ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ


ಭಾರತದಲ್ಲಿ ಹತ್ತಿ ಮತ್ತು ಭತ್ತ ಕೃಷಿಯಲ್ಲಿ ಕ್ರಾಂತಿಯನ್ನು ತಂದು  ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಚೆನ್ನೈನಲ್ಲಿ ಗುರುವಾರ ನಿಧನರಾದರು. 


ಮಣ್ಕೊಂಬು ಸಾಂಬಸಿವನ್ ಸ್ವಾಮಿನಾಥನ್ ಅವರು 1925ರ ಆ. 7ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದರು. ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಅವರು ಭಾರತದ ಕೃಷಿ ಉತ್ಪನ್ನಗಳ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆ ಉತ್ತಮಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು ‘ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಎಂದು ಬಣ್ಣಿಸಿದೆ. 1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.


ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಬಹುಮಾನ ಲಭಿಸಿತ್ತು. ಅದರಿಂದ ಬಂದ ಹಣದಲ್ಲಿ ಅವರು ಚೆನ್ನೈನಲ್ಲಿ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಆರಂಭಿಸಿದರು. 1971ರಲ್ಲಿ ರೇಮನ್ ಮ್ಯಾಗ್ಸೆಸೆ ಹಾಗೂ 1986ರಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿ 1989ರಲ್ಲಿ ಪದ್ಮವಿಭೂಷಣ ಪ್ರಶಸಿ  ಅವರಿಗೆ ಲಭಿಸಿದೆ.







No comments

Powered by Blogger.