್ರತಿಮೆಯು ಅನಂತಚತುರ್ದಶಿಯ ದಿನ ಬೆಳಿಗ್ಗೆ ವಿಸರ್ಜನೆಗೆ ಮೆರವಣಿಗೆಯಲ್ಲಿ ಹೊರಟರೆ ಮರುದಿನ ಮುಂಜಾನೆ ಗಿರ್ಗಾಂವ್ ಚೌಪಾಟಿಗೆ ತಲುಪುವುದು, ಸುಮಾರು 20-22 ಗಂಟೆಗಳ ಕಾಲ ಗಣೇಶನ ಮೆರವಣಿಗೆ, ನಂತರ ವಿಸರ್ಜನೆ. ಅಲ್ಲಿಗೆ ಮುಂಬಯಿಯ ಸಾರ್ವಜನಿಕ ಗಣೇಶೋತ್ಸವ ಗೌಜಿ ಸಮಾಪ್ತಿಯಾಯಿತು ಎಂದರ್ಥ.
ದೇಶ್ ಹೀ ದೇವ್' ಎಂಬುದು ಕಳೆದ ಕೊರೋನಾ ಕಾಲದಲ್ಲಿ ಸ್ಲೋಗನ್ ಆಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಬದಲಿಗೆ ಆವಾಗ ಆರೋಗ್ಯ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು. ಎಲ್ಲ ಗಣೇಶ ಮಂಡಳಿಗಳು ಆರೋಗ್ಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದವು. ಕಳೆದ ವರ್ಷದಿಂದ ಎಂದಿನಂತೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮತ್ತೆ ಆದ್ಯತೆ ನೀಡಲಾಗುತ್ತಿದೆ. ಗಣೇಶೋತ್ಸವ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು 2020-2021 ರಲ್ಲಿ ರದ್ದು ಗೊಂಡಿರುವ ಕಾರಣ ಅನೇಕ ಕಲಾವಿದರು ಸಂಕಷ್ಟ ಅನುಭವಿಸುವಂತಾಗಿತ್ತು. ಕೊರೊನಾದ 20-21ರ ಆ ಎರಡು ವರ್ಷಗಳಲ್ಲಿ ಹಲವಾರು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಹತ್ತು ದಿನದ ಗಣೇಶೋತ್ಸವದ ಬದಲು ಪರಂಪರೆ ನಿಲ್ಲಿಸೋದು ಬೇಡ ಎಂದು ದೀಡ್ ದಿನ್ ಕಾ ಗಣಪತಿ (ಒಂದೂವರೆ ದಿನದ ಗಣಪತಿ ) ಪ್ರತಿಮೆಯನ್ನೇ ಇರಿಸಿದ್ದರು.
ಪೇಣ್ ಗಣಪತಿ: ಮುಂಬೈಗೆ ಸುಮಾರು 80- 90 ಕಿಲೋ ಮೀಟರ್ ದೂರದಲ್ಲಿರುವ ರಾಯಗಢ್ ನ ಪೇಣ್ - ಹಮ್ರಪುರ್ ಊರುಗಳಿಗೆ "ಗಣಪತಿ ಬಪ್ಪನ ಊರು" ಎಂದೇ ಖ್ಯಾತಿ ಇದೆ. ಮುಂಬೈ ಸಹಿತ ವಿಶ್ವದ ಅನೇಕ ದೇಶಗಳಲ್ಲಿ ಪೇಣ್ ನ ಗಣಪತಿ ಪ್ರತಿಮೆಗಳಿಗೆ ಹೆಚ್ಚು ಬೇಡಿಕೆ, ಇಲ್ಲಿ ನ 25,000ಕ್ಕೂ ಹೆಚ್ಚಿನ ಮನೆಗಳಲ್ಲಿ ವರ್ಷವಿಡೀ 30 ಲಕ್ಷಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರುವ ದಾಖಲೆ ಸಿಗುತ್ತದೆ. ವಿದೇಶಗಳಿಗೂ ಇಲ್ಲಿನ ಮೂರ್ತಿಗಳನ್ನು ರಫ್ಪು ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪರಿಸರ ಪ್ರೇಮಿ ಗಣೇಶನನ್ನೇ ಪ್ರತಿಷ್ಠಾಪಿಸುವುದು ಅನೇಕರಿಗೆ ಅನಿವಾರ್ಯವಾಗಿದ್ದು ಇಕೋಫ್ರೆಂಡ್ಲಿ ಗಣೇಶನಿಗೆ ಬೇಡಿಕೆ ಹೆಚ್ಚುತ್ತಿದೆ.
