ವಿಶ್ವಕಪ್ ಹಿನ್ನೋಟ -1975


Photo: ವಿಶ್ವಕಪ್ ಟ್ರೋಫಿಯೊಂದಿಗೆ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್

----------------------
ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ
----------------------------

1975 - ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಮೊದಲ್ಗೊಂಡ ವರ್ಷ . ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸಿದ ಚೊಚ್ಚಲ ಏಕದಿನ ವಿಶ್ವಕಪ್  ಟೂರ್ನಿ 1975ರ ಜೂನ್  7 ರಿಂದ  21ರ ವರೆಗೆ ಕ್ರಿಕೆಟ್ ಜನಕರ ನಾಡೆಂದು ಖ್ಯಾತಿ ಪಡೆದ ಇಂಗ್ಲೆಂಡಿನಲ್ಲಿ ನಡೆಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿಗೆ ವೇದಿಕೆಯನ್ನು ನಿರ್ಮಿಸಿದ್ದು  ಪ್ರುಡೆನ್ಷಿಯಲ್ ಅಶ್ಯೂರೆನ್ಸ್ ಕಂಪನಿ . ಹಾಗಾಗಿ ಈ ವಿಶ್ವಕಪ್ ಟೂರ್ನಿಯನ್ನು   'ಪ್ರುಡೆನ್ಷಿಯಲ್ ವಿಶ್ವಕಪ್ ' ಎಂದು ಅಧಿಕೃತವಾಗಿ ಕರೆಯಲಾಯಿತು.





ಟೆಸ್ಟ್ ಆಡುತ್ತಿದ್ದ   ಐಸಿಸಿ ಸಂಸ್ಥೆಯ ಸದಸ್ಯ ರಾಷ್ಟ್ರಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ , ವೆಸ್ಟ್ ಇಂಡೀಸ್ , ಪಾಕಿಸ್ತಾನ ಹಾಗೂ ಟೆಸ್ಟ್ ಆಡದ  ಶ್ರೀಲಂಕಾ, ಪೂರ್ವ ಆಫ್ರಿಕಾ ತಂಡಗಳಿಗೆ ಮೊದಲ ವಿಶ್ವಕಪ್ ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿತ್ತು. ಈ ಎಂಟು ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಯಿತು. 'ಎ' ಬಣದಲ್ಲಿ ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಹಾಗೂ ಪೂರ್ವ ಆಫ್ರಿಕಾ . ' ಬಿ' ಬಣದಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ತಲಾ 60 ಓವರ್ ಗಳಲ್ಲಿ ಲೀಗ್ ಮಾದರಿಯ ಪಂದ್ಯಗಳನ್ನು ಆಡಿತ್ತು.





ಮೊದಲ ಮುಖಾಮುಖಿ : ಭಾರತ ಮೊದಲ ವಿಶ್ವಕಪ್ ನಲ್ಲಿ ತನ್ನ ಮೊದಲ ಪಂದ್ಯವನ್ನು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ಜೂನ್ -7ರಂದು ಆಡಿತು. ಈ ಪಂದ್ಯ ವಿಶ್ವಕಪ್ ಕ್ರಿಕೆಟ್ ಚರಿತ್ರೆಯ ಪ್ರಪ್ರಥಮ ಪಂದ್ಯ . ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಿ 60 ಓವರಿನಲ್ಲಿ 4 ವಿಕೆಟ್ ಕಳೆದುಕೊಂಡು 334 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಆರಂಭಿಕ ದಾಂಡಿಗ ಡೆನ್ನಿಸ್ ಅಮಿಸ್ ಆಕರ್ಷಕ 137 ರನ್ ಬಾರಿಸಿ, ವಿಶ್ವಕಪ್ ನಲ್ಲಿ ಮೊದಲ ಶತಕ ದಾಖಲಿಸಿ ಕೊಂಡರು.ಅದುವರೆಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಹೆಚ್ಚಿನ ಅನುಭವ ಇಲ್ಲದ ಭಾರತದ ಬ್ಯಾಟ್ಸ್ ಮನ್ ಗಳು ಪೂರ್ಣವಾಗಿ 60 ಓವರ್ ಆಡಲು ಮಾತ್ರ ಯಶಸ್ವಿಯಾಯಿತು. ಈ 60 ಓವರಿನಲ್ಲಿ ಭಾರತ ಗಳಿಸಿದ್ದು ಕೇವಲ 132 ರನ್ ಮಾತ್ರ ! ಆರಂಭಿಕ ದಾಂಡಿಗನಾಗಿ ಕಣಕ್ಕಿಳಿದ ಸುನಿಲ್ ಗವಾಸ್ಕರ್ 174 ಎಸೆತಗಳನ್ನು ಎದುರಿಸಿ ಗಳಿಸಿದ್ದು ಅಜೇಯ 36ರನ್ . ಗವಾಸ್ಕರ್ ಈ ಕಳಪೆ ಇನ್ನಿಂಗ್ಸ್  ವಿಶ್ವಕಪ್ ಕ್ರಿಕೆಟ್ ನಲ್ಲಿ ಶಾಶ್ವತ ದಾಖಲೆಯಾಗಿ  ಉಳಿದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ 202 ರನ್ ಗಳ ಭರ್ಜರಿ ಜಯ ಪಡೆಯಿತು.