ತೊಂಭತ್ತರ ದಶಕದ ತನಕ ಮುಂಬಯಿ ಗಣೇಶೋತ್ಸವ ಮಂಡಳಿಗಳು ಗುಟ್ಕಾ, ತಂಬಾಕು, ಪಾನ್ ಮಸಾಲಾ ಜಾಹೀರಾತುಗಳನ್ನು ಸ್ವೀಕಾರ ಮಾಡುತ್ತಿತ್ತು.
ನಂತರ ಇವುಗಳನ್ನು ನಿಷೇಧಿಸಲು ಗಣೇಶ ಮಂಡಳಿಗಳ ಒಕ್ಕೂಟ ನಿರ್ಧರಿಸಿತು.
ಇಂದು ಗಣೇಶ ಮಂಡಲಗಳು ಶ್ರಂಗಾರಕ್ಕೆ ಅತಿ ಒಲವು ತೋರಿಸುತ್ತಿವೆ. ಎಂಭತ್ತರ ದಶಕದಿಂದ ಗಣೇಶೋತ್ಸವ ಮಂಡಳಿಗಳು ಜಾಹೀರಾತು ಮಾರುಕಟ್ಟೆಗೆ ಪೂರಕವಾಗಿ ವರ್ತಿಸತೊಡಗಿತ್ತು. ವಿಭಿನ್ನ ಕಂಪೆನಿಗಳು ಇಲ್ಲಿ ಪ್ರವೇಶ ಮಾಡಲು ಮುಂದಾದವು .ತುರ್ತು ಪರಿಸ್ಥಿತಿಯ ನಂತರ ದೊಡ್ಡ ಕಂಪನಿಗಳೂ ಗಣಪತಿ, ಮಂಡಲಗಳ ಜೊತೆಗೂಡಿ ಪ್ರಾಯೋಜಕರಾಗಿ ಕಾಲಿಡತೊಡಗಿದರು. ಅಂತಹ ಕೆಲವು ಗಣೇಶ ಮಂಡಲಗಳ ಹೆಸರೂ ವಿಜೃಂಭಿಸಿದವು ಪ್ರತಿಷ್ಠೆಯೂ ಹೆಚ್ಚಾಯಿತು - ಇಂತಹ ಕೆಲವು ಗಣೇಶ ಮಂಡಲಗಳ ಸದಸ್ಯರಾಗುವುದು ಕೆಲವರಿಗೆ ಸ್ಟೇಟಸ್ ಸಿಂಬಲ್ ಎನಿಸಿಕೊಂಡಿತು.
ಉತ್ತಮ ಸಂದೇಶ ಸಾರುವ, ಪರಿಸರ ಸ್ನೇಹಿ ಪ್ರಚಾರ ಮಾಡಿರುವ ಗಣೇಶ ಮಂಡಲಗಳಿಗೆ ಸ್ಪರ್ಧೆಯೂ ಇದೆ. ಈ ರೀತಿ 1893 ರಲ್ಲಿ ತಿಲಕರು ಎಲ್ಲಾ ಧರ್ಮಗಳು ಮತ್ತು ಪಂಗಡಗಳ ಜನರನ್ನು ಒಗ್ಗೂಡಿಸುವ, ಬ್ರಿಟೀ ಷರ ಅನ್ಯಾಯದ ವಿರುದ್ಧ ಜನರನ್ನು ಎತ್ತುವ ಮತ್ತು ಸಾಮಾಜಿಕ ಸಾಂಸ್ಕೃತಿಕ ಜಾಗೃತಿಯನ್ನು ತರುವ ಪ್ರಮುಖ ಮಾಧ್ಯಮವಾಗಿ ಮಾಡಿದರು. ಈ ಹಬ್ಬದಲ್ಲಿ ಎಲ್ಲ ಧರ್ಮದವರು ಭಾಗವಹಿಸುತ್ತಾರೆ. ಹತ್ತು ದಿನಗಳ ಉತ್ಸವದ ಕೊನೆಯ ದಿನ ಅನಂತ ಚತುರ್ದಶಿಯಂದು ವಿಗ್ರಹವನ್ನು ನೀರಲ್ಲಿ ವಿಸರ್ಜಿಸಲಾಗುತ್ತದೆ. ‘ಗಣಪತಿ ಬಪ್ಪಾ ಮೋರ್ಯಾ....' ಎಂಬ ಘೋಷಣೆಯೊಂದಿಗೆ ಗಣಪತಿಯ ಬೀಳ್ಕೊಡುಗೆಯ ಸಂಭ್ರಮ ಮತ್ತೆ ಮುಂದಿನ ವರ್ಷ ಬೇಗನೆ ಬಾ ಎನ್ನುವ ಹಾರೈಕೆಯೊಂದಿಗೆ ಮುಗಿಯುತ್ತದೆ.
ಶ್ರೀನಿವಾಸ ಜೋಕಟ್ಟೆ
--------













Post a Comment