ಭಾರತ ಗೆದ್ದ ಮೊದಲ ಪಂದ್ಯ : ಭಾರತ ಈ ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಕೂಡ ಏಕೈಕ ಗೆಲುವು ದಾಖಲಿಸಿದೆ. ಜೂನ್ -11ರಂದು ಹೆಡಿಂಗ್ಲೆಯಲ್ಲಿ  ನಡೆದ ಪಂದ್ಯದಲ್ಲಿ ಪೂರ್ವ ಆಫ್ರಿಕಾ ವಿರುದ್ಧ ಭಾರತ ಜಯ ಗಳಿಸಿದೆ. ಭಾರತದ ವೇಗದ ಬೌಲಿಂಗಿಗೆ ತತ್ತರಿಸಿದ ಪೂರ್ವ ಆಫ್ರಿಕಾ 120ರನ್ನಿಗೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ಭಾರತ 29.5 ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳದೆ ಗೆಲುವು ಪಡೆಯಿತು.  ಗವಾಸ್ಕರ್ ಹಾಗೂ ಫಾರೂಕ್ ಇಂಜಿನಿಯರ್ ಶತಕದ ಜೊತೆಯಾಟವನ್ನು ವಿಶ್ವಕಪ್ ಟೂರ್ನಿಯಲ್ಲಿ ದಾಖಲಿಸಿದರು. ಅಜೇಯ 54 ರನ್ ಬಾರಿಸಿದ ಫಾರೂಕ್ ಇಂಜಿನಿಯರ್ ಪಂದ್ಯಶ್ರೇಷ್ಠರಾದರು.





ಸೆಮಿಫೈನಲ್ : ಮೊದಲ ಸೆಮಿಫೈನಲ್ ಪಂದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಿತು. ಆಸ್ಟ್ರೇಲಿಯಾದ ಫಾಸ್ಟ್  ಬೌಲರ್ ಗಿಲ್ ಮೋರ್ ದಾಳಿಗೆ ಇಂಗ್ಲೆಂಡ್ ತಂಡ ತತ್ತರಿಸಿ 93 ರನ್ನಿಗೆ ಆಲೌಟಾಯಿತು.  ಆಸ್ಟ್ರೇಲಿಯಾ ಈ ಸುಲಭ ಗುರಿಯನ್ನು 28.4 ಓವರಿನಲ್ಲಿ  ಚೇಸ್ ಮಾಡಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಫೈನಲಿಗೆ ಪ್ರವೇಶಿಸಿತು . 14 ರನ್ನಿಗೆ 6 ವಿಕೆಟ್ ಪಡೆದ ಗಿಲ್ ಮೋರ್ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತು. ವಿಂಡೀಸ್ ದೈತ್ಯ ಬೌಲರ್ ಗಳ ಅಟ್ಟಹಾಸಕ್ಕೆ ಮಣಿದ ನ್ಯೂಜಿಲೆಂಡ್ 158 ರನ್ನಿಗೆ ಸರ್ವಪತನ ಕಂಡಿತು.  ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 40.1ಓವರಿನಲ್ಲಿ 5 ವಿಕೆಟ್ ಕಳೆದುಕೊಂಡು 159ರನ್ ಗಳಿಸಿ ವಿಜಯ ಸಾಧಿಸಿತು. ಗಾರ್ಡನ್ ಗ್ರೀನಿಚ್ (55ರನ್ ) ಹಾಗೂ ಆಲ್ವಿನ್ ಕಾಳಿಚರಣ್ (72ರನ್) ಆಕರ್ಷಕ ಅರ್ಧಶತಕ ಬಾರಿಸಿದರು.




ಐತಿಹಾಸಿಕ ಫೈನಲ್ ಪಂದ್ಯ:  'ಕ್ರಿಕೆಟ್ ಕಾಶಿ ' ಲಾರ್ಡ್ಸ್ ಮೈದಾನದಲ್ಲಿ ಜೂನ್ -21ರಂದು ನಡೆದ ಫೈನಲ್ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಅವರ ಸಿಡಿಲಬ್ಬರದ ಶತಕದ (102ರನ್) ನೆರವಿನಿಂದ 60 ಓವರ್ ಗಳಲ್ಲಿ 8 ವಿಕೆಟಿಗೆ 291 ರನ್ ಕಲೆಹಾಕಿತು. ವೆಸ್ಟ್ ಇಂಡೀಸ್ ತಂಡದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದ ಆರಂಭಿಕ ದಾಂಡಿಗರು ಜಾಗರೂಕತೆಯಿಂದ ಇನ್ನಿಂಗ್ಸ್ ಆರಂಭಿಸಿದರು. ಆದರೆ, ವೆಸ್ಟ್ ಇಂಡೀಸ್ ತಂಡದ ಅತ್ಯುತ್ತಮ ಕ್ಷೇತ್ರರಕ್ಷಣೆ ಹಾಗೂ ಬೌಲರ್ ಗಳ  ಕರಾರುವಾಕ್ಕಾದ ಬೌಲಿಂಗ್ ನಿಂದ ಆಸ್ಟ್ರೇಲಿಯಾ 274 ರನ್ನಿಗೆ ಆಲೌಟಾಗಿ 17 ರನ್ ಅಂತರದ ಸೋಲನ್ನು ಅನುಭವಿಸಿತು. ನಾಯಕ ಕ್ಲೈವ್ ಲಾಯ್ಡ್ ಅವರ ಆಲ್ರೌಂಡರ್ ಸಾಧನೆಯಿಂದ ವೆಸ್ಟ್ ಇಂಡೀಸ್ ಚೊಚ್ಚಲ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು.


No comments

Powered by Blogger.